SUDDIKSHANA KANNADA NEWS/ DAVANAGERE/ DATE:24-03-2025
ಬೆಂಗಳೂರು: ಸಂವಿಧಾನ ತಿದ್ದುಪಡಿ ಮಾಡ್ತೇವೆಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಹೇಳಿದ್ದಾರೆ ಎನ್ನಲಾದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಇದು ಬಿಜೆಪಿಗೆ ಅಸ್ತ್ರವಾದರೆ, ಸಿಎಂ ಸಿದ್ದರಾಮಯ್ಯ ಬಣಕ್ಕೆ ಫುಲ್ ಖುಷಿ ಕೊಟ್ಟಿದೆ.
ಸಿದ್ದರಾಮಯ್ಯರ ಬಣದಲ್ಲಿ ಹೆಚ್ಚಾಗಿ ಎಸ್ಸಿ, ಎಸ್ಟಿ ಶಾಸಕರು, ಸಚಿವರು ಇದ್ದಾರೆ. ಮಾತ್ರವಲ್ಲ, ಸಚಿವ ಕೆ. ಎನ್. ರಾಜಣ್ಣ, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮೇಲೆ ಹನಿಟ್ರ್ಯಾಪ್ ಯತ್ನ ಕೇಸ್ ದೇಶಾದ್ಯಂತ ಸಂಚಲನ
ಸೃಷ್ಟಿಸಿದೆ. ಬಿಜೆಪಿ ಶಾಸಕ ಮುನಿರತ್ನ ಅವರಂತೂ ಡಿಕೆಶಿಯದ್ದೇ ಕೈವಾಡ ಎಂದು ನೇರವಾಗಿ ಆರೋಪ ಮಾಡಿದ್ದಾರೆ. ಈ ಕಿಚ್ಚು ಇನ್ನೂ ಆರುವ ಮುನ್ನವೇ ಡಿಕೆಶಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಭಾರತದ ಸಂವಿಧಾನ ತಿದ್ದುಪಡಿ ಮಾಡ್ತೇವೆಂಬ ಹೇಳಿಕೆ ನೀಡಿದ್ದಾರೆ ಎಂಬುದು ಬಿಜೆಪಿ ಆರೋಪ. ಲೋಕಸಭೆಯಲ್ಲಿಯೂ ಈ ವಿಚಾರ ಪ್ರತಿಧ್ವನಿಸಿ ಕೋಲಾಹಲ ಸೃಷ್ಟಿಸಿದೆ. ಈ ನಡುವೆ ಬಿಜೆಪಿಯಂತೂ ಹೊಸ ರಾಜಕೀಯ ದಾಳವನ್ನಾಗಿಸಿಕೊಂಡಿದೆ.
ಸಿಎಂ ಖುರ್ಚಿ ಮೇಲೆ ಕಣ್ಣಿಟ್ಟಿದ್ದ ಡಿ. ಕೆ. ಶಿವಕುಮಾರ್ ದಾಳ ಉರುಳಿಸುತ್ತಲೇ ಬಂದಿದ್ರು. ಈ ಬೆಳವಣಿಗೆ ನಡುವೆ ಸಿದ್ದರಾಮಯ್ಯರ ಆಪ್ತ ಬಣಕ್ಕೆ ಹೊಸ ಅಸ್ತ್ರ ಸಿಕ್ಕಂತಾಗಿದೆ. ಈ ಹೇಳಿಕೆಯಿಂದ ಅಂತರ ಕಾಯ್ದುಕೊಂಡರೂ ಡಿಕೆಶಿ ಪ್ರಕರಣಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರೂ ಸದ್ಯಕ್ಕಂತೂ ತಣ್ಣಗಾಗುವ ಲಕ್ಷಣ ಗೋಚರಿಸುತ್ತಿಲ್ಲ.
ಈ ವಿಚಾರ ಹೆಚ್ಚು ಪ್ರಚಾರ ಪಡೆದರೆ ಡಿಕೆ ಶಿವಕುಮಾರ್ ಸಿಎಂ ಆಗುವ ಕನಸಿಗೆ ತಣ್ಣೀರು ಎರಚಬಹುದು ಎಂಬುದು ಸಿದ್ದರಾಮಯ್ಯರ ಆಪ್ತ ಬಣದ ಲೆಕ್ಕಾಚಾರ. ಹಾಗಾಗಿ, ಈ ವಿಚಾರ ಕುರಿತಂತೆ ಹೆಚ್ಚು ಪ್ರಚಾರ ನೀಡುವ ಜೊತೆಗೆ ಡಿ. ಕೆ. ಶಿವಕುಮಾರ್ ಬಲ ಹೀನರಾಗಿಸುವ ಕುರಿತಂತೆ ಸ್ಕೆಚ್ ರೆಡಿ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.