SUDDIKSHANA KANNADA NEWS/ DAVANAGERE/ DATE:12-03-2024
ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನೀಡುವಂತೆ ಈಗ ಒತ್ತಾಯ ಕೇಳಿ ಬರಲಾರಂಭಿಸಿದೆ. ಇಷ್ಟು ದಿನ ಸುಮ್ಮನಿದ್ದ ಕಾಂಗ್ರೆಸ್ ನ ಮುಖಂಡರು ಹಾಗೂ ಜನಪ್ರತಿನಿಧಿಗಳು ಈಗ ಸಭೆ ನಡೆಸಿ ಒತ್ತಾಯ ಮಾಡಿರುವುದು ಕುತೂಹಲ ಕೆರಳಿಸಿದೆ.
ಲೋಕಸಭಾ ಚುನಾವಣೆಗೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಹೆಸರು ಮುಂಚೂಣಿಯಲ್ಲಿದೆ. ಹೈಕಮಾಂಡ್ ಮಟ್ಟದಲ್ಲಿಯೂ ಚರ್ಚೆಯಾಗಿದೆ. ರಾಜ್ಯ ಸ್ಕ್ರೀನಿಂಗ್ ಕಮಿಟಿಯಲ್ಲಿಯೂ ಸಮಾಲೋಚನೆ ನಡೆಸಲಾಗಿದೆ. ಜೊತೆಗೆ ಕಾಂಗ್ರೆಸ್ ಯುವ ನಾಯಕ ವಿನಯ್ ಕುಮಾರ್ ಅವರೂ ಸಹ ಟಿಕೆಟ್ ಗೆ ಪ್ರಯತ್ನಿಸುತ್ತಿದ್ದಾರೆ. ಇನ್ನೆರಡು ದಿನಗಳಲ್ಲಿ ಟಿಕೆಟ್ ಘೋಷಣೆಯಾಗುವ ಸಾಧ್ಯತೆ ಇದೆ. ಆದ್ರೆ, ಇಷ್ಟು ದಿನಗಳವರೆಗೆ ಸುಮ್ಮನೆ ಇದ್ದ ಕಾಂಗ್ರೆಸ್ ನ ಮುಖಂಡರು, ಜನಪ್ರತಿನಿಧಿಗಳು ಇದ್ದಕ್ಕಿದ್ದಂತೆ ಸೋಮವಾರ ಸಭೆ ನಡೆಸಿದ್ದಾರೆ.
ಸೋಮವಾರ ಸಂಜೆ ಸಭೆ ಸೇರಿದ್ದ ಕಾಂಗ್ರೆಸ್ ನ 200 ಕ್ಕೂ ಹೆಚ್ಚು ಕಾಂಗ್ರೆಸ್ ಪದಾಧಿಕಾರಿಗಳು, ವಿವಿಧ ಘಟಕಗಳ ಅಧ್ಯಕ್ಷರು, ಜನಪ್ರತಿನಿಧಿಗಳು ಸಭೆ ಸೇರಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯ ಮಾಡಿದ್ದರು. ಮತ್ತೊಂದು ಕುತೂಹಲದ ಸಂಗತಿ ಎಂದರೆ ಬೆಂಗಳೂರಿನಲ್ಲಿ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ದಾವಣಗೆರೆ ಅಭ್ಯರ್ಥಿ ಫೈನಲ್ ಮಾಡುತ್ತಿದ್ದರೆ, ಇತ್ತ ದಾವಣಗೆರೆಯಲ್ಲಿ ಸಭೆ ನಡೆಸಿರುವ ಕಾಂಗ್ರೆಸ್ ಮುಖಂಡರು, ಜನಪ್ರತಿನಿಧಿಗಳು, ವಿವಿಧ ಘಟಕಗಳ ಅಧ್ಯಕ್ಷರು ಕೇಂದ್ರದ ವರಿಷ್ಠರನ್ನು ಭೇಟಿಯಾಗೋಣ ಎಂಬ ಮಾತು ಆಡಿರುವುದು ಆಶ್ಚರ್ಯವೇ ಸರಿ.
ಮೊದಲಿನಿಂದಲೂ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಹೆಸರು ಮುಂಚೂಣಿಯಲ್ಲಿದೆ. ರಾಜ್ಯ ಮಟ್ಟ, ದೆಹಲಿ ಮಟ್ಟದಲ್ಲಿಯೂ ಚರ್ಚೆಯಾಗಿದೆ. ಅಂತಿಮವಾಗಿ ಟಿಕೆಟ್ ಘೋಷಣೆಯೊಂದೇ ಬಾಕಿ ಉಳಿದಿದೆ. ಇಂಥ ವೇಳೆಯಲ್ಲಿ ಸಭೆ ನಡೆಸಿರುವ ಕಾಂಗ್ರೆಸ್ ಮುಖಂಡರು ಒತ್ತಾಯ ಮಾಡಿದ್ದಾರೆ.
ಪ್ರಭಾ ಮಲ್ಲಿಕಾರ್ಜುನ್ ಅವರು ಕಳೆದ 20 ವರ್ಷಗಳಿಂದಲೂ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದಾರೆ. ಪ್ರತಿಯೊಂದು ಚುನಾವಣೆಗಳಲ್ಲಿಯೂ ಪಕ್ಷದ ಪರ ಪ್ರಚಾರ ನಡೆಸಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಂತೂ ಮನೆ ಮನೆಗೆ ಭೇಟಿ ನೀಡಿ ಮತದಾರರ ಮನ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದರಲ್ಲದೇ, ಪತಿ ಎಸ್. ಎಸ್. ಮಲ್ಲಿಕಾರ್ಜುನ್ ಹಾಗೂ ಮಾವ ಶಾಮನೂರು ಶಿವಶಂಕರಪ್ಪರ ಗೆಲುವಿಗೆ ಶ್ರಮಿಸಿದ್ದರು. ಪ್ರಚಾರವನ್ನೂ ಬಿರುಸುಗೊಳಿಸಿ ಮತದಾರರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
ಎಸ್. ಎಸ್. ಕೇರ್ ಟ್ರಸ್ಟ್ ಮೂಲಕ ಉಚಿತ ಆರೋಗ್ಯ ತಪಾಸಣೆ, ಕ್ಯಾನ್ಸರ್ ಕಾಯಿಲೆ ಬಗ್ಗೆ ಜನರು ಹಾಗೂ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಶ್ರಮಿಸಿದ್ದಾರೆ. ಜನರ ಆರೋಗ್ಯ ದೃಷ್ಟಿಯಿಂದ ಎಲ್ಲಾ ವಾರ್ಡ್ ಗಳಲ್ಲಿಯೂ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸುವ ಮೂಲಕ ಜನರಿಗೆ ಹತ್ತಿರವಾಗಿದ್ದಾರೆ. ಬಡವರು, ಬಡವರ ಮಕ್ಕಳಿಗೆ ನೆರವಾಗಿದ್ದಾರೆ. ಎಲ್ಲರ ಜೊತೆಯೂ ಅವರ ಸಿಂಪ್ಲಿಸಿಟಿ ಮೆಚ್ಚುಗೆಗೆ ಪಾತ್ರವಾಗಿದೆ. ದಾವಣಗೆರೆ ಜಿಲ್ಲೆಯಿಂದ ಪ್ರಭಾ ಮಲ್ಲಿಕಾರ್ಜುನ್ ಅವರು ಸ್ಪರ್ಧೆ ಮಾಡಿದರೆ ಗೆಲುವು ಖಚಿತ. ಹಾಗಾಗಿ, ಅವರಿಗೆ ಟಿಕೆಟ್ ನೀಡಬೇಕೆಂದು ಸಭೆಯಲ್ಲಿ ಒತ್ತಾಯಿಸಲಾಗಿದೆ.
ದಾವಣಗೆರೆ ನಗರ ಮಾತ್ರವಲ್ಲ, ಜಿಲ್ಲೆಯಾದ್ಯಂತ ಪರಿಚಯವಿರುವ ಮುಖ. ಪ್ರಭಾ ಮಲ್ಲಿಕಾರ್ಜುನ್ ಅವರು, ಸಾರ್ವಜನಿಕ ಜೀವನದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ದಾವಣಗೆರೆಯಲ್ಲಿ ಇಲ್ಲದ ವೇಳೆಯಲ್ಲಿ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಕಷ್ಟಗಳನ್ನು ಪರಿಹರಿಸುತ್ತಿದ್ದಾರೆ. ಅಲ್ಲಿಯೇ ಬಗೆಹರಿಯುವ ಸಮಸ್ಯೆಗಳನ್ನು ಪರಿಹರಿಸುತ್ತಿದ್ದು, ಜನರ ಮನ ಗೆದ್ದಿದ್ದಾರೆ. ಸಾಮಾಜಿಕ ಕಾರ್ಯಗಳ ಮೂಲಕವೂ ಚಿರಪರಿಚಿತರಾಗಿದ್ದಾರೆ. ಎಸ್. ಎಸ್. ಮಲ್ಲಿಕಾರ್ಜುನ್
ಹಾಗೂ ಶಾಮನೂರು ಶಿವಶಂಕರಪ್ಪರು ಅವರಿಗೆ ಟಿಕೆಟ್ ನೀಡುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರಬೇಕು ಎಂದು ಮನವಿ ಮಾಡಲಾಗಿದೆ.
ಸಭೆಯಲ್ಲಿ ಕೆಪಿಸಿಸಿ ಸದಸ್ಯ ಗಿರೀಶ್ ಮುದ್ದೇಗೌಡ್ರು, ನಿಟುವಳ್ಳಿ ಆರ್ ಶೇಖರಪ್ಪ, ಮಹಾನಗರ ಪಾಲಿಕೆ ಮೇಯರ್ ವಿನಾಯಕ್ ಪೈಲ್ವಾನ್, ಸದಸ್ಯರಾದ ಪಾಮೇನಹಳ್ಳಿ ನಾಗರಾಜ್, ಅಬ್ದುಲ್ ಲತೀಫ್, ನಾಗರಾಜ್, ಉದಯಕುಮಾರ್, ಜಾಕೀರ್ ಆಲಿ, ಸೈಯದ್ ಚಾರ್ಲಿ, ಆಶಾ ಉಮೇಶ್, ಕಬೀರ್ ಖಾನ್, ಮೀನಾಕ್ಷಿ ಜಗದೀಶ್, ಗಣೇಶ ಹುಲ್ಮನಿ, ಸುಷ್ಮಾ ಪಾಟೀಲ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆಯೂಬ್ ಪೈಲ್ವಾನ್, ಇಟ್ಟಿಗುಡಿ ಮಂಜುನಾಥ್, ಎಸ್. ಮಲ್ಲಿಕಾರ್ಜುನ್, ಆರ್.
ಎಚ್. ನಾಗಭೂಷಣ್, ಆಮ್ ಆದ್ಮಿ ಪಕ್ಷದ ಮಾಜಿ ಅಧ್ಯಕ್ಷ ರಾಘವೇಂದ್ರ, ಮಂಗಳಮ್ಮ, ಎಸ್. ಶೇಖರಪ್ಪ, ಬಿ. ಹೆಚ್. ವೀರಭದ್ರಪ್ಪ ಮತ್ತಿತರರು ಪಾಲ್ಗೊಂಡಿದ್ದರು.