SUDDIKSHANA KANNADA NEWS/ DAVANAGERE/ DATE:11-04-2025
ಬೆಂಗಳೂರು: ಮಹಿಳೆಯರಿಗೆ ಶಕ್ತಿ ತುಂಬುತ್ತೇವೆ ಎಂದು ಅಧಿಕಾರಕ್ಕೆ ಬಂದ ಭ್ರಷ್ಟ ಹಾಗೂ ಭಂಡ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ರಕ್ಷಣೆ ನೀಡಿದ್ದಕ್ಕಿಂತಲೂ, ಮಹಿಳೆಯರ ಮಾನಹರಣ ಮಾಡಿದ್ದೆ ಜಾಸ್ತಿ ಎಂದು ಬಿಜೆಪಿ ರಾಜ್ಯ ಘಟಕ ಆಕ್ರೋಶ ವ್ಯಕ್ತಪಡಿಸಿದೆ.
ಗೃಹ ಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ಮಹಿಳೆಯರಿಗೆ ತಪ್ಪದೆ ₹2000 ಹಣ ನೀಡುತ್ತೇವೆಂದು ಹೇಳಿ ಈಗ ಪ್ರತಿ ತಿಂಗಳು ನೀಡಲು ಅದು ಸಂಬಳವಾ ಎಂದು ಭಂಡತನದಿಂದ ಮರುಪ್ರಶ್ನೆ ಹಾಕುತ್ತಿದೆ. ಇದು ಕಾಂಗ್ರೆಸ್ ಮಹಿಳೆಯರ ಮೇಲೆ ತೋರುತ್ತಿರುವ ಅಸಲಿ ಕಾಳಜಿ ಹಾಗೂ ಗೌರವ!! ಎಂದು ಕಿಡಿಕಾರಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಕರ್ನಾಟಕದಲ್ಲಿ ಮಹಿಳೆಯರಿಗೆ ರಕ್ಷಣೆ ಎಂಬುದು ಮರೀಚಿಕೆಯಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ತವರು ಜಿಲ್ಲೆ ಬೆಳಗಾವಿಯ ವಂಟಮೂರಿಯಲ್ಲಿ ಪರಿಶಿಷ್ಟ
ಸಮುದಾಯಕ್ಕೆ ಸೇರಿದ ಮಹಿಳೆಯನ್ನು ಸಂಪೂರ್ಣ ವಿವಸ್ತ್ರಗೊಳಿಸಿ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದರು. ಆದರೆ ಆ ಹೀನ ಕೃತ್ಯವೆಸಗಿದ ಆರೋಪಿಗಳನ್ನು ಭ್ರಷ್ಟ ಕಾಂಗ್ರೆಸ್ ಸರ್ಕಾರ ಕೇವಲ ನಾಮಕಾವಸ್ಥೆಗೆ ಬಂಧಿಸಿತೇ ಹೊರತು ನೊಂದ ಮಹಿಳೆ ಮತ್ತವರ ಕುಟುಂಬಕ್ಕೆ ನ್ಯಾಯ ದೊರಕಿಸಲಿಲ್ಲ. ಮನುಕುಲವೇ ತಲೆತಗ್ಗಿಸುವಂತಹ ಬೆಳಗಾವಿಯ ಘಟನೆ ಮಾಸುವ ಮುನ್ನವೇ ಹಾನಗಲ್ ನಲ್ಲಿ ಅಲ್ಪಸಂಖ್ಯಾತ ಮಹಿಳೆಯ ಮೇಲೆ ಮತಾಂಧ ಜಿಹಾದಿಗಳಿಂದ ಸಾಮೂಹಿಕ ಅತ್ಯಾಚಾರ ನಡೆಯಿತು. ಆ ಮಹಿಳೆಯ ಮೇಲೆ ಜಿಹಾದಿಗಳು ಹಲ್ಲೆ ಮಾಡುವ ವಿಡಿಯೋ ಸಾಕ್ಷಿ ದೊರೆತರೂ ಮಹಿಳೆಯ ದೂರನ್ನು ಸ್ವೀಕರಿಸಲು ಸಹ ಮಹಿಳಾ ವಿರೋಧಿ ಕಾಂಗ್ರೆಸ್ ಸರ್ಕಾರ ಹಿಂದು ಮುಂದು ನೋಡಿತು ಎಂದು ಆರೋಪಿಸಿದೆ.
ಉಡುಪಿಯಲ್ಲಿ ಹಿಂದೂ ಹೆಣ್ಣು ಮಕ್ಕಳು ಶೌಚಾಲಯಕ್ಕೆ ತೆರಳಿದಾಗ, ಅಲ್ಲಿ ಜಿಹಾದಿಗಳು ಕ್ಯಾಮೆರಾ ಇಟ್ಟು ರಹಸ್ಯ ವಿಡಿಯೋ ಸೆರೆಹಿಡಿದಿದ್ದು ಆಕಸ್ಮಿಕ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ದೃಷ್ಟಿಯಲ್ಲಿ ಮಕ್ಕಳಾಟ!! ಬೆಂಗಳೂರಿನ ನಡುರಸ್ತೆಗಳಲ್ಲಿ ದುರುಳರು ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದರೆ ಅದು ಮಾಮೂಲಿ ಎಂದು ತೇಪೆ ಹಚ್ಚುತ್ತಾರೆ ಗೃಹ ಸಚವರು. ಒಟ್ಟಿನಲ್ಲಿ ಮಹಿಳೆಯರಿಗೆ ಕರ್ನಾಟಕ ಸುರಕ್ಷಿತವಲ್ಲ ಎಂಬುದನ್ನು ಮಹಿಳಾ ವಿರೋಧಿ ಕಾಂಗ್ರೆಸ್ ಸರ್ಕಾರ ಸಾಬೀತುಪಡಿಸುತ್ತಿದೆ ಎಂದು ದೂರಿದೆ.
ಪ್ರಣಾಳಿಕೆಯಲ್ಲಿ ಅಂಗನವಾಡಿ, ಆಶಾ, ಅಕ್ಷರ ದಾಸೋಹ ಕಾರ್ಯಕರ್ತೆಯರಿಗೆ ಸಂಬಳ ಹೆಚ್ಚಿಸುತ್ತೇವೆಂದು ಹೇಳಿದ್ದಷ್ಟೇ..ಇದುವರೆಗೂ ಪ್ರಣಾಳಿಕೆಯಲ್ಲಿ ಘೋಷಣೆಯಾಗಿದ್ದ ಯೋಜನೆಗಳು ಕಾರ್ಯರೂಪಕ್ಕೆ ಬಂದಿಲ್ಲ. ಕಾಡಿನಲ್ಲಿದ್ದ ನಕ್ಸಲರು ಶರಣಾಗುತ್ತಾರೆ ಎಂದ ತತಕ್ಷಣ ಅವರನ್ನು ದೂರದ ಮೂಡಿಗೆರೆಯಿಂದ ಜೀರೋ ಟ್ರಾಫಿಕ್ನಲ್ಲಿ ಗೃಹ ಕಚೇರಿ ಕೃಷ್ಣಾಗೆ ಕರೆಸಿಕೊಂಡ ಸಿಎಂ ಸಿದ್ದರಾಮಯ್ಯ ಅವರಿಗೆ, ವಿಧಾನಸೌಧದ ಕೂಗಳತೆ ದೂರದಲ್ಲಿ ಹಗಲಿರುಳು ಪ್ರತಿಭಟಿಸುತ್ತಿದ್ದ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಕೂಗು ಮಾತ್ರ ಕೇಳಿಸಲೇ ಇಲ್ಲ ಎಂದು ಕಿಡಿಕಾರಿದೆ.
ಮಹಿಳೆಯರನ್ನು ಕಾಲಕಸಕ್ಕಿಂತಲೂ ಕೀಳಾಗಿ ನೋಡುತ್ತಿರುವ ಈ ಮಹಿಳಾ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ನಮ್ಮ ಜನಾಕ್ರೋಶ ಯಾತ್ರೆ ರಾಜ್ಯಾದ್ಯಂತ ಆರ್ಭಟಿಸಲಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಎಚ್ಚರಿಕೆ ನೀಡಿದೆ.