ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಕ್ಕೆ ಕಾಂಗ್ರೆಸ್ ಶಾಸಕ ಅಸಮಾಧಾನ!

On: June 25, 2025 6:21 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE-25-06-2025

ದಾವಣಗೆರೆ: ಅಧಿಕಾರಿಗಳ ಬೇಜವಾಬ್ದಾರಿ, ಆಗಾಗ ಭೇಟಿ ನೀಡಿ ಶಿಕ್ಷಕರಿಗೆ ಎಚ್ಚರಿಕೆ ನೀಡದ ಪರಿಣಾಮ ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಗೋಪನಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದ ಅವರು, ಒಂದೇ ಸೂರಿನಡಿ ಎಲ್ ಕೆಜಿ ತರಗತಿಯಿಂದ ಪಿಯುಸಿವರೆಗೂ ಶಾಲೆ ಮತ್ತು ಕಾಲೇಜು ಇದೆ. ಆದರೆ ಮಕ್ಕಳ ಸಂಖ್ಯೆಯಲ್ಲಿ ಕೊರತೆ ಇದೆ. ಡಿಡಿಪಿಐ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪಿಯು ಡಿಡಿ ಆಗಾಗ ಶಾಲೆ ಮತ್ತು ಕಾಲೇಜುಗಳಿಗೆ ಭೇಟಿ ನೀಡಿ, ಮಕ್ಕಳ ಹಾಜರಾತಿ ಹೆಚ್ಚಳಕ್ಕೆ ಆಂದೋಲನ, ಶಾಲಾ ಫಲಿತಾಂಶ ಹೆಚ್ಚಳಕ್ಕೆ ಶಿಕ್ಷಕರು ಕೈಗೊಳ್ಳುವ ಕಾರ್ಯ ಚಟುವಟಿಕೆ, ಒಂದು ವೇಳೆ ಒಳ್ಳೆಯ ಫಲಿತಾಂಶ ಬಾರದಿದ್ದರೆ ಶಿಕ್ಷಕರಿಗೆ ಎಚ್ಚರ ವಹಿಸುವ ಕ್ರಮ, ಶಾಲಾ ಹಾಗೂ ಕಾಲೇಜು ಅಭಿವೃದ್ಧಿಗೆ ಕ್ರಮ.. ಹೀಗೆ ಒಟ್ಟಾರೆ ಮೂಲಸೌಲಭ್ಯ ಕಲ್ಪಿಸಿ ಶೈಕ್ಷಣಿಕ ಸರ್ವಾಂಗೀಣ ಅಭಿವೃದ್ಧಿಗೆ ಅಧಿಕಾರಿಗಳು ಮುಂದಾಗದಿರುವುದೇ ಇವತ್ತು ಮಕ್ಕಳ ಸಂಖ್ಯೆಯ ಕೊರತೆ ಆಗಲು ಕಾರಣವಾಗುತ್ತಿದೆ ಎಂದು ಅಭಿಪ್ರಾಯಿಸಿದರು.

ಗ್ರಾಮದಲ್ಲಿ ಎಲ್ ಕೆಜಿಯಿಂದ ಪಿಯುಸಿವರೆಗೆ ಸರ್ಕಾರಿ ಶಾಲಾ, ಕಾಲೇಜು ಇದ್ದರೂ ಇಂದು ಮಕ್ಕಳು ಖಾಸಗಿ ಶಾಲಾ, ಕಾಲೇಜು ಹಾಗೂ ನಗರ ಪ್ರದೇಶಕ್ಕೆ ಹೋಗುತ್ತಿದ್ದಾರೆ ಎಂದರೆ ಅಧಿಕಾರಿಗಳು ಮತ್ತು ಶಿಕ್ಷಕರ ಬೇಜವಾಬ್ದಾರಿ, ಶಿಕ್ಷಣಕ್ಕೆ
ಒತ್ತು ನೀಡದಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ. ಸರ್ಕಾರ ಮಕ್ಕಳ ಶಿಕ್ಷಣಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿದೆ. ಆದರೆ ಅದನ್ನು ದುರುಪಯೋಗ ಮಾಡಿಕೊಂಡರೆ ಸರ್ಕಾರದ ಹಣ ಪೋಲಾಗುತ್ತದೆ. ಈ ಬಗ್ಗೆ ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಕ್ಕಳಿಗೆ ವಾರಕ್ಕೆ ಆರು ಮೊಟ್ಟೆ ಕೊಡುತ್ತಿದೆ. ಆದರೆ ಇಲ್ಲಿ ಎರಡ್ಮೂರು ಮೊಟ್ಟೆ ಕೊಡಲಾಗುತ್ತದೆ ಎಂದು ಮಕ್ಕಳು ದೂರುತ್ತಾರೆ. ಇದೇ ಒಂದೇ ಶಾಲೆಯಲ್ಲ, ಬಹುತೇಕ ಸರ್ಕಾರಿ ಶಾಲೆಗಳಲ್ಲಿ ಇದೇ ಪರಿಸ್ಥಿತಿ ಇದೆ. ಸರ್ಕಾರ ಮಕ್ಕಳ ಆರೋಗ್ಯ ದೃಷ್ಟಿಯಿಂದ ಮಕ್ಕಳಿಗೆ ಪೌಷ್ಟಿಕ ಆಹಾರ ಕೊಡುತ್ತಿದೆ. ನೀವು ಅದನ್ನೇ ಸರಿಯಾಗಿ ಕೊಡದಿದ್ದರೆ ಹೇಗೆ ಎಂದು ಪ್ರಶ್ನಿಸಿದ ಅವರು, ಇನ್ನು ಮುಂದೆ ಇಂತಹ ದೂರುಗಳು ಬಂದರೆ ಸಂಬಂಧಿಸಿದ ಮುಖ್ಯ ಶಿಕ್ಷಕರ ವಿರುದ್ಧ
ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಆಂದೋಲನ ಮೂಲಕ ಶಾಲಾ ಮತ್ತು ಕಾಲೇಜಿನಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಿಕೊಳ್ಳುವ ಮೂಲಕ ಸರ್ಕಾರಿ ಶಾಲೆ ಹಾಗೂ ಕಾಲೇಜುಗಳನ್ನು ಉಳಿಸಿ ಬೆಳೆಸಬೇಕು. ಇಲ್ಲದಿದ್ದರೆ ಉಳಿಸಿಕೊಳ್ಳಲು ಕಷ್ಟವಾಗುತ್ತದೆ ಎಂದು ಗ್ರಾಮಸ್ಥರು ಮತ್ತು ಶಿಕ್ಷಕರಿಗೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಬಸವರಾಜಪ್ಪ, ಲಿಂಗರಾಜಣ್ಣ, ನೂರುಲ್ಲ, ರಾಮಚಂದ್ರಪ್ಪ, ಸುರೇಶಣ್ಣ, ಮಲ್ಲಿಕಾರ್ಜುನಯ್ಯ, ಲಿಂಗರಾಜ್, ರವಿ, ಅಂಜಿನಪ್ಪ, ಶೇಖರಪ್ಪ, ಪ್ರಾಢಶಾಲೆ ಮುಖ್ಯ ಶಿಕ್ಷಕ ನಾಗರಾಜ್, ಕಾಲೇಜು ಪ್ರಾಂಶುಪಾಲರಾದ ಸಿದ್ದಲಿಂಗಪ್ಪ, ರಾಮಜ್ಜ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸರ್ಕಾರಿ ಪ್ರೌಢಶಾಲೆಯ 8,9 ಹಾಗೂ 10ನೇ ತರಗತಿಗಳಿಗೆ ಭೇಟಿ ನೀಡಿದ ಶಾಸಕ ಕೆ. ಎಸ್ ಬಸವಂತಪ್ಪ, ಮಕ್ಕಳ ಹಾಜರಾತಿ, ಶಿಕ್ಷಣ ಗುಣಮಟ್ಟ ಹಾಗೂ ಅಕ್ಷರ ದಾಸೋಹ ಹಾಗೂ ಇತರೆ ಆಗು ಹೋಗುಗಳ ಬಗ್ಗೆ ಶಿಕ್ಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು. ಬಳಿಕ ಎಚ್ .ಬಸಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕ ಕೆ. ಎಸ್ ‌‌.ಬಸವಂತಪ್ಪ, ಮಕ್ಕಳೊಂದಿಗೆ ಸಮಾಲೋಚನೆ ನಡೆಸಿದರು.

 

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment