SUDDIKSHANA KANNADA NEWS/ DAVANAGERE/ DATE:26-03-2025
ದಾವಣಗೆರೆ: ಯುಗಾದಿ ಮತ್ತು ರಂಜಾನ್ ಹಬ್ಬ ಆಚರಣಾ ಸಂದರ್ಭದಲ್ಲಿ ಸಡಗರ, ಶಾಂತಿ, ಸೌಹಾರ್ದತೆಯನ್ನು ಮೆರೆಯಬೇಕು, ಆದರೆ ಶಾಂತಿ ಕದಡುವ ಕೆಲಸಕ್ಕೆ ಕೈಹಾಕಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ತಿಳಿಸಿದರು.
ಅವರು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ನಡೆದ ಯುಗಾದಿ ಮತ್ತು ರಂಜಾನ್ ಹಬ್ಬದ ಪ್ರಯುಕ್ತ ಏರ್ಪಡಿಸಲಾದ ನಾಗರಿಕ ಸೌಹಾರ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಅಧಿಕಾರಿಗಳು ಸಹ ನಮ್ಮ ಧರ್ಮ, ಸಮುದಾಯದವರು ಎಂಬ ಕಾರಣಕ್ಕೆ ಯಾರನ್ನು ರಕ್ಷಿಸಬಾರದು, ಯಾರೇ ತಪ್ಪು ಮಾಡಿದರೂ ಎಲ್ಲರನ್ನು ಒಂದೇ ದೃಷ್ಟಿಯಲ್ಲಿ ನೋಡಿ ಕ್ರಮ ಕೈಗೊಳ್ಳಬೇಕು. ಕೆಲವು ಕಿಡಿಗೇಡಿಗಳು ವೈಯಕ್ತಿಕ ಕಲಹ ಅಥವಾ ಸಣ್ಣ ಘಟನೆಗಳನ್ನು ದೊಡ್ಡದಾಗಿ ಬಿಂಬಿಸಿ ಸಾಮರಸ್ಯ ಕದಡುವಂತಹ ಕೆಲಸ ಮಾಡುವವರ ಬಗ್ಗೆ ಸಮುದಾಯದವರೇ ಮಾಹಿತಿ ನೀಡದರೆ ಹಬ್ಬ ಮತ್ತಷ್ಟು ಶಾಂತಿಯುತವಾಗಿ ಆಚರಿಸಲು ಸಹಕಾರಿಯಾಗುತ್ತದೆ. ಎಲ್ಲಾ ಸಮುದಾಯದವರು ಒಂದೇ ತಾಯಿ ಮಕ್ಕಳಂತೆ ಶಾಂತಿ, ಸೌಹಾರ್ದತೆಯಿಂದ ಹಬ್ಬ ಆಚರಿಸಬೇಕು ಎಂದು ಮನವಿ ಮಾಡಿದರು.
ಮುಸ್ಲಿಂ ಸಮುದಾಯದ ಮುಖಂಡರೊಬ್ಬರು ಮಾತನಾಡಿ, ನಗರದಲ್ಲಿ ಇಲ್ಲಿಯವರೆಗೂ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಿಲ್ಲ. ನಾವು ಕೂಡ ಸದಾ ಇಲಾಖೆ ಜೊತೆಗೆ ಕೈ ಜೋಡಿಸುತ್ತೇವೆ ಎಂದು ವಾಗ್ದಾನ ನೀಡಿದರು.
ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಮಾತನಾಡಿ ಯುಗಾದಿ ಹಬ್ಬ ಮಾರ್ಚ್ 30 ರಂದು ಹಾಗೂ ರಂಜಾನ್ ಹಬ್ಬ ಮಾರ್ಚ್ 31 ರಂದು ನಡೆಯಲಿದೆ. ಈ ಎರಡು ಹಬ್ಬಗಳು ಬಹಳ ವಿಶೇಷವಾಗಿದ್ದು ಯುಗಾದಿ ಮರುದಿನ ರಂಜಾನ್ ಬರುವುದರಿಂದ ಯುಗಾದಿ ಹೊಸ ವರ್ಷ ಹಬ್ಬ ಆಚರಿಸಿ ಚಂದ್ರನನ್ನು ನೋಡಲಾಗುತ್ತದೆ. ರಂಜಾನ್ ಹಬ್ಬವನ್ನು ಚಂದ್ರ ದರ್ಶನ ನಂತರ ಆಚರಿಸಲಾಗುತ್ತದೆ. ಆದ್ದರಿಂದ ಈ ಎರಡೂ ಹಬ್ಬಗಳು ಬಹಳ ಪವಿತ್ರವಾಗಿವೆ ಎಂದರು.
ಈ ಹಬ್ಬಗಳನ್ನು ಶಾಂತಿಯುತವಾಗಿ, ಸಡಗರಿಂದ ಆಚರಿಸಬೇಕಾಗಿದೆ. ಈ ವೇಳೆ ಎಲ್ಲರೂ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕು. ಈ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ಎಲ್ಲಾ ಪೊಲೀಸ್ ಠಾಣೆಗಳಲ್ಲೂ ಸೌಹಾರ್ದ ಸಭೆ ನಡೆಸಿ ತಿಳುವಳಿಕೆ ಮೂಡಿಸಲಾಗುತ್ತದೆ. ಹಬ್ಬದ ವೇಳೆ ಸಾರ್ವಜನಿಕ ಶಾಂತಿ ಕದಡುವ ಕೆಲಸಕ್ಕೆ ಕೈಹಾಕಿದಲ್ಲಿ ಅಂತಹ ಜನರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಯಾವುದೇ ಸಮುದಾಯದ ಯುವಕರು ಸಾಮಾಜಿಕ ಜಾಲತಾಣದಲ್ಲಿ ಅನ್ಯ ಕೋಮಿನ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕುವಂತಿಲ್ಲ. ಹಾಗೆಯೇ ಹಬ್ಬದ ಸಮಯದಲ್ಲಿ ಯುವಕರು ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸದೇ ನಿಯಮಾನುಸಾರ ವಾಹನ ಚಲಾಯಿಸಬೇಕು. ಜಿಲ್ಲೆಯಲ್ಲಿ ಯಾವುದೇ ರೀತಿ ಅಹಿತಕರ ಘಟನೆಗಳು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ಯಾವುದೇ ರೀತಿಯ ಘಟನೆಗಳು ನಡೆಯದಂತೆ ಇಲಾಖೆ ವತಿಯಿಂದ ಸೂಕ್ತ ಕ್ರಮ ವಹಿಸಲಾಗುವುದು. ಒಟ್ಟಾರೆ ಹಬ್ಬಗಳು ಶಾಂತಿಯುತವಾಗಿ ಆಚರಿಸಬೇಕು ಎಂಬುದೇ ಈ ಸಭೆಯ ಆಶಯವಾಗಿದೆ ಎಂದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ್ ಎಂ ಸಂತೋಷ್, ಮಂಜುನಾಥ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಮುತೇಶ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಸಮುದಾಯದ, ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.