SUDDIKSHANA KANNADA NEWS/ DAVANAGERE/ DATE:19-03-2025
ದಾವಣಗೆರೆ: ಕಳೆದ ಮಳೆಗಾಲದ ಹಂಗಾಮಿನಲ್ಲಿ ಬೆಳೆದ ರಾಗಿ(Millet)ಯನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮಾರಾಟ ಮಾಡಲು ನೋಂದಾಯಿಸಿ 3 ತಿಂಗಳಾದ್ರೂ ಖರೀದಿ ಪ್ರಕ್ರಿಯೆ ಪ್ರಾರಂಭಿಸಿಲ್ಲ ಎಂದು ರೈತ (Farmer) ಮುಖಂಡರಾದ ಕೊಳೇನಹಳ್ಳಿ ಬಿ ಎಂ ಸತೀಶ್ ಮತ್ತು ಮೆಳ್ಳೆಕಟ್ಟೆ ಎ.ಈ.ನಾಗರಾಜುರವರು ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿಯವರನ್ನು ಭೇಟಿ ಮಾಡಿ ದೂರು ಸಲ್ಲಿಸಿದರು.
ಜಿಲ್ಲಾಧಿಕಾರಿಯವರು ಖರೀದಿ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದಾಗ ರೈತರು ಆಕ್ರೋಶಗೊಂಡು ನೀವು ಖರೀದಿ ಕೇಂದ್ರಕ್ಕೆ ಬಂದು ನೋಡಿ ಎಂದರು. ತಕ್ಷಣ ಜಿಲ್ಲಾಧಿಕಾರಿಯವರು ನಡೆಯಿರಿ ಹೋಗೋಣ ಎಂದು ರೈತರೊಂದಿಗೆ ರಾಗಿ ಖರೀದಿ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿದರು.
ಜಿಲ್ಲೆಯಲ್ಲಿ ಕ್ವಿಂಟಾಲ್ ಒಂದಕ್ಕೆ ₹4290.00 ದರದಂತೆ 8363 ಕ್ವಿಂಟಾಲ್ ರಾಗಿ ಮಾರಾಟ ಮಾಡಲು 457 ರೈತರು ನೋಂದಾಯಿಸಿದ್ದಾರೆ. ಆದ್ರೂ ಖರೀದಿ ಪ್ರಕ್ರಿಯೆ ನಡೆಯದಿರುವುದನ್ನು ತಿಳಿದ ಅವರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಸಿದ್ದರಾಮ ಮರಿಯಾಳ, ವ್ಯವಸ್ಥಾಪಕ ಮಹೇಂದ್ರ ಪಟೇಲ್ ಮತ್ತು ಖರೀದಿ ಕೇಂದ್ರದ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ನೀವು ನನಗೆ ಖರೀದಿ ನಡೆಯುತ್ತಿರುವುದಾಗಿ ಸುಳ್ಳು ಮಾಹಿತಿ ನೀಡಿದ್ದೀರಿ. ರೈತರನ್ನು ಸತಾಯಿಸುವ ನಿಮ್ಮ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
Read Also This Story: ಆರುಂಡಿ ಗ್ರಾಮಕ್ಕೆ ಅಧಿಕಾರಿಗಳ ಭೇಟಿ: ಅಕ್ರಮ ಗಣಿಗಾರಿಕೆ, ಕ್ರಷರ್ ಸ್ಥಗಿತಕ್ಕೆ ಜಿ. ಬಿ. ವಿನಯ್ ಕುಮಾರ್ ಆಗ್ರಹ
ನಾನು ಜಿಲ್ಲಾಧಿಕಾರಿ ಜೊತೆಗೆ ಎಪಿಎಂಸಿ ಆಡಳಿತಾಧಿಕಾರಿ ಮತ್ತು ಕನಿಷ್ಠ ಬೆಂಬಲ ಯೋಜನೆ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಛೇರ್ಮನ್ ಇದ್ದೇನೆ. ನೀವು ನನಗೆ ತಪ್ಪು ಮಾಹಿತಿ ನೀಡಿದ್ದೀರಿ. ಹೀಗಾಗಿ ಇಂದೇ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ನಾಳೆಯಿಂದ ಖರೀದಿ ಪ್ರಕ್ರಿಯೆ ನಡೆಯಬೇಕು. ಖರೀದಿ ಕೇಂದ್ರದಲ್ಲಿ ರೈತರಿಗೆ ಸೂಕ್ತ ಮೂಲಸೌಕರ್ಯ ಕಲ್ಪಿಸಬೇಕು. ರೈತರನ್ನು ಅನಾವಶ್ಯಕವಾಗಿ ಅಲೆದಾಡಿಸಬಾರದು ಎಂದು ತಾಕೀತು ಮಾಡಿದರು.
ಜಿಲ್ಲಾಧಿಕಾರಿಯವರು ನಿರ್ಗಮಿಸಿದ ನಂತರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಸಿದ್ದರಾಮ ಮರಿಯಾಳರವರು ರೈತ ಮುಖಂಡರಾದ ಕೊಳೇನಹಳ್ಳಿ ಬಿ ಎಂ ಸತೀಶ್ ಮತ್ತು ಮೆಳ್ಳೆಕಟ್ಟೆ ಎ.ಈ.ನಾಗರಾಜರವರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ 1 ಲಕ್ಷದ 80 ಸಾವಿರ ಕ್ವಿಂಟಲ್ ಅಕ್ಕಿಯನ್ನು ಇದೆ ತಿಂಗಳೊಳಗೆ ಪಡಿತರ ಚೀಟಿದಾರರಿಗೆ ಹಂಚಿಕೆ ಮಾಡಬೇಕು. ಅಕ್ಕಿ ಭಾರತೀಯ ಆಹಾರ ನಿಗಮದಿಂದ ಜಿಲ್ಲೆಯ ಗೋದಾಮಿಗೆ, ಜಿಲ್ಲಾ ಗೋದಾಮಿನಿಂದ ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ತಲುಪಿಸಿ, ಅಲ್ಲಿಂದ ಪಡಿತರ ಚೀಟಿದಾರರಿಗೆ ಹಂಚಿಕೆ ಮಾಡಬೇಕು. ಇದರಿಂದ ನಮ್ಮ ಮೇಲೆ ಬಹಳಷ್ಟು ಕಾರ್ಯಭಾರ ಇದೆ. ರೈತರು ಸುಧಾರಿಸಿಕೊಳ್ಳಬೇಕು. ಮಾರ್ಚ್ ಅಂತ್ಯದೊಳಗೆ ನೋಂದಾಯಿಸಿಕೊಳ್ಳುವ ರೈತರ ರಾಗಿಯನ್ನು ಜೂನ್ 30 ರೊಳಗೆ ಖರೀದಿಸಲು ದಿನಾಂಕ ಮುಂದೂಡಿ ಸರ್ಕಾರ ಆದೇಶ ಮಾಡಿದೆ ಎಂದು ಹೇಳಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಸಿದ್ದರಾಮ ಮರಿಯಾಳರವರನ್ನು ತರಾಟೆಗೆ ತೆಗೆದುಕೊಂಡು ರೈತರ ಸಂಕಷ್ಟಕ್ಕೆ ಧಾವಿಸುವಂತೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿಯವರು ತಾಕೀತು ಮಾಡಿದರು.