SUDDIKSHANA KANNADA NEWS/ DAVANAGERE/ DATE:28-01-2025
ದಾವಣಗೆರೆ: ಜಿಲ್ಲಾಡಳಿತ ಭವನಕ್ಕೆ ಸಾಕಷ್ಟು ಸಾರ್ವಜನಿಕರು ಆಗಮಿಸುವುದರಿಂದ ಅವರಿಗೆ ಬೇಕಾದ ಉಪಹಾರ, ಊಟ, ಕಾಫಿ, ಟೀ ಯನ್ನು ಪಡೆಯಲು ಗುಣಮಟ್ಟ ಹಾಗೂ ಶುಚಿತ್ವ, ರಿಯಾಯಿತಿ ದರದಲ್ಲಿ ನೀಡಲು ಕ್ಯಾಂಟೀನ್ ಆರಂಭಿಸಬೇಕೆಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಸಲಹೆ ನೀಡಿದರು.
ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ದಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ದಿಶಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಪರ ಜಿಲ್ಲಾಧಿಕಾರಿ ಅವರು ಶೀಘ್ರದಲ್ಲಿಯೇ ಆರಂಭಿಸಲಾಗುತ್ತದೆ ಎಂದು ತಿಳಿಸಿದರು.
ಎಲ್ಲೆಂದರಲ್ಲಿ ಕಸ ಹಾಕುವುದು ನಿಯಂತ್ರಿಸಿ; ದಾವಣಗೆರೆ ನಗರ ಸೇರಿದಂತೆ ಜಿಲ್ಲೆಯ ಪಟ್ಟಣ, ಗ್ರಾಮಾಂತರ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಕಸ ಹಾಕುವುದನ್ನು ತಡೆಗಟ್ಟುವ ಮೂಲಕ ನೈರ್ಮಲ್ಯತೆಯನ್ನು ಕಾಪಾಡಿಕೊಳ್ಳಬೇಕು. ಎಲ್ಲೆಂದರಲ್ಲಿ ಕಸ ಹಾಕುವುದನ್ನು ತಡೆಗಟ್ಟಲು ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು. ನಗರ, ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಮನೆಯಲ್ಲಿನ ಹಸಿ-ಒಣ ಕಸ ಸಂಗ್ರಹಣೆ ಮಾಡಲು ವಾಹನಗಳನ್ನು ನೀಡಿದ್ದು ಸರಿಯಾಗಿ ಸಂಗ್ರಹಣೆ ಮಾಡುವ ಮೂಲಕ ಇದರ ವಿಂಗಡಣೆಯನ್ನು ಸಕಾಲದಲ್ಲಿ ಕೈಗೊಂಡು ಅವರಗೆರೆಯಲ್ಲಿ ಘನತ್ಯಾಜ್ಯ ಸಂಗ್ರಹ ಘಟಕದಲ್ಲಿ ಪದೇ ಪದೇ ಬೆಂಕಿ
ಕಾಣಿಸಿಕೊಳ್ಳುತ್ತಿದ್ದು ಈಗಾಗದಂತೆ ವಿಂಗಡಣೆ ಮಾಡಿ ವಿಲೆಗೆ ಕ್ರಮ ವಹಿಸಲು ಸೂಚನೆ ನೀಡಿದರು.
ನಾಯಿಗಳ ಸಂತಾನ ನಿಯಂತ್ರಣಕ್ಕೆ ಕ್ರಮ:
ನಾಯಿಗಳ ಹಾವಳಿಯನ್ನು ತಡೆಗಟ್ಟಲು ಈಗಾಗಲೇ ಪಾಲಿಕೆ ವ್ಯಾಪ್ತಿಯಲ್ಲಿ ನಾಯಿಗಳ ಸಂತಾನ ನಿಯಂತ್ರಣಕ್ಕಾಗಿ ಎಬಿಸಿ ಚಿಕಿತ್ಸೆ ಮಾಡಿದ್ದು ಗ್ರಾಮಾಂತರ ಪ್ರದೇಶದಲ್ಲಿಯು ಇದನ್ನು ಕೈಗೊಳ್ಳಬೇಕು. ಗ್ರಾಮಾಂತರ ಪ್ರದೇಶದಲ್ಲಿಯು ಇವುಗಳ ನಿಯಂತ್ರಣ ಮಾಡಬೇಕಾಗಿದ್ದು ಆರಂಭಿಕವಾಗಿ ಸಂತೆಬೆನ್ನೂರಿನಲ್ಲಿ ನಾಯಿಗಳ ಸಂತಾನ ನಿಯಂತ್ರಣಕ್ಕಾಗಿ ಎಬಿಸಿ ಶೀಘ್ರದಲ್ಲಿ ಆರಂಭಿಸಲಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಹೊನ್ನಾಳಿ ಶಾಸಕ ಶಾಂತನಗೌಡ ಡಿ.ಜಿ., ಮೇಯರ್ ಚಮನ್ಸಾಬ್ ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.