SUDDIKSHANA KANNADA NEWS/ DAVANAGERE/ DATE:25-03-2025
ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ ಸದಸ್ಯರ ಅವಧಿ ಮುಕ್ತಾಯಗೊಂಡು ಒಂದು ತಿಂಗಳಾಗಿದೆ. ಈ ಬಾರಿ ಚುನಾವಣೆ ತಡವಾಗುವುದಿಲ್ಲ. ಯಾಕೆಂದರೆ ರಾಜ್ಯ ಚುನಾವಣಾ ಆಯೋಗವು ಮಹಾನಗರ ಪಾಲಿಕೆಗಳ ಚುನಾವಣೆಗೆ ಸಿದ್ಧತೆ ನಡೆಸಿದೆ.
ಇನ್ನು ಈಗಾಗಲೇ ದಾವಣಗೆರೆ ಸೇರಿದಂತೆ ಐದು ಮಹಾನಗರ ಪಾಲಿಕೆಗಳ ಅವಧಿ ಮುಕ್ತಾಯಗೊಂಡಿದೆ. ಈ ಹಿನ್ನೆಲೆಯಲ್ಲಿ ಐದು ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಬಿಬಿಎಂಪಿ ಚುನಾವಣೆ ಜೊತೆ ಮಹಾನಗರ ಪಾಲಿಕೆಗಳ ಚುನಾವಣೆ ಆಗುವುದಿಲ್ಲ ಎಂದು ಸ್ಪಷ್ಟವಾಗಿ ಚುನಾವಣಾ ಆಯೋಗ ತಿಳಿಸಿದೆ. ದಾವಣಗೆರೆ ಮಹಾನಗರ ಪಾಲಿಕೆಯ ಈ ಬಾರಿಯ
ಚುನಾವಣೆಯಲ್ಲಿ ಹಲವು ವಿಚಾರಗಳು ಚರ್ಚಿತವಾಗುತ್ತಿವೆ. ವಾರ್ಡ್ ವಿಂಗಡಣೆ ಆಗಿ ಹೆಚ್ಚಾಗುತ್ತವೆ, ಮೀಸಲಾತಿ ಬದಲಾಗುತ್ತದೆ. ಸಾಮಾನ್ಯ ಪುರುಷ ವಾರ್ಡ್ ಗಳ ಮೀಸಲಾತಿ ಮಹಿಳಾ ಮೀಸಲಾತಿ ಆಗುತ್ತದೆ. ಮಹಿಳಾ ಸೀಮಿತ ವಾರ್ಡ್ ಗಳು ಪುರುಷ ಮೀಸಲಾತಿ ಆಗುತ್ತದೆ ಎಂದು ಹೇಳಲಾಗುತ್ತಿದೆ. ಆದ್ರೆ ಯಾವುದೂ ಖಚಿತವಾಗಿಲ್ಲ.
ಮೇ ತಿಂಗಳಿನಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ನಡೆಸುವುದಾಗಿ ಆಯೋಗವು ತಿಳಿಸಿದೆ. ಸುಪ್ರೀಂಕೋರ್ಟ್ ಆದೇಶದಂತೆ ತೀರ್ಪು ಪಾಲಿಸುವುದಾಗಿ ರಾಜ್ಯ ಸರ್ಕಾರವೂ ಹೇಳಿದೆ. ನಾವೂ ಚುನಾವಣೆಗೆ ರೆಡಿ ಇದ್ದೇವೆ
ಎಂಬ ಸಂದೇಶ ರವಾನಿಸಿದೆ. ಆದ್ರೆ, ದಾವಣಗೆರೆ, ಮಂಗಳೂರು, ಶಿವಮೊಗ್ಗ, ತುಮಕೂರು, ಮೈಸೂರು ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆಯಬೇಕಿದೆ.
ರಾಜ್ಯದ ಐದು ಮಹಾ ನಗರ ಪಾಲಿಕೆಗಳ ಚುನಾವಣೆ ಆದಷ್ಟು ಬೇಗ ನಡೆಸಲಾಗುವುದು. ಈ ವರ್ಷದಲ್ಲೇ ರಾಜ್ಯದ ಐದು ಮಹಾನಗರ ಪಾಲಿಕೆಗೆ ಚುನಾವಣೆ ನಡೆಸುತ್ತೇವೆ ಎಂದು ಮೈಸೂರಿನಲ್ಲಿ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್.
ಸಂಗ್ರೇಶಿ ಸ್ಪಷ್ಟನೆ ನೀಡಿದ್ದಾರೆ.
“ಸರ್ಕಾರ ಮೀಸಲಾತಿ ಪಟ್ಟಿ ಕೊಟ್ಟರೆ ಸರಿ, ಕೊಡದಿದ್ದರೆ ಹೈಕೋರ್ಟ್ ಮೊರೆ ಹೋಗಿ ಹಳೆ ಮೀಸಲಾತಿಯಂತೆ ಈ ವರ್ಷವೇ ಚುನಾವಣೆ ಮಾಡುತ್ತೇವೆ. ಈ ಬಗ್ಗೆ ಸರ್ಕಾರಕ್ಕೆ ಮಹಾನಗರ ಪಾಲಿಕೆಗಳ ಮೀಸಲಾತಿ ಕೊಡುವಂತೆ ಪತ್ರ ಕೂಡ
ಬರೆಯಲಾಗಿದೆ. ಐದು ಮಹಾನಗರ ಪಾಲಿಕೆಯಲ್ಲೂ ಮತದಾರರ ಪಟ್ಟಿ ಸಿದ್ಧವಾಗಿದೆ” ಎಂದು ತಿಳಿಸಿದ್ದಾರೆ.