SUDDIKSHANA KANNADA NEWS/ DAVANAGERE/ DATE-25-06-2025
ದಾವಣಗೆರೆ: ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ 346 ಗ್ರಾಮಗಳಿಗೆ ಮತ್ತು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ಮತ್ತು ಅಜ್ಜಂಪುರ ತಾಲ್ಲೂಕಿನ 172 ಹಳ್ಳಿಗಳಿಗೆ ಕುಡಿಯುವ ನೀರಿನ ಸಲುವಾಗಿ ಭದ್ರಾ ಡ್ಯಾಂನಿಂದ ನೀರು ಪೂರೈಕೆ ಮಾಡಲು ಭದ್ರಾ ಬಲಂದಡೆ ನಾಲೆ ಸೀಳಿ ಅವೈಜ್ಞಾನಿಕ ಕಾಮಗಾರಿ ನಡೆಸಲಾಗುತ್ತಿದೆ ಎಂದು ಆರೋಪಿಸಿ ಜಿಲ್ಲಾ ರೈತ ಒಕ್ಕೂಟದ ನೇತೃತ್ವದಲ್ಲಿ ಜೂನ್ 25ರಂದು ಬಾಡಾ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿ ತಡೆ ಹಾಗೂ ಜೂನ್ 28ಕ್ಕೆ ದಾವಣಗೆರೆ ನಗರ ಬಂದ್ ಗೆ ಕರೆ ಕೊಡಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಅವರು, ಕಾಮಗಾರಿ ಸಂಪೂರ್ಣವಾಗಿ ಅವೈಜ್ಞಾನಿಕವಾಗಿ ಕೂಡಿದೆ. ಕೂಡಲೇ ಕಾಮಗಾರಿ ನಿಲ್ಲಿಸಬೇಕು. ಬುಧವಾರ ಬೆಳಿಗ್ಗೆ 11 ಗಂಟೆಗೆ
ಹೆದ್ದಾರಿ ತಡೆ ನಡೆಸಲಾಗುವುದು. ಜೂನ್ 28ಕ್ಕೆ ಕರೆ ನೀಡಿರುವ ದಾವಣಗೆರೆ ನಗರ ಬಂದ್ ಗೆ ವರ್ತಕರು, ಆಟೋ ಚಾಲಕರು, ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಸಹಕರಿಸಬೇಕು. ಭದ್ರಾ ಡ್ಯಾಂ ಬಳಿ ಕೈಗೊಳ್ಳಲಾಗುತ್ತಿರುವ ಕಾಮಗಾರಿ
ಸಮೀಪ ಹತ್ತಾರು ಸಾವಿರ ರೈತರೊಂದಿಗೆ ಅಹೋರಾತ್ರಿ ಧರಣಿ ನಡೆಸುತ್ತೇವೆ. ಕಾಮಗಾರಿ ಕೈಬಿಡುವವರೆಗೆ ಹಂತಹಂತವಾಗಿ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.
ಈ ಕಾಮಗಾರಿ ನಡೆಯುವ ಸ್ಥಳ ಬಫರ್ ಜೋನ್ ಆಗಿದ್ದು, ಯಾವುದೇ ಕಾಮಗಾರಿ ಕೈಗೊಳ್ಳುವುದು ಡ್ಯಾಂನ ಅಭದ್ರತೆ ಕಾರಣವಾಗುತ್ತದೆ. ನಾವು ಸಾವಿರಾರು ರೈತರ ಜೊತೆಗೆ ತೆರಳಿ ಭದ್ರಾ ಡ್ಯಾಂ ಬಳಿ ಪ್ರತಿಭಟನೆ ನಡೆಸಿದ್ದೇವೆ. ಆದ್ರೆ, ಸರ್ಕಾರ ಹೋರಾಟ ಹತ್ತಿಕ್ಕುವ ಸಲುವಾಗಿ 144 ಸೆಕ್ಷನ್ ಜಾರಿಗೊಳಿಸಿದೆ. ನಾವೇನೂ ಭಯೋತ್ಪಾದಕರಾ ಎಂದು ಪ್ರಶ್ನಿಸಿದರು.
ಭದ್ರಾ ಡ್ಯಾಂ ದಾವಣಗೆರೆ ಜಿಲ್ಲೆಯ ರೈತರ ಜೀವನಾಡಿ. ಬಲದಂಡೆ ನಾಲೆ ಮೂಲಕ ದಾವಣಗೆರೆ ಜಿಲ್ಲೆಗೆ ನೀರು ಪೂರೈಕೆ ಆಗುತ್ತದೆ. ಈ ನಾಲೆ ಕಲ್ಲು ಗುಡ್ಡದ ನಡುವೆ ಹಾದು ಬಂದಿದೆ. ಈಗ ಬಲದಂಡೆ ನಾಲೆಯನ್ನು ಸೀಳಿ (ಹೊಡೆದು) ಹೊಸದುರ್ಗ- ತರೀಕೆರೆ-ಅಜ್ಜಂಪುರ ತಾಲ್ಲೂಕಿನ ಹಳ್ಳಿಗಳಿಗೆ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಅಡಿಯಲ್ಲಿ ನೀರು ಪೈಪು ಅಳವಡಿಸುವ ಕಾಮಗಾರಿ ನಡೆದಿದೆ. ಇದು ನಾಲೆ ಮಟ್ಟದಿಂದ 8 ಅಡಿ ಕೆಳಮಟ್ಟದಲ್ಲಿದ್ದು, ನೀರು ಸರಾಗವಾಗಿ ಮತ್ತು ರಭಸವಾಗಿ ಹರಿಯುವಂತೆ ಮಾಡುವ ಚಾಣಾಕ್ಷ ತಂತ್ರ ಮಾಡಲಾಗಿದೆ. ಈ ಪೈಪು ಭದ್ರಾ ನಾಲೆಗಿಂತ 8 ಅಡಿ ಕೆಳಮಟ್ಟದಲ್ಲಿರುವುದರಿಂದ ಸಹಜವಾಗಿ ನೀರು ನಮ್ಮ ಜಿಲ್ಲೆಯ ಕಡೆಗೆ ಹರಿಯುವುದಿಲ್ಲ. ಆಗ ದಾವಣಗೆರೆ ಜಿಲ್ಲೆಯ ರೈತರು ಭತ್ತದ ನಾಟಿ ಮಾಡುವುದಿರಲ್ಲಿ, ಇರುವ ತೋಟಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ಜಿಲ್ಲೆಯ ರೈತರಿಗೆ ಬರಸಿಡಿಲು ಬಡಿದಂತಾಗಿದೆ ಎಂದು ತಿಳಿಸಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ದಾವಣಗೆರೆ ಜಿಲ್ಲೆಯ ರೈತರೊಂದಿಗೆ ಹುಡುಗಾಟಿಕೆ ಆಡುತ್ತಿದೆ. ಭದ್ರಾ ರೈತರ ಜೀವನಾಡಿ ಎಂದು ನಂಬಿದ ರೈತರನ್ನು ವಂಚಿಸಿ, ಅವರ ಕತ್ತು ಹಿಸುಕುವ ಅಮಾನವೀಯ ಕೃತ್ಯ ಇದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುಮಾರು 1600 ಕೋಟಿ ರೂ. ಅಂದಾಜಿನ ಇಂತಹ ಬೃಹತ್ ಕಾಮಗಾರಿ ಕೈಗೊಳ್ಳುವ ಮುನ್ನ ರಾಜ್ಯದ ಕಾಂಗ್ರೆಸ್ ಸರ್ಕಾರ ಸೌಜನ್ಯಕ್ಕಾದರೂ ಭದ್ರಾ ಅಚ್ಚುಕಟ್ಟು ಪ್ರದೇಶದ ಜನಪ್ರತಿನಿಧಿಗಳ-ರೈತರ ಸಭೆ ನಡೆಸಿ, ಸಮಾಲೋಚನೆ ಮಾಡಿಲ್ಲ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಈ ಯೋಜನೆಗೆ ಮಂಜೂರಾತಿ ನೀಡಿತ್ತು. ಆದ್ರೆ, ಎಲ್ಲಿಯೂ ಭದ್ರಾ ಬಲದಂಡೆ ನಾಲೆ ಸೀಳಿ ಮಾಡಬೇಕೆಂದಿಲ್ಲ. ಕುಡಿಯುವ ನೀರು ನೀಡಲು ನಮ್ಮ ವಿರೋಧ ಇಲ್ಲ. ಭದ್ರಾ ಬಲದಂಡೆ ನಾಲೆ ಸೀಳಿ ಕಾಮಗಾರಿ ನಡೆಸುತ್ತಿರುವುದಕ್ಕೆ ವಿರೋಧ ಇದೆ ಎಂದರು.
ಬಹು ಗ್ರಾಮ ಕುಡಿಯುವ ನೀರು ಯೋಜನೆಯಡಿ ಹೊಸದುರ್ಗ-ತರೀಕೆರೆ-ಅಜ್ಜಂಪುರ ತಾಲ್ಲೂಕುಗಳ ಹಳ್ಳಿಗಳ ಕಡೆಯಿಂದ ಮೊದಲು ಕಾಮಗಾರಿ ಪ್ರಾರಂಭವಾಗಬೇಕಾಗಿತ್ತು. ಆದರೆ ಭದ್ರಾ ಡ್ಯಾಂ ಬುಡದಿಂದ ಕಾಮಗಾರಿ ಪ್ರಾರಂಭವಾಗಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಇದರ ಹಿಂದೆ ಕಾಣದ ಕೈಗಳ ಕೈವಾಡ ಇದೆ. ಭದ್ರಾ ಡ್ಯಾಂ ಸುರಕ್ಷತೆ ಬಗ್ಗೆ ಸಮೀಕ್ಷೆ ನಡೆಸಿ, ಸೂಕ್ತ ಭದ್ರತೆ ಕ್ರಮಗಳನ್ನು ಕೈಗೊಳ್ಳಬೇಕು. ಡ್ಯಾಂ ನಿರ್ವಹಣೆಯ ಕ್ರೇನ್ ಗಳನ್ನು ರೀ ಕಂಡೀಷನ್ ಮಾಡಿಸಬೇಕು. ಡ್ಯಾಂ ತಳಭಾಗದ ಬಫರ್ ಜೋನ್ ಪ್ರದೇಶದಲ್ಲಿ ಯಾವುದೇ ರೀತಿಯ ಅವೈಜ್ಞಾನಿಕ ಕಾಮಗಾರಿಗಳನ್ನು ಕೈಗೊಳ್ಳಬಾರದು ಎಂದು ಕಳೆದ ಎರಡು ವರ್ಷಗಳಿಂದ ಜಿಲ್ಲಾ ರೈತರ ಒಕ್ಕೂಟದಿಂದ ಸರ್ಕಾರಕ್ಕೆ ಆಗ್ರಹಿಸಲಾಗಿದ್ದರೂ ಈ ಕಿವುಡು ಕಾಂಗ್ರೆಸ್ ಸರ್ಕಾರ ಕೇಳಿಸಿಕೊಂಡಿಲ್ಲ, ರೈತರ ಕೂಗಿಗೆ ಸ್ಪಂದಿಸಿಲ್ಲ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಜಿಲ್ಲಾ ರೈತ ಒಕ್ಕೂಟದ ಕೊಳೇನಹಳ್ಳಿ ಸತೀಶ್, ಲೋಕಿಕೆರೆ ನಾಗರಾಜ್, ಧನಂಜಯ ಕಡ್ಲೇಬಾಳು, ಮಾಜಿ ಶಾಸಕ ಎಂ. ಬಸವರಾಜ್ ನಾಯ್ಕ್, ಚಂದ್ರಶೇಖರ್ ಪೂಜಾರ್, ಮಾಡಾಳ್ ಮಲ್ಲಿಕಾರ್ಜುನ್ ಮತ್ತಿತರರು ಹಾಜರಿದ್ದರು.