SUDDIKSHANA KANNADA NEWS/ DAVANAGERE/ DATE:19-03-2025
ದಾವಣಗೆರೆ (Davanagere): ಕ್ಷೇತ್ರದ ವ್ಯಾಪ್ತಿಯ ಕಲ್ಪನಹಳ್ಳಿ ಬಳಿ ಪ್ರತ್ಯೇಕ ದಾವಣಗೆರೆ-ಚಿತ್ರದುರ್ಗ ಮೆಗಾ ಡೈರಿ ಸ್ಥಾಪಿಸಲು ಭೂಮಿ ಖರೀದಿಸಿದ್ದು, ಈ ಬಗ್ಗೆ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೂಡಲೇ ಅನುದಾನ ಬಿಡುಗಡೆ ಮಾಡಬೇಕೆಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಒತ್ತಾಯಿಸಿದರು.
ವಿಧಾನಸಭೆಯಲ್ಲಿ ಬುಧವಾರ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಿವಮೊಗ್ಗ ಹಾಲು ಒಕ್ಕೂಟದಿಂದ ಬೇರ್ಪಡಿಸಿ ಪ್ರತ್ಯೇಕ ದಾವಣಗೆರೆ-ಚಿತ್ರದುರ್ಗ ಒಳಗೊಂಡ ಮೆಗಾ ಡೈರಿ ಆರಂಭಿಸಲು ನನ್ನ ಕ್ಷೇತ್ರದ ವ್ಯಾಪ್ತಿಯ ಕಲ್ಪನಹಳ್ಳಿಯಲ್ಲಿ ಭೂಮಿ ಖರೀದಿಸಿದ್ದೇವೆ. ಸರ್ಕಾರ ಕೂಡಲೇ ಅನುದಾನ ಬಿಡುಗಡೆ ಮಾಡಿ ಡೈರಿ ಆರಂಭಿಸಿದರೆ ಈ ಭಾಗದ ರೈತರು ಆರ್ಥಿಕವಾಗಿ ಸಬಲರಾಗಲಿದ್ದಾರೆ ಎಂದು ಸದನದ ಗಮನ ಸೆಳೆದರು.
ಈ ಸುದ್ದಿಯನ್ನೂ ಓದಿ: ರೈತರ ದೂರಿಗೆ ಸ್ಪಂದಿಸಿದ ಡಿಸಿ: ರಾಗಿ ಖರೀದಿ ಕೇಂದ್ರಕ್ಕೆ ದಿಢೀರ್ ಭೇಟಿ, ಕೊಟ್ಟ ವಾರ್ನಿಂಗ್ ಏನು…?
ಹೈನುಗಾರಿಕೆಯಲ್ಲಿ ಮಹಿಳೆಯರಿಗೆ ಶೇ.೫೦ರಷ್ಟು ಸಬ್ಸಿಡಿ ಕೊಡುವುದನ್ನು ಶೇ.7.5ರಷ್ಟು ಹೆಚ್ಚಳ ಮಾಡಿದರೆ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಿ ಉತ್ತಮ ಬದುಕು ಕಟ್ಟಿಕೊಳ್ಳುತ್ತಾರೆ. ಈ ಬಗ್ಗೆ ಸರ್ಕಾರ ಗಮನ ಹರಿಸಬೇಕೆಂದರು.
ಮಧ್ಯ ಕರ್ನಾಟಕದ ಕೇಂದ್ರ ಬಿಂದು, ಹಿಂದುಳಿದ ಜಿಲ್ಲೆ ದಾವಣಗೆರೆ. ಅದರಲ್ಲೂ ಅತೀ ಹಿಂದುಳಿದ ಮೀಸಲು ಕ್ಷೇತ್ರ ಮಾಯಕೊಂಡ. ಸಿರಿಗೆರೆ ತರಳಬಾಳು ಜಗದ್ಗುರುಗಳ ಹೋರಾಟದ ಫಲವಾಗಿ ನನ್ನ ಕ್ಷೇತ್ರದಲ್ಲಿ ೨೨ ಕೆರೆಗಳ ಯೋಜನೆ ಜಾರಿಗೊಂಡು ಎಲ್ ಅಂಡ್ ಟಿ ಕಂಪನಿ ಕಾಮಗಾರಿ ನಡೆಸಿತ್ತು. ಕಳಪೆ ಕಾಮಗಾರಿಯಿಂದ ೧೦೦ ಹಳ್ಳಿಗಳಿಗೆ ಕುಡಿಯುವ ನೀರು, ನೀರಾವರಿ ಕಲ್ಪಿಸಬೇಕೆಂಬ ಉದ್ದೇಶ ಈಡೇರಿಲ್ಲ. ಪುನಃ ಹೊಸ ಪೈಪ್ಲೈನ್ ಕಾಮಗಾರಿಗೆ ಹಣ ನೀಡಿ ಕಾಮಗಾರಿ ಆರಂಭಿಸುವಂತೆ ಈಗಾಗಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಕೂಡಲೇ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ನನ್ನ ಕ್ಷೇತ್ರದಲ್ಲಿ ಹೆಚ್ಚು ಗುಡ್ಡಗಾಡು ಪ್ರದೇಶ ಹೊಂದಿದ್ದು, ಈ ಪ್ರದೇಶಗಳಲ್ಲಿ ಅತೀ ಹೆಚ್ಚು ಕೆರೆಗಳನ್ನು ನಿರ್ಮಾಣ ಮಾಡಿದರೆ ಜನಜಾನುವಾರುಗಳಿಗೆ ಕುಡಿಯುವ ನೀರು, ಅಂತರ್ಜಲ ಮಟ್ಟ ವೃದ್ಧಿಗೆ ಅನುಕೂಲವಾಗುತ್ತದೆ. ಅಲ್ಲದೇ ಬ್ರಿಟಿಷರು ನಿರ್ಮಿಸಿದ ಕೆರೆ ಇದೆ. ಅದನ್ನು ಜೀರ್ಣೋದ್ಧಾರ ಮಾಡಿದರೆ ಇಡೀ ಪಕ್ಷಿ ಸಂಕುಲ, ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಬಹುದು ಎಂದು ಸದನ ಗಮನ ಸೆಳೆದರು.
ಎಸ್ಸಿ-ಎಸ್ಟಿ ಅಭಿವೃದ್ಧಿ ನಿಗಮಗಳಿಗೆ ಅನೇಕ ಸೌಲಭ್ಯ ಒದಗಿಸಲು ಅನುದಾನದ ಕೊರತೆ ಇದೆ. ಹೆಚ್ಚಿನ ಅನುದಾನ ನೀಡಬೇಕು. ಎಸ್ಸಿ-ಎಸ್ಟಿ ಸಮುದಾಯ ಆರ್ಥಿಕವಾಗಿ ಸಬಲರಾಗಲು ಭೂಒಡೆತನ ಯೋಜನೆ ಜಾರಿಗೊಳಿಸಿದ್ದು, ಕ್ಷೇತ್ರಕ್ಕೆ ಕೇವಲ ಒಂದೇ ಕೊಟ್ಟರೆ ಸಾಧ್ಯವಾಗುವುದಿಲ್ಲ. ಇದಕ್ಕೆ ಹೆಚ್ಚು ಒತ್ತು ಕೊಡಬೇಕು. ಖಾಸಗಿ ಕಾಲೇಜುಗಳಲ್ಲಿ ಡಿಪ್ಲೊಮಾ, ನರ್ಸಿಂಗ್, ಪ್ಯಾರಾ ಮೆಡಿಕಲ್ ಸೇರಿದಂತೆ ವೃತ್ತಿಪರ ಕೋರ್ಸ್ನಲ್ಲಿ ಅಭ್ಯಾಸ ಮಾಡುವ ಎಸ್ಸಿ-ಎಸ್ಟಿ ಮಕ್ಕಳಿಗೆ ೨೦೧೩-೧೮ರಲ್ಲಿ ಹಾಸ್ಟೆಲ್ ಸೌಲಭ್ಯ ಇತ್ತು, ಈಗ ಇಲ್ಲ. ಕೂಡಲೇ ಈ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿದರು.
ಹೊರ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಹಗಲು ದರೋಡೆ ಮಾಡಲಾಗುತ್ತಿದೆ. ಹೊರ ಗುತ್ತಿಗೆ ತೆಗೆದು ನೇರವಾಗಿ ನೇಮಕಾತಿ ಮಾಡಿಕೊಂಡರೆ ಅವರ ಬದುಕು ಉಜ್ವಲವಾಗುತ್ತದೆ. ಶೋಷಿತ ಸಮುದಾಯಗಳಿಗೆ ತ್ವರಿತ ನ್ಯಾಯ ಒದಗಿಸಲು ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆಯಡಿ ರಾಜ್ಯದಲ್ಲಿ ೩೩ ವಿಶೇಷ ಪೊಲೀಸ್ ಠಾಣೆ ತೆರೆಯಲು ಕ್ರಮ, ಅಲ್ಲದೇ ಎಸ್ಸಿ-ಎಸ್ಟಿ ಗುತ್ತಿಗೆದಾರರಿಗೆ 2 ಕೋಟಿ ಮೀಸಲು, ಅದರಂತೆ ಒಬಿಸಿ, ಅಲ್ಪಸಂಖ್ಯಾತರಿಗೂ 2 ಕೋಟಿ ಮೀಸಲಿಡುವ ಮೂಲಕ ರೈತರು,
ಕಾಯಕ ಜೀವಿಗಳು, ವಿಶೇಷವಾಗಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಎಸ್ಸಿಪಿ-ಎಸ್ಟಿಪಿ ಯೋಜನೆಯಡಿ 45,018 ಕೋಟಿ ರೂ. ಬಜೆಟ್ನಲ್ಲಿ ಮೀಸಲಿಟ್ಟಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನೆ ಸಲ್ಲಿಸಿದರು.
ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿ
ಮಳೆಗಾಲದಲ್ಲಿ ತುಂಗಾ ಜಲಾಯಶದಿಂದ ಭದ್ರಾ ಜಲಾಶಯಕ್ಕೆ ನೀರು ತುಂಬಿಸಿ ಅಪರ್ ಭದ್ರಾ ಯೋಜನೆ ನೀರು ನೀಡುವ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಿದರೆ ಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ರೈತರಿಗೆ ಅನುಕೂಲವಾಗಲಿದೆ. ಇಲ್ಲದಿದ್ದರೆ, ನಮ್ಮ ಭಾಗದ ರೈತರಿಗೆ ಅನಾನುಕೂಲವಾಗಲಿದೆ. ಕೂಡಲೇ ಸರ್ಕಾರ ಈ ಯೋಜನೆಯ ಕಾಮಗಾರಿ ಪೂರ್ಣಗೊಳಿಸಬೇಕು. ರಾಗಿ, ಭತ್ತ, ತೊಗರಿ ಬೆಂಬಲ ಬೆಲೆಯಡಿ ಖರೀದಿಸಿದಂತೆ ಮೆಕ್ಕೆಜೋಳವನ್ನು ಬೆಂಬಲ ಬೆಲೆಯಡಿ ಖರೀದಿಸಬೇಕೆಂದು ಶಾಸಕ ಕೆ.ಎಸ್.ಬಸವಂತಪ್ಪ ಒತ್ತಾಯಿಸಿದರು.