SUDDIKSHANA KANNADA NEWS/ DAVANAGERE/ DATE-05-06-2025
ದಾವಣಗೆರೆ: ಹಗಲು ವೇಳೆಯಲ್ಲಿ ಮನೆ ಕಳ್ಳತನ ಪ್ರಕರಣ ದಾಖಲಾದ 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, 5.98 ಲಕ್ಷ ರೂಪಾಯಿ ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ.
ದೊಡ್ಡಬಾತಿ ಗ್ರಾಮದ ಫಾತಿಮಾ ಅವರು ಕಳೆದ ಜೂನ್ 3 ರಂದು ಬೆಳಿಗ್ಗೆ 10 ಗಂಟೆ ಸಮಯದಲ್ಲಿ ಮನೆಯ ಬಾಗಿಲಿಗೆ ಹಾಗೂ ಮುಂಭಾಗದ ಗೇಟಿಗೆ ಬೀಗ ಹಾಕಿಕೊಂಡು ಹರಿಹರಕ್ಕೆ ಬೆಳ್ಳುಳ್ಳಿ ಶುಂಠಿ ಮಾರಲು ಹೋಗಿದ್ದರು.
ವ್ಯಾಪಾರ ಮುಗಿಸಿಕೊಂಡು ಅದೇ ದಿನ ರಾತ್ರಿ 8 ಗಂಟೆಗೆ ಬಂದು ನೋಡಿದಾಗ ಮನೆಯ ಮುಂಭಾಗದ ಗೇಟ್ ಹಾಗೂ ಬಾಗಿಲಿಗೆ ಹಾಕಿದ್ದ ಬೀಗ ಇರಲಿಲ್ಲ. ನಂತರ ಗಾಬರಿಯಾಗಿ ಒಳಗೆ ಹೋಗಿ ನೋಡಲಾಗಿ ಮನೆಯ ತುಂಬಾ ಖಾರದ ಪುಡಿ ಚೆಲ್ಲಿದ್ದು ರೂಮಿನಲ್ಲಿದ್ದ ಗಾಡ್ರೇಜ್ ಲಾಕ್ ಮುರಿದು ಲಾಕರ್ ನಲ್ಲಿದ್ದ ಒಟ್ಟು 71 ಗ್ರಾಂ ತೂಕದ ಬಂಗಾರದ ಆಭರಣಗಳು, 75 ಗ್ರಾಂ ಬೆಳ್ಳಿ ವಸ್ತುಗಳು ಮತ್ತು 2090 ರೂಪಾಯಿ ಹಣ ಕಳ್ಳತನವಾಗಿದ್ದು ಗೊತ್ತಾಗಿತ್ತು. ಈ ಸಂಬಂಧ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಗ್ರಾಮಾಂತರ ಪೊಲೀಸ್ ಠಾಣೆಯ ನಿರೀಕ್ಷಕ ಕಿರಣ್ ಕುಮಾರ್ ಅವರ ನೇತೃತ್ವದ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ತಂಡವು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಪಿರ್ಯಾದಿಗೆ ಕೆಲ ದಿನಗಳ ಹಿಂದೆ ಪರಿಚಯವಾಗಿದ್ದ ಆರೋಪಿತನಾದ ಇಮ್ದಾದ್ (44)ನ ಬಗ್ಗೆ ಅನುಮಾನ ಮೂಡಿತ್ತು. ಈತ ಹೊನ್ನಾಳಿ ನಗರದ ಸೋಡಾ ವ್ಯಾಪಾರಿಯಾಗಿದ್ದು, ಸಂತೆಗಳಿಗೆ ಬರುತ್ತಿದ್ದ. ಜೂನ್ 4ರಂದು ಠಾಣೆಗೆ ಕರೆತಂದು ವಿಚಾರ ಮಾಡಿದಾಗ ಆರೋಪಿತನು
ತಾನು ಕಳ್ಳತನ ಮಾಡಿರುವ ವಿಚಾರವನ್ನು ಒಪ್ಪಿಕೊಂಡಿದ್ದಾನೆ.
ಬಂಧಿತನಿಂದ ಪ್ರಕರಣದಲ್ಲಿ ಕಳುವಾಗಿದ್ದ 71 ಗ್ರಾಂ ತೂಕದ ಬಂಗಾರದ ಆಭರಣಗಳು ಅಂದಾಜು ಬೆಲೆ 5,30,000 ರೂ., 75 ಗ್ರಾಂ ಬೆಳ್ಳಿ ವಸ್ತುಗಳು ಅಂದಾಜು ಬೆಲೆ 16,000- ರೂಪಾಯಿ, 2090 ರೂ ನಗದುಸೇರಿದಂತೆ ಸಂಪೂರ್ಣ ಸ್ವತ್ತು ಹಾಗೂ ಕೃತ್ಯಕ್ಕೆ ಬಳಸಿದ 50,000 ರೂ ಮೌಲ್ಯದ ಸ್ಟೂಟರ್ ವಶಪಡಿಸಿಕೊಳ್ಳಲಾಗಿದೆ. ಒಟ್ಟು 5,98,090 ರೂ ಮೌಲ್ಯದ ಸ್ವತ್ತು ಜಫ್ತಿ ಮಾಡಲಾಗಿದೆ.
ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರಾದ ಪಿಐ ಕಿರಣ್ ಕುಮಾರ್ ಇ.ವೈ, ಪಿಎಸ್‌ಐ ಜೋವಿತ್ ರಾಜ್, ಠಾಣಾ ಸಿಬ್ಬಂದಿ ನಾಗಭೂಷಣ, ಪಿ. ಎಂ. ವೀರೇಶ್, ಹನುಮಂತಪ್ಪ ಅವರನ್ನು ಎಸ್ಪಿ ಉಮಾ ಪ್ರಶಾಂತ್ ಅಭಿನಂದಿಸಿದ್ದಾರೆ.