SUDDIKSHANA KANNADA NEWS/ DAVANAGERE/ DATE:18-10-2023
ದಾವಣಗೆರೆ (Davanagere): 2024ರ ಲೋಕಸಭೆ ಚುನಾವಣೆಗೆ ದಾವಣಗೆರೆಯಿಂದ ಯಾರು ಕಣಕ್ಕಿಳಿಯುತ್ತಾರೆ ಎಂಬ ಘೋಷಣೆ ಆಗಿಲ್ಲ. ಟಿಕೆಟ್ ಯಾರಿಗೆ ಎಂಬುದು ಫೈನಲ್ ಆಗಿಲ್ಲ. ನಾನು ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.
Read Also This Story:
Gas cylinder: ಉಚಿತ ಎಲ್ ಪಿ ಜಿ ಸಿಲಿಂಡರ್ ಬೇಕಾ…? ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಸಲ್ಲಿಸಿ ಅರ್ಜಿ
ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾನು ಈ ಹಿಂದೆಯೇ ಹೇಳಿದ್ದೆ. ನಾನು ದಾವಣಗೆರೆ ಲೋಕಸಭೆ ಬಿಜೆಪಿ ಟಿಕೆಟ್ ನ ಪ್ರಬಲ ಆಕಾಂಕ್ಷಿ ಎಂದು. ಅಂದಿನಿಂದ ನನ್ನನ್ನು ತುಳಿಯುವ ಕೆಲಸ ಮಾಡಲಾಗುತ್ತಿದೆ. ನಾನು ಯಾರಿಗೂ ಹೆದರುವುದಿಲ್ಲ. ಯಾರಿಂದಲೂ ನನ್ನನ್ನು ಮುಗಿಸಲು ಸಾಧ್ಯವಿಲ್ಲ ಎಂದು ಪುನರುಚ್ಚರಿಸಿದರು.
ಮಾಜಿ ಸಚಿವ ಎಸ್. ಎ. ರವೀಂದ್ರನಾಥ್, ಮಾಜಿ ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ, ಗುರುಸಿದ್ದನಗೌಡ, ಮಾಡಾಳ್ ಮಲ್ಲಿಕಾರ್ಜುನ್ ಸೇರಿದಂತೆ ಇತರೆ ನಾಯಕರನ್ನು ಮುಗಿಸಿದ ರೀತಿ ನನ್ನನ್ನು ಮುಗಿಸಲು ಸಾಧ್ಯವಿಲ್ಲ. ಯಾರಿಗೂ ಬೆದರುವ, ಹೆದರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಸಂಸದ ಜಿ. ಎಂ. ಸಿದ್ದೇಶ್ವರ ತಂದೆ ಮಲ್ಲಿಕಾರ್ಜುನಪ್ಪರ ಚುನಾವಣೆ ಮಾಡಿದ್ದೇನೆ. ಸಿದ್ದೇಶ್ವರ ಅವರ ಚುನಾವಣೆಯಲ್ಲಿಯೂ ಕೆಲಸ ಮಾಡಿದ್ದೇನೆ. ಬಿಜೆಪಿಯಲ್ಲಿ ಸಿದ್ದೇಶ್ವರ ಅವರಿಗಿಂತ ನಾನೂ ಹಿರಿಯವನಿದ್ದೇನೆ. ನಾನು ಲೋಕಸಭೆಯಲ್ಲಿ ಕಣಕ್ಕಿಳಿಯುವುದು ಶತಃಸಿದ್ಧ ಎಂದು ಪುನರುಚ್ಚರಿಸಿದರು.
ಸಿದ್ದೇಶ್ವರ ಅವರ ಕಳೆದ ಲೋಕಸಭೆ ಚುನಾವಣೆಯ ಪ್ರಚಾರದ ವೇಳೆ ಇದೇ ನನ್ನ ಕೊನೆಯ ಚುನಾವಣೆ, ಮತ್ತೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದರು. ಆ ನಂತರವಷ್ಟೇ ನಾನೂ ಟಿಕೆಟ್ ಆಕಾಂಕ್ಷಿ ಎಂದು ತಿಳಿಸಿದ್ದೆ. ಎಸ್. ಎ. ರವೀಂದ್ರನಾಥ್ ಅವರನ್ನು ಮೂಲೆಗುಂಪು ಮಾಡಲಾಗಿದೆ. ಪಕ್ಷದ ಪರ ಮಾತನಾಡುವವರನ್ನು ಸುಮ್ಮನಾಗಿಸುವ, ಹೆದರಿಸುವ ಕೆಲಸ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಪಕ್ಷದಲ್ಲಿ ಸರ್ವಾಧಿಕಾರಿ ಧೋರಣೆ ಮುಂದುವರಿದಿರುವುದನ್ನು ಪ್ರಬಲವಾಗಿ ಖಂಡಿಸಿದ್ದಾನೆ. ನನ್ನನ್ನು ವ್ಯವಸ್ಥಿತವಾಗಿ ಮುಗಿಸಲು ಯೋಜನೆ ರೂಪಿಸಲಾಗಿದೆ. ನನ್ನ ಅವಶ್ಯಕತೆ ಬಿಜೆಪಿಗೆ ಇಲ್ಲ ಎಂಬಂತ ರೀತಿಯಲ್ಲಿ ವರ್ತನೆ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.