SUDDIKSHANA KANNADA NEWS/ DAVANAGERE/ DATE:14-10-2023
ದಾವಣಗೆರೆ (Davanagere): ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾಸಭಾ ಗಣಪತಿ ಶೋಭಯಾತ್ರೆಗೆ ಲಕ್ಷಾಂತರ ಜನರು ಸಾಕ್ಷಿಯಾದರು. ಜಿಲ್ಲೆ ಮಾತ್ರವಲ್ಲ, ರಾಜ್ಯದ ಮೂಲೆಮೂಲೆಗಳಿಂದ ಬಂದಿದ್ದ
ಹಿಂದೂ ಕಾರ್ಯಕರ್ತರು, ಮುಖಂಡರು ಜಬರ್ದಸ್ತ್ ಆಗಿಯೇ ಡ್ಯಾನ್ಸ್ ಮಾಡಿದರು. ಡಿಜೆ ಶಬ್ಧಕ್ಕೆ ಯುವಕರ ಡ್ಯಾನ್ಸ್ ಸೂಪರ್. ಯುವತಿಯರಂತೂ ಹಾಡುಗಳಿಗೆ ಸಖತ್ ಸ್ಟೆಪ್ ಹಾಕಿದರು. ಗಣೇಶ ಮೂರ್ತಿ ವಿಸರ್ಜನೆಗೆ ಹೆಚ್ಚು ರಂಗು ತರುವಂತೆ ಮಾಡಿದ್ದು ಯುವತಿಯರ ಕುಣಿತ.
READ ALSO THIS STORY:
ಅಬಕಾರಿ (Excise) ಡಿಸಿ, ನಿರೀಕ್ಷಕಿ ಸೇರಿ ನಾಲ್ವರು ಲೋಕಾಯುಕ್ತ ಪೊಲೀಸರ ಬಲೆಗೆ: ಮೂರು ಲಕ್ಷ ರೂ. ಲಂಚ ಕೇಳಿ ಸಿಕ್ಕಿಬಿದ್ದ ಅಧಿಕಾರಿಗಳು…!
ಒಂದೆಡೆ ಸಾವಿರಾರು ಸಂಖ್ಯೆಯಲ್ಲಿ ಯುವಕರು ಡಿಜೆಯಲ್ಲಿ ಹಾಕಿದ್ದ ಹಾಡುಗಳಿಗೆ ಕುಣಿದು ಕುಪ್ಪಳಿಸಿದರೆ, ಯುವತಿಯರು ತಾವೇನೂ ಕಡಿಮೆ ಇಲ್ಲ ಎಂಬಂತೆ ಜಬರ್ದಸ್ತ್ ಆಗಿ ಸ್ಟೆಪ್ ಹಾಕಿದರು. ಯುವತಿಯರ ನೃತ್ಯ ನೋಡಿದ ಪ್ರತಿಯೊಬ್ಬರೂ
ಖುಷಿಪಟ್ಟರು. ಸಾವಿರಾರು ಸಂಖ್ಕೆಯಲ್ಲಿ ಸೇರಿದ್ದ ಯುವತಿಯರು ತಂಡೋಪತಂಡವಾಗಿ ನೃತ್ಯ ಮಾಡುವ ಮೂಲಕ ಮೆರವಣಿಗೆಗೆ ರಂಗು ತಂದರು. ಡಿಜೆ ಶಬ್ಧಕ್ಕೆ ಸುತ್ತಮುತ್ತ ನೆರೆದಿದ್ದ ಸಾವಿರಾರು ಜನರು ಜೈ ಹೋ ಜೈ ಹೋ ಎಂದರು.
ಸುಮಾರು ಒಂದೂವರೆ ಲಕ್ಷಕ್ಕಿಂತ ಹೆಚ್ಚಿನ ಜನರು ಶೋಭಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಬೆಣ್ಣೆನಗರಿ ಕೇಸರಿಮಯವಾಗಿತ್ತು. ಬಿಸಿಲು ಏರಿದಂತೆ ಜನರ ಬರುವಿಕೆಯೂ ಏರಿತು. ಬಿಸಿಲು ಲೆಕ್ಕಿಸದೇ ಯುವಕರು, ಯುವತಿಯರು ಕುಣಿದು ಕುಪ್ಪಳಿಸಿದರು.
ಕೇಸರಿಮಯವಾಯ್ತು ದಾವಣಗೆರೆ:
ದಾವಣಗೆರೆಯು ಕೇಸರಿಮಯವಾಗಿತ್ತು. ಎಲ್ಲೆಲ್ಲೂ ಗಣೇಶನ ಜಪ. ಯುವಕರ ನೃತ್ಯ, ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಕರುನಾಡ ಚಕ್ರವರ್ತಿ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಹಲವು ಬಾವುಟಗಳು ಹಾರಾಡಿದವು. ಆಂಜನೇಯ ಸ್ವಾಮಿಯ ಚಿತ್ರವು ಗಮನ ಸೆಳೆಯಿತು. ಜೈ ಭೀಮ್ ಸಂಘಟನೆಯ ಯುವಕರು ಸಹ ಜಬರ್ದಸ್ತ್ ಆಗಿ ಸ್ಟೆಪ್ ಹಾಕಿದರು.
ಹಿಂದೂ ಮಹಾಗಣಪತಿ ವಿಸರ್ಜನೆ ಹಿನ್ನೆಲೆಯಲ್ಲಿ ನಗರದಲ್ಲಿ ನಡೆದ ಶೋಭಯಾತ್ರೆ ರಂಗು ವರ್ಣಿಸಲು ಪದಪುಂಜ ಸಾಲದು. ಜನಮನ ಸೂರೆಗೊಂಡಿತು. ನಗರದೆಲ್ಲೆಡೆ ಕೇಸರಿಧ್ವಜ, ಬಾವುಟಗಳಿಂದ ಅಲಂಕಾರ ಮಾಡಲಾಗಿತ್ತು.
ನಗರದ ಹೈಸ್ಕೂಲ್ ಮೈದಾನದಿಂದ ಆರಂಭಗೊಂಡ ಶೋಭಾಯಾತ್ರೆಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್, ಸಂಸದ ಜಿ.ಎಂ. ಸಿದ್ದೇಶ್ವರ್, ಮಾಜಿ ಸಚಿವ ಎಸ್.ಎ ರವೀಂದ್ರನಾಥ್,ಕಣ್ವಕುಪ್ಪಿ ಗವಿಮಠದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರು ಚಾಲನೆ ನೀಡಿದರು.
ಮಹಿಳೆಯರು, ಯುವತಿಯರಿಗೆ ವಿಶೇಷ ಡಿಜೆ ನೀಡಿದ್ದು ಸ್ಪೆಷಲ್. ಶೋಭಾಯಾತ್ರೆ ಸಾಗುವ ಮಾರ್ಗದುದ್ದಕ್ಕೂ ಶುಭ ಕೋರುವ ಕೇಸರಿ ಧ್ವಜಗಳು ರಾರಾಜಿಸುತ್ತಿದ್ದು ಬೃಹತ್ ಗಾತ್ರದ ಫ್ಲೆಕ್ಸ್, ಬಂಟಿಂಗ್ಸ್ ನಿಂದಾಗಿ ಇಡೀ ದಾವಣಗೆರೆ
ಕೇಸರಿ ಲೋಕದಂತಾಗಿತ್ತು.
ನಾಸಿಕ್ ಡೋಲು,ಡೊಳ್ಳು, ಚಂಡೆಮದ್ದಳೆ, ನಂದಿಕೋಲು, ಸಮ್ಮಾಳ, ಗೊಂಬೆಕುಣಿತ,ಸೋಮನಕುಣಿತ, ಪೂಜಾಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮತ್ತಷ್ಟು ಕಳೆಗಟ್ಟುವಂತೆ ಮಾಡಿತು. ನಾಡಿನ ಸಂಸ್ಕೃತಿ , ಸಂಪ್ರದಾಯ ವೈಭವ, ಸಿದ್ದಗಂಗಾ ಶ್ರೀಗಳು, ಒನಕೆ ಓಬವ್ವ, ವೀರಮದಕರಿ, ಭಾರತೀಯ ಸೇನೆ ಸೇರಿದಂತೆ ವಿವಿಧ ರೀತಿಯ ರೂಪಕ, ಮಹಾನ್ ದಾರ್ಶನಿಕರು, ಸಂತರ ಸ್ಥಬ್ಧಚಿತ್ರಗಳು ಗಮನ ಸೆಳೆದವು.
ನಗರದ ಅಕ್ಕಮಹಾದೇವಿ ರಸ್ತೆ, ಜಯದೇವ ವೃತ್ತ,ಪಿಬಿ ರಸ್ತೆ,ಹಳೇ ಬಸ್ ನಿಲ್ದಾಣ, ಅರಸು ಕ್ರಾಸ್,ಮಹಾನಗರ ಪಾಲಿಕೆ,ರಾಣಿ ಚೆನ್ನಮ್ಮ ವೃತ್ತ,ಈದ್ಗಾ ಮೈದಾನ, ಮದೀನ ಮಸೀದಿ,ಕೋರ್ಟ್ ವೃತ್ತದ ಮೂಲಕ ಸಂಗೊಳ್ಳಿ ರಾಯಣ್ಣ ವೃತ್ತ ತಲುಪಿದ ನಂತರ ಶೋಭಾಯಾತ್ರೆ ಕೊನೆಗೊಂಡಿತು.
ಬಿಗಿ ಬಂದೋಬಸ್ತ್:
ಶೋಭಾಯಾತ್ರೆಯಲ್ಲಿ ಲಕ್ಷಾಂತರ ಜನರು ಸೇರಿದ್ದ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬೆಳಿಗ್ಗೆ ಆರು ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಮದ್ಯ ನಿಷೇಧ ಆದೇಶ ಹೊರಡಿಸಲಾಗಿತ್ತು. ಕ್ಷಿಪ್ರ ಕಾರ್ಯಪಡೆ, ಡಿಎಆರ್ ತುಕಡಿಗಳು, ಕೆಎಸ್ ಆರ್ ಪಿ ತುಕಡಿಗಳು, ದಾವಣಗೆರೆ,
ಬೇರೆ ಜಿಲ್ಲೆಗಳಿಂದ ಬಂದಿದ್ದ ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿತ್ತು.