SUDDIKSHANA KANNADA NEWS/ DAVANAGERE/ DATE:19-10-2023
ದಾವಣಗೆರೆ (Davanagere) : ವಿದ್ಯುತ್ ತಾರತಮ್ಯ ನೀತಿ ವಿರುದ್ಧ ಸಿಡಿದೆದಿದ್ದರು ರೈತರು ಎಸ್ಕಾಂ ಕಚೇರಿಗಳ ಮುಂದೆ ಪ್ರತಿಭಟನೆಗೆ ಕರೆ ಕೊಟ್ಟಿದ್ದು, ದಾವಣಗೆರೆಯಲ್ಲಿಯೂ ಕರ್ನಾಟಕ ರಾಜ್ಯ ರೈತ ಸಂಘ (ಪುಟ್ಟಣ್ಣಯ್ಯ ಬಣ)ದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ದಾವಣಗೆರೆ ಬೆಸ್ಕಾಂನ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಮನವಿ ಸಲ್ಲಿಸಿದರು.
Read Also This Story:
Bangalore: ಸಿ. ಎಂ. ಇಬ್ರಾಹಿಂಗೆ ಕೊಕ್, ಹೆಚ್. ಡಿ. ಕುಮಾರಸ್ವಾಮಿಗೆ ಪಟ್ಟ: ಜೆಡಿಎಸ್ ರಾಜ್ಯ ಘಟಕ ವಿಸರ್ಜಿಸಿದ ಹೆಚ್. ಡಿ. ದೇವೇಗೌಡ
ಕೃಷಿ ಪಂಪ್ ಸೆಟ್ ಗಳಿಗೆ 7 ಗಂಟೆ 3 ಫೇಸ್ ವಿದ್ಯುತ್ ಸರಬರಾಜು ಮಾಡಬೇಕು. ರಾಜ್ಯದ 192 ಕ್ಕಿಂತಲೂ ಹೆಚ್ಚು ತಾಲ್ಲೂಕುಗಳು ಸಂಪೂರ್ಣ ಬರಗಾಲಕ್ಕೆ ಒಳಗಾಗಿವೆ. ಈ ಸಂಬಂಧ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸನ್ನೂ ಕೂಡ ಮಾಡಿದೆ. ರೈತ ಸಮುದಾಯ ಒಂದಲ್ಲಾ ಒಂದು ಸಮಸ್ಯೆಯನ್ನು ಪ್ರತಿನಿತ್ಯ ಎದುರಿಸುವಂತಾಗಿದೆ. ರಾಜ್ಯದ 45 ಲಕ್ಷಕ್ಕಿಂತಲೂ ಹೆಚ್ಚು ರೈತ ಕುಟುಂಬಗಳು ಪಂಪ್ಸೆಟ್ ನೀರಾವರಿ ಮೂಲಕ ತೋಟಗಾರಿಕೆ ಹಾಗೂ ಇತರೆ ಫಸಲುಗಳನ್ನು ಬೆಳೆದಿದ್ದು, ವಿದ್ಯುತ್ ಸರಬರಾಜಿನ ವ್ಯತ್ಯಯದಿಂದಾಗಿ ನಷ್ಟ ಅನುಭವಿಸಬೇಕಾದ ಪರಿಸ್ಥಿತಿ ಬಂದಿದೆ ಎಂದು ಅಳಲು ತೋಡಿಕೊಂಡರು.
ಬರಗಾಲದ ಛಾಯೆ ಮೂಡಿರುವುದು ಜೂನ್ ತಿಂಗಳಿನಲ್ಲೇ ಸರ್ಕಾರದ ಅರಿವಿನಲ್ಲಿದ್ದಾಗ್ಯೂ ರಾಜ್ಯ ಸರ್ಕಾರ ಈ ಸಂಬಂಧ ವಿದ್ಯುತ್ ಕ್ಷಾಮದ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಳ್ಳದೇ ಇರುವುದು ಖಂಡನೀಯ. ಈಗ ಲಭ್ಯವಿರುವ ವಿದ್ಯುತ್ ವಿತರಣೆಯಲ್ಲೂ ಕೂಡ ಕೈಗಾರಿಕೆಗಳಿಗೆ ಎಂದಿನಂತೆ ಮುಂದುವರೆಸುತ್ತಾ ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಿ ತಾರತಮ್ಯ ಮಾಡಲಾಗುತ್ತಿದೆ. ಇದು ಸರಿಯಲ್ಲ. ಸರ್ಕಾರ ಕೊಟ್ಟ ಮಾತಿನಂತೆ 7 ಗಂಟೆಗಳ ಕಾಲ ಕೃಷಿ ಪಂಪ್ಸೆಟ್ಗಳಿಗೆ 3 ಫೇಸ್ ಗುಣಾತ್ಮಕ ವಿದ್ಯುತ್ನ್ನು ಸರಬರಾಜು ಮಾಡಿ ಪಂಪ್ಸೆಟ್ ಮೇಲೆ ಅವಲಂಬಿಸಿರುವ ರೈತರನ್ನು ರಕ್ಷಿಸಬೇಕು . ಇಲ್ಲದಿದ್ದಲ್ಲಿ ರೈತರು ಹೊಂದುವ ಫಸಲು ನಷ್ಟಕ್ಕೆ ಸರ್ಕಾರವೇ ನೇರ ಹೊಣೆ ಹೊರಬೇಕು ಎಂದು ಎಚ್ಚರಿಕೆ ನೀಡಿದರು.
ಅನಾವಶ್ಯಕವಾಗಿ ಪೋಲು ಮಾಡಲಾಗುತ್ತಿರುವ ವಿದ್ಯುತ್ಗೆ ಕಡಿವಾಣ ಹಾಕಬೇಕು ಸೌರ ವಿದ್ಯುತ್ ಉತ್ಪಾದನೆಗೆ ಹೆಚ್ಚು ಒತ್ತು ನೀಡಬೇಕು. ಎಲ್ಲಾ ಸಕ್ಕರೆ ಕಾರ್ಖಾನೆಗಳು ವಿದ್ಯುತ್ ಉತ್ಪಾದನೆ ಮಾಡುವುದನ್ನು ಕಡ್ಡಾಯಗೊಳಿಸಬೇಕು. ರಾಜ್ಯಾದ್ಯಂತ ಅವಶ್ಯಕತೆ ಇರುವ ಕಡೆ ವಿದ್ಯುತ್ ಉಪ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರ ತುರ್ತು ಕ್ರಮ ಕೈಕೊಳ್ಳಬೇಕು. ಸುಟ್ಟು ಹೋಗಿರುವ ವಿದ್ಯುತ್ ಟಾನ್ಸ್ಫಾರಂಗಳನ್ನು ಸರ್ಕಾರ ನಿಗಧಿ ಮಾಡಿರುವ ಸಮಯದೊಳಗಡೆ ಬದಲಾಯಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು. ರೈತ ನಾಯಕ ಪ್ರೊ . ಎಂ.ಡಿ.ಎನ್.ರವರ ಕರೆಯ ಮೇರೆಗೆ ಕರ ನಿರಾಕರಣೆ ಚಳುವಳಿಯಲ್ಲಿ ಬಾಕಿ ಉಳಿಸಿಕೊಂಡಿರುವ ಗೃಹ ವಿದ್ಯುತ್ ಬಾಕಿಯನ್ನು 2013-18ರಲ್ಲಿ ತಮ್ಮ ಸರ್ಕಾರ ಇದ್ದಾಗ ಹಳೆ ವಿದ್ಯುತ್ ಬಾಕಿಯನ್ನು ಮನ್ನಾ ಮಾಡಲು ತೀರ್ಮಾನಿಸಿರುವುದನ್ನು ಕೂಡಲೇ ಜಾರಿಗೆ ತಂದು ಬಾಕಿ ಮತ್ತು ಬಡ್ಡಿಯನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಬಳ್ಳಾಪುರ ಹನುಮಂತಪ್ಪನವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೊಗ್ಗನೂರು ಹನುಮಂತಪ್ಪ, ಕರಿಲಕ್ಕೆನಳ್ಳಿ ರೇವಣಸಿದ್ದಪ್ಪ, ಅಣಬೇರು ಅಣ್ಣಪ್ಪ, ಚಿನ್ನಸಮುದ್ರದ ಭೀಮಾನಾಯ್ಕ್, ಕೊಗ್ಗನೂರು ಎ ಮಂಜುನಾಥ, ಬಲ್ಲೂರು ಅಣ್ಣಪ್ಪ, ಎಸ್. ಟಿ.ಪರಮೇಶ್ವರಪ್ಪ ಮುಂತಾದವರು ಭಾಗವಹಿಸಿದ್ದರು. ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್, ರೈತ ಮುಖಂಡರಾದ ಕೊಳೇನಹಳ್ಳಿ ಬಿ ಎಂ ಸತೀಶ್, ಧನಂಜಯ ಕಡ್ಲೆಬಾಳ್, ಎನ್ ಹೆಚ್ ಹಾಲೇಶ್, ವಾಟರ್ ಮಂಜುನಾಥ, ಪರಶುರಾಮ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿ ಪ್ರತಿಭಟನೆಗೆ ಬೆಂಬಲ ನೀಡಿದರು.