ದಾವಣಗೆರೆ: ದಾವಣಗೆರೆಯಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಕಲ್ಲು ತೂರಾಟ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು ಈ ಬಾರಿ ಅರವತ್ತು ಸಾವಿರ ಗಣೇಶಗಳ ಪ್ರತಿಷ್ಠಾಪನೆಯಾಗಿತ್ತು. ದಾವಣಗೆರೆಯಲ್ಲಿ ಕಲ್ಲು ತೂರಾಟ ನಡೆದಿದ್ದು, ನಾಗಮಂಗಲದಲ್ಲಿ ಗಲಭೆ ನಡೆದಿದೆ. ಇಲ್ಲಿ ಪೊಲೀಸರ ಕರ್ತವ್ಯ ನಿರ್ಲಕ್ಷ್ಯ ಕಂಡುಬಂದಿದ್ದು, ಡಿ.ವೈ.ಎಸ್.ಪಿ ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದರು.
ಕೋಮು ಗಲಭೆಗೆ ಬಿಜೆಪಿ ಪ್ರಚೋದನೆ:
ಕೋಮು ಗಲಭೆಗಳಿಗೆ ಬಿಜೆಪಿ ಪ್ರಚೋದನೆ ನೀಡುತ್ತಿದೆ. ಇದಕ್ಕೆ ಬಿಜೆಪಿ ಕಾರಣ ಎಂದು ಮುಖ್ಯಮಂತ್ರಿಗಳು ಆರೋಪಿಸಿದರು.
ಹೆಸರಾಂತ ಹಿರಿಯ ಸಾಹಿತಿ ಹಂ.ಪಾ.ನಾಗರಾಜಯ್ಯ ಅವರನ್ನು ಈ ಬಾರಿಯ ದಸರಾ ಉದ್ಘಾಟನೆಗೆ ಆಹ್ವಾನಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಶಾಸಕ ಮುನಿರತ್ನ ಅವರ ಮೇಲೆ ಮೇಲಿನ ಮೂರು ಪ್ರಕರಣಗಳು ದಾಖಲಾಗಿದ್ದು, ಅವುಗಳನ್ನು ಎಸ್.ಐ ಟಿಗೆ ವಹಿಸಬೇಕೆಂದು ಇಂದು ತಮ್ಮನ್ನು ಭೇಟಿ ಮಾಡಿದ ಒಕ್ಕಲಿಗ ಸಚಿವರು ಹಾಗೂ ಶಾಸಕರು ಮನವಿ ಮಾಡಿದ್ದಾರೆ. ಈ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ್ ಅವರೊಂದಿಗೆ ಮಾತನಾಡುವುದಾಗಿ ತಿಳಿಸಿದ್ದೇನೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಮರು ಪರೀಕ್ಷೆಯನ್ನು ಆದಷ್ಟೂ ಶೀಘ್ರದಲ್ಲಿಯೇ ಏರ್ಪಡಿಸುವಂತೆ ಕೆ.ಪಿ.ಎಸ್.ಸಿ ಗೆ ಸೂಚಿಸಲಾಗಿದೆ ಎಂದರು.
ಕಾನ್ ಸ್ಟೇಬಲ್ ಹುದ್ದೆಗಳಿಗೆ ವಯೋಮಿತಿಯನ್ನು 27 ರಿಂದ 33 ವರ್ಷಕ್ಕೆ ಏರಿಸಬೇಕೆಂಬ ಬೇಡಿಕೆ ಬಗ್ಗೆ ಮಾತನಾಡಿ ಈ ಕುರಿತು ಒಂದು ಬಾರಿಯ ತೀರ್ಮಾನ ಕೈಗೊಳ್ಳುವಂತೆ ಗೃಹ ಸಚಿವರಿಗೆ ತಿಳಿಸಿದ್ದೇನೆ ಎಂದರು.
ಡಿನೋಟಿಫೈ ಪ್ರಕರಣಕ್ಕೆ ಲೋಕಾಯುಕ್ತ ತನಿಖೆ ಬಗ್ಗೆ ಪರಿಶೀಲನೆ:
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪರವರ ವಿರುದ್ಧದ ಡಿನೋಟಿಫಿಕೇಷನ್ ಪ್ರಕರಣದಲ್ಲಿ 2021 ರಿಂದ ಲೋಕಾಯುಕ್ತದವರು ತನಿಖೆ ನಡೆಸದಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ನಿನ್ನೆ ದಿನೇಶ್ ಗುಂಡೂರಾವ್, ಕೃಷ್ಣಬೈರೇಗೌಡ, ಸಂತೋಷ್ ಲಾಡ್ ಸೇರಿದಂತೆ ಸಚಿವರು ಈ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಡಿನೋಟಿಫೈ ಪ್ರಕರಣದ ಜಮೀನು ಬಹಳ ಬೆಲೆಬಾಳುವಂಥದ್ದಾಗಿದ್ದು, ಕುಮಾರಸ್ವಾಮಿಯವರು ತಮ್ಮ ಸಂಬಂಧಿಕರಿಗೆ ಡಿನೋಟಿಫೈ ಮಾಡಿ , ಜಿಪಿಓ ಆಗಿದೆ. ಅಧಿಕಾರಿಗಳು ಈ ಕ್ರಮವನ್ನು ಕಾನೂನಾತ್ಮಕವಲ್ಲವೆಂದರೂ ಈ ರೀತಿ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಪಡೆದು ಪರಿಶೀಲನೆ ನಡೆಸಲಾಗುವುದು ಎಂದರು.
ಸರ್ಕಾರ ಯಾರ ಮೇಲೂ ಆರೋಪ ಮಾಡುವುದಿಲ್ಲ:
ವಿಪಕ್ಷಗಳು ಗಾಜಿನ ಮನೆಯಲ್ಲಿ ಕುಳಿತು ಸರ್ಕಾರದ ಮೇಲೆ ಆರೋಪ ಹೊರಸುತ್ತಿವೆಯೇ ಎಂಬ ಮಾಧ್ಯಮದವರ ಅಭಿಪ್ರಾಯಕ್ಕೆ ಪ್ರತಿಕ್ರಿಯೆ ನೀಡಿ, ನಾವು ಯಾರ ಮೇಲೆಯೂ ಆರೋಪ ಹೊರಿಸುವ ಕೆಲಸವನ್ನು ಮಾಡಿಲ್ಲ. ಕುಮಾರಸ್ವಾಮಿಯವರು ಎಂದಿಗೂ ಹಿಟ್ ಎಂಡ್ ರನ್ ಮಾಡುವವರಾಗಿದ್ದು, ಯಾವ ಆರೋಪಕ್ಕೂ ತಾರ್ಕಿಕ ಅಂತ್ಯ ಕಾಣಿಸುವುದಿಲ್ಲ. ಕುಮಾರಸ್ವಾಮಿಯವರು ಕೇಂದ್ರ ಸಚಿವರಾಗಿದ್ದು, ಜವಾಬ್ದಾರಿಯುತವಾಗಿ ವರ್ತಿಸಬೇಕು. ವಿಷಯದ ಸತ್ಯಾಸತ್ಯತೆಯನ್ನು ಅರಿತು ಮಾತನಾಡಬೇಕು ಎಂದರು.