SUDDIKSHANA KANNADA NEWS/ DAVANAGERE/ DATE:04-04-2025
ದಾವಣಗೆರೆ: ಕೃಷಿ ಇಲಾಖೆ ವತಿಯಿಂದ 2025-26ನೇ ಬೇಸಿಗೆ ಹಂಗಾಮಿನಲ್ಲಿ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರಗಳನ್ನು ಸ್ವತಃ ದಾಖಲಿಸಲು ‘ಬೆಳೆ ಸಮೀಕ್ಷೆ’ಗೆ ಚಾಲನೆ ನೀಡಿದ್ದು, ಮೊಬೈಲ್ ಆಪ್ ಮೂಲಕ ರೈತರು ಬೆಳೆ ದಾಖಲಿಸುವಂತೆ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಸಲಹೆ ನೀಡಿದರು.
ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ ‘ಬೆಳೆ ಸಮೀಕ್ಷೆ ಕೈಪಿಡಿ’ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೈತರಿಂದಲೇ ಬೆಳೆ ಸಮೀಕ್ಷೆ ಮಾಡುವ ರೈತಸ್ನೇಹಿ ಕಾರ್ಯಕ್ರಮ ಇದಾಗಿದ್ದು, ಈ ಮಾಹಿತಿಯನ್ನು ಬೆಳೆ ಸಾಲ, ಬೆಳೆ ವಿಮೆ, ಬೆಂಬಲ ಬೆಲೆ ಖರೀದಿ, ಬೆಳೆ ಪರಿಹಾರ ಮತ್ತು ವಿವಿಧ ಇಲಾಖೆಗಳ ಸೌಲಭ್ಯ ಪಡೆಯಲು ಹಾಗೂ ಪಹಣಿಯಲ್ಲಿ ಬೆಳೆ ವಿವರ ದಾಖಸಲು ಅನುಕೂಲವಾಗಲಿದೆ. ಆದ್ದರಿಂದ ಸ್ವತಃ ರೈತರೇ ತಮ್ಮ ಮೊಬೈಲ್ನಲ್ಲಿ ಆಪ್ ಡೌನ್ಲೌಡ್ ಮಾಡಿಕೊಂಡು ಆ ಆಪ್ ಮೂಲಕ ಸಕಾಲಿಕವಾಗಿ ಎಲ್ಲಾ ಬೆಳೆಗಳ ವಿವರಗಳನ್ನು ಅಪ್ಲೋಡ್ ಮಾಡುವುದರಿಂದ ನ್ಯೂನ್ಯತೆಗಳನ್ನು ಕಡಿಮೆ ಮಾಡಬಹುದು. ಹಾಗೂ ಸೌಲಭ್ಯಗಳಿಂದ ವಂಚಿತರಾಗುವುದನ್ನು ಸಹ ತಪ್ಪಿಸಬಹುದಾಗಿದೆ ಎಂದರು.
ಆಪ್ ಮೂಲಕ ಹೇಗೆ ಬೆಳೆ ದಾಖಲಿಸಬೇಕೆಂದು ರೈತರಿಗಾಗಿ ಇಲಾಖೆ ಬೆಳೆ ಸಮೀಕ್ಷೆ ಕೈಪಿಡಿ ಬಿಡುಗಡೆ ಮಾಡಿದೆ. ಇದರಿಂದ ಮಾಹಿತಿ ತಿಳಿದು ಜಮೀನುಗಳಲ್ಲಿ ನೀವು ಬೆಳೆದ ಬೆಳೆಗಳನ್ನು ಮೊಬೈಲ್ ಆಪ್ ಮೂಲಕ ಸರಿಯಾಗಿ ಬೆಳೆ ದಾಖಲಿಸಬೇಕು. ನೀವು ದಾಖಲಿಸದಿದ್ದರೆ ಇಲಾಖೆಯಿಂದ ನಿಯೋಜಿಸಿರುವ ಪಿಆರ್ಗಳು (ಖಾಸಗಿ ನಿವಾಸಿಗಳು) ಬೆಳೆ ದಾಖಲಿಸಲಿದ್ದಾರೆ. ಬೆಳೆ ದಾಖಲಿಸುವುದರಿಂದ ಸರ್ಕಾರದಿಂದ ಬೆಳೆ ಪರಿಹಾರ, ಬೆಳೆ ವಿಮೆ ಪಡೆಯಲು ಅನುಕೂಲವಾಗಲಿದೆ ಎಂದರು.
ಸರ್ಕಾರ ರೈತರಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಹಿಂದಿನ ಸರ್ಕಾರ ಕೃಷಿ ಹೊಂಡಗಳನ್ನು ಕೊಡುವುದನ್ನು ಸ್ಥಗಿತಗೊಳಿಸಿತ್ತು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೆ ಈ ಯೋಜನೆಗೆ ಚಾಲನೆ ನೀಡಿದ್ದಾರೆ. ಇದರಿಂದ ನನ್ನ ಕ್ಷೇತ್ರ ಮಳೆ ಆಧಾರಿತ ಪ್ರದೇಶವಾಗಿದ್ದರಿಂದ ಕೃಷಿ ಹೊಂಡಗಳು ರೈತರಿಗೆ ವರದಾನವಾಗಿದೆ. ಈ ಕೃಷಿ ಹೊಂಡಗಳಿಂದ
ರೈತರು ಹೈನುಗಾರಿಕೆ ಮಾಡಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಬೆಳೆ ಸಮೀಕ್ಷೆ ನಡೆಸುವ ಸಿಬ್ಬಂದಿಗಳಿಗೆ ಶಾಸಕ ಕೆ.ಎಸ್.ಬಸವಂತಪ್ಪ ಜಾಕೀಟ್ ವಿತರಿಸಿದರು. ಈ ವೇಳೆ ಕೃಷಿ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ಸಹಾಯಕ ಕೃಷಿ ನಿರ್ದೇಶಕ ಶ್ರೀಧರಮೂರ್ತಿ, ಕೃಷಿ ಅಧಿಕಾರಿಗಳಾದ ಚಂದ್ರಪ್ಪ, ಬೀರಪ್ಪ, ಬೆಳೆ ಸಮೀಕ್ಷೆ ನಡೆಸುವ ಸಿಬ್ಬಂದಿಗಳು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.