SUDDIKSHANA KANNADA NEWS/ DAVANAGERE/ DATE:16-08-2024
ದಾವಣಗೆರೆ: ಗೃಹಿಣಿಯೊಬ್ಬರು ಮೃತಪಟ್ಟ ಘಟನೆ ನಗರದ ವಿದ್ಯಾನಗರದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ ನಡೆದಿದ್ದು, ಆಕೆ ಪತಿ ವಿರುದ್ಧವೇ ಮೃತಳ ಕುಟುಂಬದವರು ಆರೋಪ ಮಾಡಿದ್ದು, ಇದೊಂದು ಕೊಲೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ತಳಕು ಗ್ರಾಮದ ಸುಮಲತಾ (30) ಸಾವು ಕಂಡ ಮಹಿಳೆ. ಕಳೆದ ಹನ್ನೊಂದು ವರ್ಷಗಳ ಹಿಂದೆ ದಾವಣಗೆರೆ ಬಂದಿದ್ದ ದಂಪತಿ ಇಲ್ಲಿಯೇ ವಾಸವಾಗಿದ್ದರು. ಸುಮಲತಾ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಹೇಡಿಯಲ್ಲ, ಆಕೆಯನ್ನು ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲಾಗಿದೆ ಎಂದು ಸುಮಲತಾಳ ಕುಟುಂಬದವರು ಆರೋಪಿಸಿದ್ದಾರೆ.
ಸುಮಲತಾ ದೇಹದ ಮೇಲೆ ಗಾಯಗಳ ಗುರುತು ಕಂಡು ಬಂದಿದೆ. ಸುಮಲತಾಳನ್ನು ಥಳಿಸಿ ಕೊಲೆ ಮಾಡಲಾಗಿದೆ. ಪತಿ ಶಿವಮೂರ್ತಿ ಹಾಗೂ ಆತನ ಮೊದಲ ಹೆಂಡತಿಯ ಮಕ್ಕಳು ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ಈ ಸಂಬಂಧ ತನಿಖೆ ನಡೆಸಿ, ನ್ಯಾಯ ದೊರಕಿಸಿಕೊಡಬೇಕು ಎಂದು ಸುಮಲತಾ ಅವರ ತಂದೆ ವಿದ್ಯಾನಗರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಒತ್ತಾಯಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.