SUDDIKSHANA KANNADA NEWS/ DAVANAGERE/ DATE:23-11-2024
ಬೆಂಗಳೂರು: ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯಲ್ಲಿ ಸಿ. ಪಿ. ಯೋಗೀಶ್ವರ್ ಭರ್ಜರಿ ಜಯ ಗಳಿಸಿದ್ದಾರೆ. ಈ ಮೂಲಕ ಎರಡು ಸೋಲುಗಳ ಬಳಿಕ ಮತ್ತೆ ಜಯದ ಹಾದಿಗೆ ಮರಳಿದ್ದಾರೆ. ಇನ್ನು ಎನ್ ಡಿ ಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹ್ಯಾಟ್ರಿಕ್ ಸೋಲು ಕಂಡಿದ್ದಾರೆ. ಇದರೊಂದಿಗೆ ಮಾಜಿ ಪ್ರಧಾನಿ ಹೆಚ್. ಡಿ.ದೇವೇಗೌಡರ ಕುಟುಂಬಕ್ಕೆ ಭಾರೀ ಮುಖಭಂಗವಾಗಿದೆ.
ಮಂಡ್ಯ ಲೋಕಸಭೆ, ರಾಮನಗರ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದ ನಿಖಿಲ್ ಕುಮಾರಸ್ವಾಮಿ ಅವರು, ಮೂರನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ನಿಖಿಲ್ ಕುಮಾರಸ್ವಾಮಿ ಪರ ತಂದೆ ಹೆಚ್. ಡಿ. ಕುಮಾರಸ್ವಾಮಿ, ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ, ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ ಸೇರಿದಂತೆ ಘಟಾನುಘಟಿಗಳು ಪ್ರಚಾರ ನಡೆಸಿದ್ದರು. ಯೋಗೀಶ್ವರ್ ಪರ ಡಿ. ಕೆ. ಶಿವಕುಮಾರ್, ಡಿ. ಕೆ. ಸುರೇಶ್, ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಘಟಾನುಘಟಿಗಳು ಪ್ರಚಾರ ನಡೆಸಿದ್ದರು.
ಮೊದಲ ಆರು ಸುತ್ತಿನ ಮತ ಎಣಿಕೆಯಲ್ಲಿ ಮುನ್ನಡೆ ಪಡೆದಿದ್ದ ನಿಖಿಲ್ ಕುಮಾರಸ್ವಾಮಿ ಅವರು ಬಳಿಕ ಸಿ. ಪಿ. ಯೋಗೀಶ್ವರ್ ಅವರದ್ದೇ ಮುನ್ನಡೆ. ಈ ಮೂಲಕ ಎರಡು ಸೋಲುಗಳ ನೋವನ್ನು ಈ ಗೆಲುವಿನ ಮೂಲಕ ಮರೆತಿದ್ದಾರೆ. ಹೆಚ್. ಡಿ. ಕುಮಾರಸ್ವಾಮಿ ವಿರುದ್ಧ ಸೋತಿದ್ದ ಯೋಗೀಶ್ವರ್ ಅವರ ಪುತ್ರನನ್ನು ಸೋಲಿಸುವ ಮೂಲಕ ಸೇಡು ತೀರಿಸಿಕೊಂಡರೆ, ಡಿ. ಕೆ. ಶಿವಕುಮಾರ್, ಡಿ. ಕೆ. ಸುರೇಶ್ ಅವರ ಕಾರ್ಯತಂತ್ರ ಫಲಕೊಟ್ಟಿದೆ. ಈ ಮೂಲಕ ಕುಮಾರಸ್ವಾಮಿ ಕುಟುಂಬಕ್ಕೆ ತಕ್ಕ ಪಾಠ ಕಲಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಸಿ. ಪಿ. ಯೋಗೀಶ್ವರ್ ಮುನ್ನಡೆ ಸಾಧಿಸಿದ ಶುರು ಮಾಡಿದ ಮೇಲೆ ಹಿಂದಿರುಗಿ ನೋಡಲೇ ಇಲ್ಲ. ಎನ್ ಡಿ ಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಭರ್ಜರಿ ಜಯ ಭೇರಿ ಬಾರಿಸಿದ್ದಾರೆ. ಸಚಿವ ಜಮೀರ್ ಅಹ್ಮದ್ ಅವರ ಕುಮಾರಸ್ವಾಮಿ ಕುರಿತ ಹೇಳಿಕೆಗಳು ಯಾವುದೇ ಪರಿಣಾಮ ಬೀರಿಲ್ಲ. ನೀರಾವರಿ ಸೌಲಭ್ಯ ಕೊಟ್ಟು ಭಗೀರಥ ಎಂದು ಹೆಸರು ಪಡೆದಿದ್ದ ಸಿ. ಪಿ. ಯೋಗೀಶ್ವರ್ ಗೆ ಮತದಾರ ಕೈ ಬಿಟ್ಟಿಲ್ಲ. ಮೂರನೇ ಬಾರಿ ಸೋಲಬಾರದು ಎಂಬ ಕಾರಣಕ್ಕೆ ಮತ ಹಾಕಿ ಗೆಲ್ಲಿಸಿದ್ದಾರೆ.