SUDDIKSHANA KANNADA NEWS/ DAVANAGERE/ DATE-03-06-2025
ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯಾಗಿದ್ದು ಸ್ಮಾರ್ಟ್‍ಸಿಟಿಯಾಗಿದೆ. ಇಲ್ಲಿ ಬಡವರು, ಮಧ್ಯಮ ವರ್ಗದವರೂ ಕೈಗೆಟಕುವ ದರದಲ್ಲಿ ಮನೆಯನ್ನು ನಿರ್ಮಿಸಿಕೊಳ್ಳಲು ಮತ್ತು ವಾಸಿಸಲು ಅನುಕೂಲವಾಗುವಂತೆ ಪ್ರಾಧಿಕಾರದಿಂದ ಅಪಾರ್ಟ್‍ಮೆಂಟ್‍ಗಳ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ತಿಳಿಸಿದರು.
ಅವರು ದಾವಣಗೆರೆ-ಹರಿಹರ ನಗರಾಭಿವೃದ್ದಿ ಪ್ರಾಧಿಕಾರದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೊದಲ ಹಂತದಲ್ಲಿ ಜೆ.ಹೆಚ್.ಪಟೇಲ್ ಬಡಾವಣೆಯಲ್ಲಿ ನಿರ್ಮಾಣ ಮಾಡಲು ಡಿಪಿಆರ್ ತಯಾರಿಸಲು ಸೂಚನೆ ನೀಡಲಾಗಿದೆ. ಮತ್ತು ಖಾಸಗಿಯವರ ಸಹಭಾಗಿತ್ವದಲ್ಲಿಯು ಪ್ರಾಧಿಕಾರದಿಂದ ಹೊಸ ಬಡಾವಣೆಗಳನ್ನು ನಿರ್ಮಿಸಲು ಸಹ ಉದ್ದೇಶಿಸಲಾಗಿದೆ ಎಂದು ಹೇಳಿದರು.
ಸುರಕ್ಷತೆಗೆ ಆದ್ಯತೆ:
ಸ್ಮಾರ್ಟ್‍ಸಿಟಿ ಯೋಜನೆಯಡಿ ಅತ್ಯಾಧುನಿಕ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದರಿಂದ ನಗರದಲ್ಲಿ ನಡೆಯುತ್ತಿದ್ದ ಅನೇಕ ಕಳ್ಳತನ ಪ್ರಕರಣಗಳು ಸೇರಿದಂತೆ ಅಪರಾಧ ಪ್ರಕರಣಗಳ ಇಳಿಕೆಯಾಗಲು ಕಾರಣವಾಗಿದೆ. ರಾಜ್ಯದಲ್ಲಿ 6 ನಗರಗಳಲ್ಲಿ ಎಐ ಕ್ಯಾಮೆರಾಗಳನ್ನು ಅಳವಡಿಸಬೇಕೆಂದು ಸರ್ಕಾರ ಉದ್ದೇಶಿಸಿದ್ದು ಇದರಲ್ಲಿ ದಾವಣಗೆರೆಯು ಪ್ರಾಯೋಗಿಕ ಯೋಜನೆಯಲ್ಲಿ ಸೇರಿದೆ ಎಂದರು.