SUDDIKSHANA KANNADA NEWS/ DAVANAGERE/ DATE:14-02-2025
ದಾವಣಗೆರೆ: ಶ್ರಮಜೀವಿ ಬಂಜಾರ ಸಮುದಾಯದ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ದಿಗೆ ಸರ್ಕಾರ ಬದ್ಧವಾಗಿದೆ. ಮಕ್ಕಳ ಶಿಕ್ಷಣಕ್ಕಾಗಿ ಭಾಯಾಗಡ್ ನಲ್ಲಿ ಬರುವ ಶೈಕ್ಷಣಿಕ ಸಾಲಿನಿಂದ ವಸತಿ ಶಾಲೆ ಪ್ರಾರಂಭಿಸಲಾಗುತ್ತದೆ ಎಂದು ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ಹೇಳಿದರು.
ಅವರು ಶುಕ್ರವಾರ ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪ ಭಾಯಾಗಡ್ ನಲ್ಲಿ ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ತಾಂಡಾ ಅಭಿವೃದ್ದಿ ನಿಗಮದಿಂದ ಏರ್ಪಡಿಸಲಾದ ಸಂತ ಸೇವಾಲಾಲ್ ರವರ 286 ನೇ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳ ಉದ್ಘಾಟಿಸಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಬಂಜಾರ ಸಮುದಾಯ ಶ್ರಮಪಡುವವರಾಗಿದ್ದು ಉದ್ಯೋಗ ಅರಿಸಿ ವಲಸೆ ಹೋಗುವುದೇ ಹೆಚ್ಚು, ಇದರಿಂದ ಅವರ ಮಕ್ಕಳು ಶಿಕ್ಷಣದಿಂದ ವಂಚಿತರಾಗುವರು. ಈ ಹಿನ್ನಲೆಯಲ್ಲಿ ಸೂರಗೊಂಡನಕೊಪ್ಪದಲ್ಲಿ ಒಂದರಿಂದ ಪಿಯುಸಿ ವರೆಗೆ ವಸತಿಯುತ ಶಾಲೆ ಆರಂಭಿಸಲು ಮನವಿ ಮಾಡಿದ್ದು ಇದನ್ನು 2025-26 ನೇ ಸಾಲಿನ ಬಜೆಟ್ ನಲ್ಲಿ ಅನುಮೋದನೆ ಪಡೆದು ಪ್ರಾರಂಭಿಸಲಾಗುತ್ತದೆ, ಇದಕ್ಕಾಗಿ ರೂ.40 ಕೋಟಿ ವರೆಗೆ ಅನುದಾನ ವೆಚ್ಚ ಮಾಡಲಾಗುತ್ತದೆ ಎಂದರು.
ಸಂತ ಸೇವಾಲಾಲ್ ರವರು ನೀತಿವಂತರು, ತತ್ವ ಸಿದ್ಧಾಂತಗಳ ಪ್ರತಿಪಾದಕರಾಗಿದ್ದವರು. ಇವರ ಆರಾಧನೆಗಾಗಿ ರಾಜ್ಯಾದಲ್ಲಿ ಇಲಾಖೆಯಿಂದ 1500 ಕ್ಕೂ ಹೆಚ್ಚು ಬಂಜಾರಭವನಗಳ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.
ಸಂತ ಸೇವಾಲಾಲ್ ಜನ್ಮಸ್ಥಳವನ್ನು ಅಭಿವೃದ್ದಿ ಮಾಡಲು ಟ್ರಸ್ಟ್ ಮಾಡಲಾಗಿದ್ದು ಈ ವರ್ಷ ಇದಕ್ಕೆ ಅನುದಾನ ಒದಗಿಸಲಾಗುತ್ತದೆ. ಸಮುದಾಯವನ್ನು ಎಲ್ಲಾ ಹಂತದಲ್ಲಿ ಅಭಿವೃದ್ದಿಗೆ ಸರ್ಕಾರ ಬದ್ಧವಾಗಿದ್ದು ಎಲ್ಲಾ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲಾಗಿದೆ ಎಂದರು.
ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ ಸಂತ ಸೇವಾಲಾಲ್ ಜನ್ಮಸ್ಥಳ ಇನ್ನಷ್ಟು ಅಭಿವೃದ್ದಿಯಾಗಬೇಕಾಗಿದೆ. ಜೋಗದಿಂದ ಚಿಗಳಿಕಟ್ಟೆವರೆಗೆ ದ್ವಿಪಥ ರಸ್ತೆಯನ್ನು ಅಭಿವೃದ್ದಿಪಡಿಸಲು ಮನವಿ ಮಾಡಿದ್ದು ಬಜೆಟ್ ನಲ್ಲಿ ಅನುಮೋದನೆ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ಶೋಷಿತ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವುದು ಸರ್ಕಾರದ ಕೆಲಸವಾಗಿದೆ. ಜನರು ಸಂಘಟಿತರಾಗಲು ಶಿಕ್ಷಣವೊಂದೇ ದಾರಿದೀಪವಾಗಿದೆ. ಇಂದು ಶೋಷಿತ ಸಮಾಜಗಳು ಮುಂದೆ ಬಂದಿವೆ ಎಂದರೆ, ಅದಕ್ಕೆ ಸಂವಿಧಾನದಿಂದ ಬೆಳೆಯಲು ಸಾಧ್ಯವಾಗಿದ್ದು ಸಂವಿಧಾನ ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಕರೆ ನೀಡಿದರು.
ವಿಧಾನಸಭಾ ಉಪಸಭಾಪತಿ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ಅಧ್ಯಕ್ಷರಾದ ರುದ್ರಪ್ಪ ಮಾನಪ್ಪ ಲಮಾಣಿಯವರು ಪ್ರಾಸ್ತಾವಿಕವಾಗಿ ಮಾತನಾಡಿ 2013 ರಿಂದ ಮಹಾಮಠ ಸಮಿತಿ ರಚನೆ ಮಾಡಿ ವಿವಿಧ ಅಭಿವೃದ್ದಿ ಕೆಲಸ ಮಾಡಲಾಗಿದೆ. ಮಠವನ್ನು ಇನ್ನು ಅಭಿವೃದ್ದಿ ಮಾಡಬೇಕಾಗಿದೆ. ಸಮುದಾಯದವರು ಕೆಲಸಕ್ಕಾಗಿ ವಲಸೆ ಹೋಗುವುದು ಸಾಮಾನ್ಯವಾಗಿದೆ. ಇದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗದಿರಲು ಪಿಯುಸಿವರೆಗೆ ವಸತಿ ಶಾಲೆ ಆರಂಭಿಸಬೇಕು ಮತ್ತು ಸಂಪರ್ಕ ರಸ್ತೆ ಅಭಿವೃದ್ದಿಪಡಿಸಬೇಕೆಂದ ಅವರು ಆಡಿ, ಹಟ್ಟಿ, ತಾಂಡಗಳಲ್ಲಿನ ನಿವಾಸಿಗಳಿಗೂ ಇ-ಸ್ವತ್ತು ಸಿಗುವಂತೆ ಮಾಡಬೇಕೆಂದರು.
ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ ಅಧ್ಯಕ್ಷತೆ ವಹಿಸಿದ್ದರು. ಮಹಾರಾಷ್ಟ್ರ ಸರ್ಕಾರದ ಮಣ್ಣು ಮತ್ತು ಜಲಸಂರಕ್ಷಣಾ ಸಚಿವ ಸಂಜಯ್ ಡಿ.ರಾಥೋಡ್, ಶಾಸಕ ಬಿ.ವೈ.ವಿಜಯೇಂದ್ರ, ಶಾಸಕ ಡಾ.ಚಂದ್ರು ಕೆ.ಲಮಾಣಿ, ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯ್ಕ್ ತಾಂಡಾ ಅಭಿವೃದ್ದಿ ನಿಗಮದ ಅಧ್ಯಕ್ಷ ಜಯದೇವ ನಾಯ್ಕ್,ಮಾಜಿ ಶಾಸಕ ಎಂ.. ಪಿ. ರೇಣುಕಾಚಾರ್ಯ, ಪಿ.ರಾಜೀವ್, ಕೆ.ಶಿವಮೂರ್ತಿನಾಯ್ಕ್, ಬಸವರಾಜ್ ನಾಯ್ಕ್, ಜಲಜಾನಾಯ್ಕ್, ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುರೇಶ್ ಬಿ.ಇಟ್ನಾಳ್ ಹಾಗೂ ಇನ್ನಿತರೆ ಮುಖಂಡರು ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸ್ವಾಗತಿಸಿದರು.