SUDDIKSHANA KANNADA NEWS/ DAVANAGERE/ DATE:0 8-03-2024
ನವದೆಹಲಿ: ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷವು ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಒಟ್ಟು 39 ಹುರಿಯಾಳುಗಳನ್ನು ಘೋಷಿಸಿದೆ. ಆದ್ರೆ, ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನು ಮೊದಲ ಪಟ್ಟಿಯಲ್ಲಿ ಘೋಷಣೆ ಮಾಡಲಾಗಿಲ್ಲ.
ನವದೆಹಲಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ. ಸಿ. ವೇಣುಗೋಪಾಲ್ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದರು.
ತುಮಕೂರಿನಿಂದ ಮುದ್ದಹನುಮೇಗೌಡ, ಹಾವೇರಿಯಿಂದ ಆನಂದ್ ಗಡ್ಡೇವರಮಠ, ಬೆಂಗಳೂರು ಗ್ರಾಮಾಂತರದಿಂದ ಡಿ. ಕೆ. ಸುರೇಶ್, ಶಿವಮೊಗ್ಗ ಗೀತಾ ಶಿವರಾಜ್ ಕುಮಾರ್, ವಿಜಯಪುರದಿಂದ ಎಸ್. ಆರ್. ಅಲಗೂರ, ಮಂಡ್ಯದಿಂದ ಸ್ಟಾರ್ ಚಂದ್ರು ಅಲಿಯಾಸ್ ವೆಂಕಟರಮಣ ಗೌಡ ಅವರಿಗೆ ಟಿಕೆಟ್ ಘೋಷಿಸಿದೆ.
ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೊದಲ ಪಟ್ಟಿಯಲ್ಲಿ ಹೆಸರು ಘೋಷಿಸಲಾಗುತ್ತದೆ ಎಂದು ಹೇಳಲಾಗಿತ್ತು. ಆದ್ರೆ, ಘೋಷಣೆ ಮಾಡಲಾಗಿಲ್ಲ. ಒಂದೇ ಹೆಸರು ಇರುವ ಕ್ಷೇತ್ರಗಳಲ್ಲಿ ಘೋಷಣೆ ಮಾಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ಹೇಳಿದ್ದರು. ಆದ್ರೆ, ದಾವಣಗೆರೆಯಲ್ಲಿ ಒಬ್ಬರ ಹೆಸರಿಲ್ಲ, ಪೈಪೋಟಿ ಇದೆ ಎಂಬುದು ಗೊತ್ತಾಗಿದೆ.
ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್ ಹಾಗೂ ಕಾಂಗ್ರೆಸ್ ಯುವ ನಾಯಕ ಜಿ. ಬಿ. ವಿನಯ್ ಕುಮಾರ್ ನಡುವೆ ನೇರ ಪೈಪೋಟಿ ಏರ್ಪಟ್ಟಿದ್ದು, ಈ ಬಗ್ಗೆ ಮತ್ತೊಮ್ಮೆ ಚರ್ಚಿಸಿ ಟಿಕೆಟ್ ಘೋಷಿಸುವ ಸಾಧ್ಯತೆ ಇದೆ ಎಂದು ದೆಹಲಿಯ ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಶಿವಮೊಗ್ಗದಿಂದ ಮತ್ತೆ ಗೀತಾ ಶಿವರಾಜ್ ಕುಮಾರ್ ಅವರಿಗೆ ಮಣೆ ಹಾಕಲಾಗಿದೆ. ತುಮಕೂರಿನಲ್ಲಿ ಮುದ್ದ ಹನುಮೇಗೌಡ ಅವರಿಗೆ ಟಿಕೆಟ್ ನೀಡಿದೆ. ಕಳೆದ ಬಾರಿ ಟಿಕೆಟ್ ನೀಡದ ಕಾರಣ ಮುದ್ದ ಹನುಮಗೌಡ ಬೇಸರಗೊಂಡು ಕಾಂಗ್ರೆಸ್ ಬಿಟ್ಟಿದ್ದರು. ಉಡುಪಿ – ಚಿಕ್ಕಮಗಳೂರು, ಚಿತ್ರದುರ್ಗ ಅಭ್ಯರ್ಥಿಗಳ ಘೋಷಣೆ ಮಾಡಲಾಗುತ್ತದೆ ಎಂದು ಹೇಳಲಾಗಿತ್ತಾದರೂ ಬಾಕಿ ಇಡಲಾಗಿದೆ. ಮಂಡ್ಯದಿಂದ ಸ್ಟಾರ್ ಚಂದ್ರು ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.
ಹಾವೇರಿ ಕ್ಷೇತ್ರದಲ್ಲಿ ಆನಂದ್ ಗಡ್ಡೇವರಮಠ ಅವರಿಗೆ ಘೋಷಣೆ ಮಾಡಲಾಗಿದ್ದರೆ, ಹಾಸನ ಕ್ಷೇತ್ರದಿಂದ ಹೆಚ್. ಡಿ. ರೇವಣ್ಣರ ವಿರುದ್ಧ ಸ್ಪರ್ಧಿಸಿ ಅಲ್ಪ ಮತಗಳ ಅಂತರದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದ ಶ್ರೇಯಸ್ ಪಟೇಲ್ ಅವರಿಗೆ ಟಿಕೆಟ್ ಘೋಷಿಸಲಾಗಿದೆ.