SUDDIKSHANA KANNADA NEWS/ DAVANAGERE/ DATE-29-06-2025
ದಾವಣಗೆರೆ: ಕಳೆದ 11 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ನೇತೃತ್ವದ ವೈಫಲ್ಯಗಳನ್ನು ಜನರ ಮುಂದಿಡಬೇಕು. ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಸಾಧ್ಯವಾಗಿಲ್ಲ. ಉದ್ಯೋಗಾವಕಾಶಗಳು ಕಡಿಮೆಯಾಗಿದ್ದು, ಮತದಾರರಲ್ಲಿ ಜಾಗೃತಿ ಮೂಡಿಸುವ ಕೆಲಸ ಸಮಾರೋಪಾದಿಯಲ್ಲಿ ನಡೆಯಬೇಕು. ತಳಮಟ್ಟದ ಕಾರ್ಯಕರ್ತರು, ಮುಖಂಡರು ಮಹಿಳೆಯರು, ಯುವಕರು ಸೇರಿದಂತೆ ಎಲ್ಲಾ ವರ್ಗದವರಿಗೆ ತಿಳಿಸಿಕೊಡಬೇಕು ಎಂದು ಅಖಿಲ ಭಾರತ ಯುವ ರಾಷ್ಟ್ರೀಯ ಕಾಂಗ್ರೆಸ್ ಕಾರ್ಯದರ್ಶಿ, ತೆಲಂಗಾಣ ಯುವ ಕಾಂಗ್ರೆಸ್ ಉಸ್ತುವಾರಿ ಸೈಯದ್ ಖಾಲಿದ್ ಅಹ್ಮದ್ ಕರೆ ನೀಡಿದರು.
ತೆಲಂಗಾಣದ ವಿಕಾರಾಬಾದ್ ನಲ್ಲಿ ಆಯೋಜಿಸಿದ್ದ ಕಾರ್ಯಕಾರಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಚುನಾವಣೆ ಬಂದಾಗ ಭರವಸೆಗಳ ಮಹಾಪೂರವನ್ನೇ ಹರಿಸುವ ಬಿಜೆಪಿಯು ಅಧಿಕಾರಕ್ಕೆ ಬಂದ ನಂತರ ಎಲ್ಲವನ್ನೂ ಮರೆತಿದೆ ಎಂದು ಆರೋಪಿಸಿದರು.
ಸ್ವಿಸ್ ಬ್ಯಾಂಕ್ ನಿಂದ ಪ್ರತಿಯೊಬ್ಬರ ಅಕೌಂಟ್ ಗೆ 20 ಲಕ್ಷ ರೂಪಾಯಿ ಹಾಕುವುದಾಗಿ ಹೇಳಿದ್ದ ಮೋದಿ ಅವರು ಈಡೇರಿಸಲೇ ಇಲ್ಲ. ಇದುವರೆಗೆ ಜನರು ಕಾಯುತ್ತಲೇ ಇದ್ದಾರೆ. ಉದ್ಯೋಗಾವಕಾಶ ಸೃಷ್ಟಿಸುವಂಥ ಕೈಗಾರಿಕೆಗಳು ಬರುತ್ತಿಲ್ಲ. ಅಗತ್ಯ ವಸ್ತುಗಳು, ತೈಲ ಬೆಲೆ ದಿನ ಕಳೆದಂತೆ ಗಗನಕ್ಕೇರುತ್ತಿವೆ. ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಯಾವುದೇ ಚುನಾವಣೆ ಬಂದರೂ ಗಂಭೀರವಾಗಿ ಪರಿಗಣಿಸುವ ನರೇಂದ್ರ ಮೋದಿ, ಅಮಿತ್ ಶಾ ಹೆಚ್ಚಾಗಿ ಸಮಾವೇಶ ಹಾಗೂ ರ್ಯಾಲಿ ನಡೆಸುತ್ತಾರೆ. ಕರ್ನಾಟಕದಲ್ಲಿ ನೆರೆ ಸೃಷ್ಟಿಯಾದಾಗ ಇತ್ತ ತಲೆಹಾಕಲೂ ಇಲ್ಲ ಎಂದು ಹೇಳಿದರು.
ಕರ್ನಾಟಕಕ್ಕೆ ಮೊದಲಿನಿಂದಲೂ ಕೇಂದ್ರ ಸರ್ಕಾರವು ಮಲತಾಯಿ ಧೋರಣೆ ಅನುಸರಿಸುತ್ತಿದೆ. ರಾಜ್ಯಕ್ಕೆ ನೀಡಬೇಕಾಗಿರುವ ಅನುದಾನ ನೀಡುತ್ತಿಲ್ಲ. ಜಿಎಸ್ ಟಿ ಸೇರಿದಂತೆ ಆಯಾ ರಾಜ್ಯಗಳಿಗೆ ನೀಡಬೇಕಿರುವ ಹಣವನ್ನೂ ಕೇಂದ್ರ ಸರ್ಕಾರ ಕೊಡುತ್ತಿಲ್ಲ. ಕೇವಲ ಕರ್ನಾಟಕಕ್ಕೆ ಮಾತ್ರವಲ್ಲ, ತೆಲಂಗಾಣಕ್ಕೂ ನೀಡುತ್ತಿಲ್ಲ. ಕಾಂಗ್ರೆಸ್ ಅಧಿಕಾರ ಇರುವ ರಾಜ್ಯಗಳತ್ತ ಹೆಚ್ಚು ಗಮನ ಹರಿಸುವುದಿಲ್ಲ. ಮುಖ್ಯಮಂತ್ರಿಗಳು ಭೇಟಿ ಮಾಡಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಇದಕ್ಕಿಂತ ಮಲತಾಯಿ ಧೋರಣೆ ಬೇಕೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷವು ಗ್ಯಾರಂಟಿ ಯೋಜನೆಗಳ ಜೊತೆಗೆ ಆರ್ಥಿಕ ಸ್ಥಿರತೆ ಕಾಪಾಡಿಕೊಳ್ಳುತ್ತಿದೆ. ಕೇಂದ್ರ ಸರ್ಕಾರ ಘೋಷಿಸಿದ ಯೋಜನೆಗಳು ಫಲಾನುಭವಿಗಳಿಗೆ ತಲುಪುತ್ತಲೇ ಇಲ್ಲ. ಕರ್ನಾಟಕ ಮತ್ತು ತೆಲಂಗಾಣದಲ್ಲಿ ಗ್ಯಾರಂಟಿ ಯೋಜನೆಗಳು ಜನರ ಮನೆಬಾಗಿಲಿಗೆ ತಲುಪುತ್ತಿವೆ. ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಕಾಂಗ್ರೆಸ್ ಪಕ್ಷ ದೇಶಕ್ಕೆ ನೀಡಿರುವ ಯೋಜನೆಗಳು ಹಲವು. ಬಹುರಾಷ್ಟ್ರೀಯ ಕಂಪೆನಿಗಳು, ಶ್ರೀಮಂತರ ಪರ ಇರುವ ಕೇಂದ್ರ ಸರ್ಕಾರವು, ಬಡವರು ಮತ್ತು ಮಧ್ಯಮದವರ್ಗದವರ ಏಳಿಗೆಗೆ ಯಾವುದೇ ಕಲ್ಯಾಣ ಕಾರ್ಯಕ್ರಮ ರೂಪಿಸಿಲ್ಲ ಎಂದು ಆರೋಪಿಸಿದರು.
ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಮಹಾರಾಷ್ಟ್ರ ಚುನಾವಣೆಯಲ್ಲಿ ಚುನಾವಣಾ ಆಯೋಗದ ಕಾರ್ಯವೈಖರಿ ಪ್ರಶ್ನಿಸಿದ್ದಾರೆ. ಹಲವು ಪ್ರಶ್ನೆಗಳನ್ನು ಹಾಕಿದ್ದಾರೆ. ಆದ್ರೆ, ಸರಿಯಾದ ಉತ್ತರ ಸಿಗುತ್ತಿಲ್ಲ. ರಾಹುಲ್ ಗಾಂಧಿ ಅವರ ಆರೋಪಗಳಿಗೆ ಉತ್ತರಿಸುವ ನೈತಿಕತೆಯೂ ಇಲ್ಲ. ಕೇಂದ್ರದ ಸ್ವಾಯತ್ತ ಸಂಸ್ಥೆಗಳಾದ ಇಡಿ, ಆದಾಯ ತೆರಿಗೆ, ಸಿಬಿಐನಂಥ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಕಾಂಗ್ರೆಸ್ ನಾಯಕರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸುವ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಯೋಜನೆಗಳು, ಕಾರ್ಯಕ್ರಮಗಳು, ಅಭಿವೃದ್ಧಿ ಮೂಲಕ ಜನರ ಮನ ಗೆಲ್ಲಬೇಕಷ್ಟೇ ಹೊರತು, ಹೆದರಿಸುವ ತಂತ್ರ ಬಿಡಬೇಕು. ಕಾಂಗ್ರೆಸ್ ಇಂಥ ಗೊಡ್ಡು ಬೆದರಿಕೆಗಳಿಗೆ ಹಿಂದೆ ಸರಿಯುವುದಿಲ್ಲ ಎಂದು ಸೈಯದ್ ಖಾಲಿದ್ ಅಹ್ಮದ್ ಹೇಳಿದರು.
ಸಭೆಯಲ್ಲಿ ತೆಲಂಗಾಣ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಶಿವಚರಣ್ ರೆಡ್ಡಿ, ಜಿಲ್ಲಾಧ್ಯಕ್ಷ ಸತೀಶ್ ರೆಡ್ಡಿ, ಶೇಕ್ ಕಿಜರ್, ಭಾಸ್ಕರ್, ಮಜೀದ್ ಖಾನ್, ಸಂತೋಷ್ ಸುರೇಶ್ ಮತ್ತು ಇತರರು ಹಾಜರಿದ್ದರು.