SUDDIKSHANA KANNADA NEWS/ DAVANAGERE/ DATE:03-01-2024
ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಕರಸೇವಕರ ಕುರಿತು ನೀಡಿರುವ ಹೇಳಿಕೆ ಕಾಂಗ್ರೆಸ್ನ ಮನಸ್ಥಿತಿಯನ್ನು ತೋರಿಸುತ್ತದೆ. ರಾಮ ಮಂದಿರ ಉದ್ಘಾಟನೆಗೆ ಅಯೋಧ್ಯೆಗೆ ತೆರಳುವ ಜನರಲ್ಲಿ ಭಯ ಹುಟ್ಟಿಸಲು ಈ ರೀತಿಯ ಹೇಳಿಕೆ ನೀಡಿದ್ದು, ಅವರ ಹೇಳಿಕೆ ವಿರುದ್ಧ ಕಾನೂನಾತ್ಮಕ ಹೋರಾಟ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗ ರಾಮಮಂದಿರ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲಿ ಇಡೀ ದೇಶದಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ. ರಾಮಜನ್ಮ ಭೂಮಿಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿರುವುದರಿಂದ ಅದನ್ನು ತಡೆದುಕೊಳ್ಳಲಾಗದೇ ಹತಾಶರಾಗಿ ಕಾಂಗ್ರೆಸ್ ನಾಯಕರು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ಕೇವಲ ಬಿ.ಕೆ. ಹರಿಪ್ರಸಾದ್ ಅವರ ಹೇಳಿಕೆಯಲ್ಲ. ಹರಿಪ್ರಸಾದ್ ಅವರ ಹೇಳಿಕೆ ಹುಬ್ಬಳ್ಳಿಯ ಕರಸೇವಕ ಶ್ರೀಕಾಂತ ಪೂಜಾರಿಯ ಬಂಧನದ ಒಂದು ಭಾಗವಾಗಿದೆ ಎಂದು ಹೇಳಿದರು.
ರಾಮಮಂದಿರ ಹೋರಾಟದ ಸಂದರ್ಭದಲ್ಲಿ ಹುಬ್ಬಳ್ಳಿ ಪ್ರಮುಖ ಕೇಂದ್ರವಾಗಿತ್ತು. ಹೀಗಾಗಿ ಅಲ್ಲಿ ಅನೇಕರ ಮೇಲೆ ಪ್ರಕರಣಗಳಿದ್ದವು. ಅವರನ್ನು ಈ ಸಂದರ್ಭದಲ್ಲಿ ಬಂಧಿಸುವ ಅವಶ್ಯಕತೆ ಏನಿತ್ತು. ಮುಖ್ಯಮಂತ್ರಿಗಳು ಅಪರಾಧಿಗಳನ್ನು ಹಿಡಿಯಬಾರದಾ ಎಂದು ಪ್ರಶ್ನಿಸಿದ್ದಾರೆ. ಅಪರಾಧಿಯನ್ನು ಹಿಡಿಯಬೇಕೆಂದರೆ ಬೆಂಗಳೂರು, ಮೈಸೂರು, ಹುಬ್ಬಳ್ಳಿ ಧಾರವಾಡದಲ್ಲಿ ಅಕ್ರಮ ದಂಧೆಯಲ್ಲಿ ತೊಡಗಿರುವ, ಸಾರಾಯಿ ಮಾರಾಟ ಮಾಡುತ್ತಿರುವ ಪ್ರಕರಣಗಳು ರಾಜಾರೋಷವಾಗಿ ಹಗಲಿನಲ್ಲಿಯೇ ನಡೆಯುತ್ತಿವೆ. ಅದೆಲ್ಲವೂ ನಿಮಗೆ ಕಣ್ಣಿಗೆ ಕಾಣಿಸುತ್ತಿಲ್ಲ. 32 ವರ್ಷದ ಹಿಂದಿನ ಪ್ರಕರಣ ಕಣ್ಣಿಗೆ ಕಂಡಿದೆ. ಕೋರ್ಟ್ ನಲ್ಲಿ ಪ್ರಕರಣ ಇದ್ದರೆ ಶ್ರೀಕಾಂತ್ ಪೂಜಾರಿಯನ್ನು ಬಂಧಿಸುವ ಅಗತ್ಯವೇನಿತ್ತು. ಕರೆದು ವಿಚಾರಣೆ ಮಾಡಿ ಕಳುಹಿಸಬಹುದಿತ್ತು. ಇದರ ಬಗ್ಗೆ ಮುಖ್ಯಮಂತ್ರಿಯ ಬಳಿ ಉತ್ತರವಿಲ್ಲ ಎಂದು ಹೇಳಿದರು.
ಅಪರಾಧಿಗಳನ್ನು ಹಿಡಿದರೆ ಬಿಜೆಪಿ ಪ್ರತಿಭಟನೆ ಮಾಡುತ್ತಿದೆ ಎಂದು ಸಿಎಂ ಹೇಳುತ್ತಾರೆ. ಅಪರಾಧಿಗಳನ್ನು ಹಿಡಿಯುವ ತಾಕತ್ತು ನಿಮಗೆ ಇಲ್ಲ. ಪಿಎಫ್ಐ ನಂತಹ ದೇಶದ್ರೋಹಿ ಸಂಘಟನೆಗಳು, ಡಿಜೆ ಹಳ್ಳಿ, ಕೆಜೆ ಹಳ್ಳಿ ಪ್ರಕರಣದಲ್ಲಿ ಭಾಗಿಯಾದವರ ಪ್ರಕಣಗಳನ್ನು ವಾಪಸ್ ಪಡೆಯಲು ನಿಮ್ಮ ಶಾಸಕರು ಪತ್ರ ಬರೆಯುತ್ತಾರೆ. ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದವರು ಇವರಿಗೆ ಮುಗ್ದರು. ಆದರೆ, ಕರಸೇವಕರು ಅಪರಾಧಿಗಳಾಗಿ ಕಾಣುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಒಬ್ಬ ವ್ಯಕ್ತಿಯನ್ನು ಬಂಧಿಸಲು ಇವರಿಗೆ 31 ವರ್ಷ ಬೇಕಿತ್ತಾ. ಹುಬ್ಬಳ್ಳಿ ಧಾರವಾಡದಲ್ಲಿ ಅಕ್ರಮ ಇಸ್ಪೀಟ್ ದಂಧೆ ನಡೆಯುತ್ತಿದೆ. ಗೋವಾ, ಮಹಾರಾಷ್ಟ್ರದಿಂದ ಅಕ್ರಮ ಮದ್ಯ ಸರಬರಾಜಾಗುತ್ತಿದೆ. ಅದನ್ನು ತಡೆಯುವುದನ್ನು ಬಿಟ್ಟು ಹುಬ್ಬಳ್ಳಿ ಧಾರವಾಡ ಪೊಲೀಸರು ಕರ ಸೇವಕರನ್ನು ಬಂಧಿಸಿದ್ದಾರೆ. ಇವರಿಗೆ ಬೇರೆ ಕೆಲಸ ಇಲ್ಲವೇ ಎಂದು ಪ್ರಶ್ನಿಸಿದರು.
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ದೇವಸ್ಥಾನದ ಗರ್ಭಗುಡಿ ಪ್ರವೇಶಿಸಲು ನಿರಾಕರಿಸಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯ ಅವರು ಯಾವಾಗಲೂ ಚುನಾವಣೆ ಸಂದರ್ಭದಲ್ಲಿ ಮಾತ್ರ ದೇವಸ್ಥಾನಕ್ಕೆ ಹೋಗುತ್ತಾರೆ ಎಂದರು.
ಅಲ್ಲದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಭಾರತ ಹಿಂದೂ ರಾಷ್ಟ್ರವಾದರೆ ಕಷ್ಟವಾಗಲಿದೆ ಎಂದು ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಿಂದುತ್ವ ಎನ್ನುವುದು ಜೀವನ ಪದ್ಧತಿ, ಭಾರತದಲ್ಲಿರುವ ಕ್ರಿಶ್ಚಿಯನ್, ಮುಸ್ಲೀಮರು ಸೇರಿದಂತೆ ಎಲ್ಲ ಧರ್ಮಿಯರೂ ನೆಮ್ಮದಿಯಾಗಿದ್ದಾರೆ. ಪಾಕಿಸ್ತಾನ, ಅಪಘಾನಿಸ್ತಾನ, ಇರಾನ್, ಇರಾಕ್ ಸೇರಿದಂತೆ ಮುಸ್ಲೀಂ ಆಡಳಿತ ಇರುವ ದೇಶಗಳಲ್ಲಿಯೇ ಒಬ್ಬರಿಗೊಬ್ಬರು ಹೊಡೆದಾಡಿಕೊಳ್ಳುತ್ತಿದ್ದಾರೆ. ಭಾರತದಲ್ಲಿರುವ ಮುಸ್ಲೀಮರು ಅಲ್ಲಿಗೆ ಹೋಗಲೂ ಇಚ್ಚೆ ಪಡುವುದಿಲ್ಲ. ಅವರು ನಮ್ಮ ಸಹೋದರರು ಭಾರತದಲ್ಲಿಯೇ ಇರಬೇಕು ಎಂದು ನಾವು ಬಯಸುತ್ತೇವೆ ಎಂದು ಹೇಳಿದರು.