SUDDIKSHANA KANNADA NEWS/ DAVANAGERE/ DATE-04-06-2025
ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತಕ್ಕೆ 7 ಮಂದಿ ಬಲಿ ಆಗಲು ಸಿಎಂ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಾರಣ ಎಂದು ಬಿಜೆಪಿ ಆರೋಪಿಸಿದೆ.
ಸಂಭ್ರಮದ ಮನೆಯಲ್ಲಿ ಸೂತಕ ಉಂಟಾಗಲು ನೇರ ಕಾರಣ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ. ಈ ಕೊಲೆಗಡುಕ ಸರ್ಕಾರದ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಬೇಕು ಎಂದು ಒತ್ತಾಯಿಸಿದೆ.
ಹಲವಾರು ವರ್ಷಗಳ ಅಭಿಮಾನಿಗಳ ಕನಸನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ವರ್ಷ ನನಸು ಮಾಡಿದೆ!! ಆದರೆ ತೆರೆದ ಬಸ್‌ನಲ್ಲಿ ಆಟಗಾರರ ವಿಜಯೋತ್ಸವಕ್ಕೆ ಅನುಮತಿ ನಿರಾಕರಿಸುವ ಮೂಲಕ ಆಕಸ್ಮಿಕ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ತಾವೊಬ್ಬ ಅಸಮರ್ಥ ಹಾಗೂ ಅದಕ್ಷ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ ಎಂದು ಕಿಡಿಕಾರಿದೆ.
ತಮ್ಮ ನೆಚ್ಚಿನ ಆಟಗಾರರನ್ನು ಅತಿ ಹತ್ತಿರದಿಂದ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದು, ಅಭಿಮಾನಿಗಳ ಈ ಸಂಭ್ರಮಕ್ಕೆ ಕಲ್ಲು ಹಾಕಿದ ಪರಮೇಶ್ವರ್. ಕಾಂಗ್ರೆಸ್ ಸರ್ಕಾರದ ಅವ್ಯವಸ್ಥೆ ಇಂದಾಗಿ 7ಕ್ಕೂ ಹೆಚ್ಚು ಅಮಾಯಕ ಆರ್.ಸಿ.ಬಿ ಅಭಿಮಾನಿಗಳ ಸಾವಾಗಿದೆ, 17ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ, ಏಕಾಏಕಿ ಕಾರ್ಯಕ್ರಮವನ್ನು ಆಯೋಜಿಸಿರುವುದು ಈ ಅನಾಹುತಕ್ಕೆ ನೇರ ಕಾರಣ. ಈ ಸಾವುಗಳಿಗೆ ಕಾಂಗ್ರೆಸ್ ಸರ್ಕಾರವೇ ನೇರ ಹೊಣೆ ಎಂದು ದೂರಿದೆ.