SUDDIKSHANA KANNADA NEWS/ DAVANAGERE/ DATE:27-02-2025
ಬೆಂಗಳೂರು: ರಾಜ್ಯಕ್ಕೆ ಆಗುತ್ತಿರುವ ಸರಣಿ ಅನ್ಯಾಯಗಳನ್ನು ನೋಡಿಯೂ ರಾಜ್ಯದಿಂದ ಲೋಕಸಭೆಗೆ ಆರಿಸಿಹೋಗಿರುವ ಹದಿನೇಳು ಬಿಜೆಪಿ ಮತ್ತು ಇಬ್ಬರು ಜೆಡಿಎಸ್ ಸದಸ್ಯರು ಜೀತದಾಳುಗಳಂತೆ ಬಾಯಿಗೆ ಬೀಗಹಾಕಿಕೊಂಡು ಕೂತಿದ್ದಾರೆ. ರಾಜ್ಯದ ಬಿಜೆಪಿ ನಾಯಕರು ಪರಸ್ಪರ ಕೆಸರೆರಚಾಟ ನಡೆಸುತ್ತಾ ಬೀದಿ ಜಗಳದಲ್ಲಿ ಮಗ್ನರಾಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸಚಿವ ಅಮಿತ್ ಶಾ ಅವರು ಕ್ಷೇತ್ರ ಪುನರ್ವಿಂಗಡಣೆ ಬಗ್ಗೆ ನೀಡಿರುವ ಹೇಳಿಕೆಯಲ್ಲಿ ಸತ್ಯಾಂಶ ಇಲ್ಲ ಎಂದು ಕಿಡಿಕಾರಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು ಇಂತಹ ಸಂದರ್ಭದಲ್ಲಿ ಜಾತಿ-ಧರ್ಮ ಪಕ್ಷ -ಪಂಥಗಳ ಭೇದವನ್ನು ಮರೆತು ಕನ್ನಡಿಗರೆಲ್ಲರೂ ಒಂದಾಗಿ ಒಂದೇ ದನಿಯಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ದ ದನಿ ಎತ್ತಬೇಕಾಗಿದೆ ಎಂದಿದ್ದಾರೆ.
ಈ ಅನ್ಯಾಯದ ವಿರುದ್ದ ಸಮಗ್ರ ರೂಪದ ಹೋರಾಟವನ್ನು ನಡೆಸಲು ನೆರೆಯ ದಕ್ಷಿಣದ ರಾಜ್ಯಗಳ ಜೊತೆಯಲ್ಲಿಯೂ ಮಾತುಕತೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅನ್ಯಾಯಕ್ಕೀಡಾಗಿರುವ ಎಲ್ಲ ರಾಜ್ಯಗಳ ಜೊತೆಗೂಡಿ ಸಂಘಟಿತವಾದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಕ್ಷೇತ್ರ ಮರುವಿಂಗಡಣೆಗೆ ತೋರುತ್ತಿರುವ ಅತ್ಯುತ್ಸಾಹವನ್ನು ನೋಡಿದರೆ ತಮ್ಮ ಪಕ್ಷದ ಕೀರ್ತಿಪತಾಕೆ ಹಾರಿಸುವುದಕ್ಕೆ ಪ್ರತಿರೋಧ ಒಡ್ಡುತ್ತಿರುವ ದಕ್ಷಿಣದ ರಾಜ್ಯಗಳ ಜನತೆಗೆ ಶಿಕ್ಷಿಸುವ ದುರುದ್ದೇಶ ಇರುವಂತೆ ಕಾಣಿಸುತ್ತಿದೆ.
ಕರ್ನಾಟಕದ ಜನತೆ ಬಿಜೆಪಿಯನ್ನು ಬೆಂಬಲಿಸದೆ ಇದ್ದರೆ ರಾಜ್ಯಕ್ಕೆ ನರೇಂದ್ರ ಮೋದಿ ಅವರ ಆಶೀರ್ವಾದ ಇರುವುದಿಲ್ಲ ಎಂದು ವಿಧಾನಸಭಾ ಚುನಾವಣಾ ಪ್ರಚಾರದ ಕಾಲದಲ್ಲಿ ಬಿಜೆಪಿ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರು ನೀಡಿದ್ದ ಎಚ್ಚರಿಕೆ ನಮ್ಮ ರಾಜ್ಯದ ವಿರುದ್ಧ ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಒಂದೊಂದು ಕ್ರಮದಲ್ಲಿಯೂ ನಿಜವಾಗುತ್ತಿದೆ ಎಂದು ತಿಳಿಸಿದ್ದಾರೆ.
ತೆರಿಗೆ ಹಂಚಿಕೆ, ಜಿಎಸ್ ಟಿ ಮತ್ತು ಪ್ರಕೃತಿ ವಿಕೋಪ ಪರಿಹಾರದಲ್ಲಿ ಅನ್ಯಾಯ, ರಾಜ್ಯಕ್ಕೆ ಕಂಟಕವಾಗಿರುವ ಹೊಸ ಶಿಕ್ಷಣ ನೀತಿ ಮತ್ತು ಯುಜಿಸಿ ನಿಯಮಾವಳಿಗಳಿಗೆ ತಿದ್ದುಪಡಿಯೂ ಸೇರಿದಂತೆ ಕೇಂದ್ರ ಸರ್ಕಾರದ ಪ್ರತಿಯೊಂದು ಕ್ರಮವೂ ರಾಜ್ಯವನ್ನು ಶಿಕ್ಷಿಸುವ ದುರುದ್ದೇಶದಿಂದ ಕೂಡಿದೆ ಎನ್ನುವುದು ಸ್ಪಷ್ಟವಾಗುತ್ತಿದೆ
ಎಂದು ಕಿಡಿಕಾರಿದ್ದಾರೆ.
ಈ ಎಲ್ಲ ಅನ್ಯಾಯದ ವಿರುದ್ಧ ರಾಷ್ಟ್ರಮಟ್ಟದಲ್ಲಿ ದನಿ ಎತ್ತದಂತೆ ಮಾಡಲು ಸಂಸತ್ ನಲ್ಲಿ ದಕ್ಷಿಣದ ರಾಜ್ಯಗಳ ದನಿಯನ್ನು ಇನ್ನಷ್ಟು ಕ್ಷೀಣಗೊಳಿಸುವ ದುರುದ್ದೇಶದಿಂದ ಕೇಂದ್ರದ ಬಿಜೆಪಿ ಸರ್ಕಾರ ಈಗ ಕ್ಷೇತ್ರ ಮರುವಿಂಗಡಣೆಯ ಹೊಸ ಅಸ್ತ್ರವನ್ನು ಎತ್ತಿಕೊಂಡು ಹೊರಟಿದೆ ಎಂದು ತಿಳಿಸಿದ್ದಾರೆ.