SUDDIKSHANA KANNADA NEWS/ DAVANAGERE/ DATE:25-02-2025
ದಾವಣಗೆರೆ:‘ನಗರದ ಕೆ.ಬಿ.ಬಡಾವಣೆಯ ಬಳ್ಳಾರಿ ಸಿದ್ದಮ್ಮ ಪಾರ್ಕ್ ಸುತ್ತಮುತ್ತಲಿನ ನಿವಾಸಿಗಳು ರಸ್ತೆ ಒತ್ತುವರಿ ಮಾಡಿ ನೀರಿನ ಸಂಪ್ಗಳನ್ನು ನಿರ್ಮಿಸಿಕೊಂಡಿದ್ದು, ಅವುಗಳನ್ನು ಉಳಿಸಿಕೊಳ್ಳಲು ಪೇವರ್ಸ್ ಕಾಮಗಾರಿಯನ್ನು ವಿರೋಧಿಸಿದ್ದಾರೆ ಎಂದು ಸುಳ್ಳು ಮಾಹಿತಿ ನೀಡಿದ್ದು, ಆದರೆ, ಯಾರೂ ಕಾಮಗಾರಿ ವಿರೋಧಿಸಿಲ್ಲ ಬದಲಿಗೆ ತಾರತಮ್ಯ ಪ್ರಶ್ನಿಸಿದ್ದೆವು’ ಎಂದು ಸ್ಥಳೀಯ ನಿವಾಸಿಗಳಾದ ಸುಬ್ರಹ್ಮಣ್ಯ, ಪ್ರೇಮಲೀಲಾ ಮತ್ತಿತರರು ಸ್ಪಷ್ಟನೆ ನೀಡಿದ್ದಾರೆ.
‘ಕೆ.ಬಿ.ಬಡಾವಣೆಯಲ್ಲಿ 60–70 ವರ್ಷಗಳ ಹಿಂದೆಯೇ ಮನೆಗಳನ್ನು ನಿರ್ಮಿಸಲಾಗಿದ್ದು, ಆ ವೇಳೆ ಕೆಲವರು ಮನೆಯ ಕಾಂಪೌಂಡ್ನಿಂದ ತುಸು ಆಚೆಗೆ ನೀರಿನ ಸಂಪ್ಗಳನ್ನು ನಿರ್ಮಿಸಿರುವುದು ವಾಸ್ತವ. ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರ ರಾಮಾಂಜನೇಯ ರೆಡ್ಡಿ ಅವರು ನೀರಿನ ಸಂಪ್ಗಳನ್ನು ಕಾಂಪೌಂಡ್ನ ಒಳಗೆ ಮಾಡಿಕೊಳ್ಳುವಂತೆ ಹೇಳಿ ಏಕಾಏಕಿ ನಮ್ಮ ನೀರಿನ ಸಂಪ್ಗಳನ್ನು ಒಡೆದು ಹಾಕಿದರು. ಆಗ ಯಾರೂ ಏನೂ ಮಾತನಾಡದೆ ಸುಮ್ಮನಿದ್ದೆವು ಎಂದು ತಿಳಿಸಿದ್ದಾರೆ.
ಆದರೆ, ಪಾರ್ಕ್ ಪಕ್ಕದಲ್ಲಿನ ನಿವಾಸಿಯೊಬ್ಬರು ಒಂದೂವರೆ ಅಡಿ ರಸ್ತೆ ಒತ್ತುವರಿ ಮಾಡಿ ಮನೆ ನಿರ್ಮಿಸಿದ್ದು, ಅವರು ಬಲಾಢ್ಯರು ಎಂಬ ಕಾರಣಕ್ಕೆ ಗುತ್ತಿಗೆದಾರ ಅವರ ಮನೆಯ ಜಾಗವನ್ನು ಬಿಟ್ಟು ಕಾಮಗಾರಿ ನಡೆಸಿದ್ದರು. ಈ ವಿಷಯ ತಿಳಿದುಬಂದಾಗ ಎಲ್ಲರೂ, ‘ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ’ ತಾರತಮ್ಯ ನೀತಿ ಅನುಸರಿಸುವುದೇಕೆ ಎಂದು ಪ್ರಶ್ನಿಸಿದ್ದೆವು’ ಎಂದು ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿದ್ದಾರೆ.
‘ಪೇವರ್ಸ್ ಹಾಕಲು ರಸ್ತೆಯಿಂದ ಒಂದೂವರೆ ಅಡಿ ಆಳ ತೋಡುತ್ತಿದ್ದು, ಅಷ್ಟು ಆಳದಿಂದ ನಮ್ಮ ಕಾಂಪೌಂಡ್ವರೆಗೆ ಸ್ಲ್ಯಾಬ್ ಹಾಕಿಕೊಂಡು ರಿಪೇರಿ ಮಾಡಿಕೊಳ್ಳುತ್ತೇವೆ. ಇಲ್ಲದಿದ್ದರೆ ಸಂಪ್ ಚಿಕ್ಕದಾಗಿ ನೀರಿಗೆ ಪರದಾಡಬೇಕಾಗುತ್ತದೆ.
ಕೆಲವರಿಗೆ ಕಾಂಪೌಂಡ್ ಒಳಗೆಯೇ ನೀರಿನ ಸಂಪ್ ಮಾಡಿಕೊಳ್ಳಲು ಜಾಗವೇ ಇಲ್ಲ ಎಂದು ಗುತ್ತಿಗೆದಾರನಿಗೆ ಮನವಿ ಮಾಡಿದರೂ ಅವರು ಒಪ್ಪಿರಲಿಲ್ಲ. ಕಾಂಪೌಂಡ್ ಗೋಡೆಗೆ ಸಮನಾಗಿಯೇ ನೀರಿನ ಸಂಪ್ಗೆ ಗೋಡೆ ಹಾಕಿಕೊಳ್ಳಿ ಎಂದು ಹಠ ಹಿಡಿದಿದ್ದರು. ಆಗ, ‘ಒತ್ತುವರಿ ಮಾಡಿರುವ ಮನೆಯನ್ನೇ ಬಿಟ್ಟು ಕಾಮಗಾರಿ ನಡೆಸುತ್ತೀರಿ, ಅರ್ಧ ಅಡಿ ಕಾಂಪೌಂಡ್ನಿಂದ ಆಚೆ ಇರುವ ನೀರಿನ ಸಂಪ್ ಅನ್ನು ಏಕೆ ಒಡೆದುಹಾಕಿದಿರಿ’ ಎಂದು ಪ್ರಶ್ನಿಸಿದ್ದೆವು. ಪಾಲಿಕೆ ಆಯುಕ್ತರಾದ ರೇಣುಕಾ ಅವರಿಗೂ ಈ ಬಗ್ಗೆ ದೂರು ನೀಡಿದ್ದೆವು’ ಎಂದು ತಿಳಿಸಿದ್ದಾರೆ.
‘ನಮ್ಮ ಮನವಿಗೆ ಸ್ಪಂದಿಸಿ ಆಯುಕ್ತರಾದ ರೇಣುಕಾ ಅವರು ಸ್ಥಳಕ್ಕೆ ಭೇಟಿ ನೀಡಿ ನೀರಿನ ಸಂಪ್ಗಳನ್ನು ಒಡೆದು ಹಾಕಿದ್ದನ್ನು ಪರಿಶೀಲಿಸಿದರು. ‘ಹಳೆಯ ಬಡಾವಣೆಗಳಲ್ಲಿ ಸಣ್ಣ ಪುಟ್ಟ ವ್ಯತ್ಯಾಸಗಳನ್ನು ಅನುಸರಿಸಿಕೊಂಡು, ಜನರನ್ನು ವಿಶ್ವಾಸಕ್ಕೆ ತೆಗೆದಕೊಂಡು ಕಾಮಗಾರಿ ನಡೆಸುವುದಾದರೆ ನಡೆಸಿ, ಇಲ್ಲದಿದ್ದರೆ ಬೇರೆಯವರಿಗೆ ಕಾಮಗಾರಿಯನ್ನು ನೀಡಬೇಕಾಗುತ್ತದೆ’ ಎಂದು ಆಯುಕ್ತರು ಗುತ್ತಿಗೆದಾರ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಮನೆಗಳ ಮುಂದೆ ಹಾಕಿದ್ದ ಗಿಡ–ಮರಗಳ ಬೇರುಗಳಿಗೆ ಧಕ್ಕೆಯಾಗದಂತೆಯೂ ಕಾಮಗಾರಿ ನಡೆಸಲು ಸೂಚಿಸಿದ್ದರು. ಇದರಿಂದ ಸಿಟ್ಟಿಗೆದ್ದ ಗುತ್ತಿಗೆದಾರ ರಾಮಾಂಜನೇಯ ರೆಡ್ಡಿ ಮತ್ತಿತರರು ಮರುದಿನವೇ ಕೆಲವರ ಬಳಿ ಮಾತನಾಡಿ, ‘ಕಮಿಷನರ್ ಕರೆಸುತ್ತೀರಾ ?, ನಿಮ್ಮ ರಸ್ತೆಯ ಕಾಮಗಾರಿಯನ್ನೇ ಮಾಡುವುದಿಲ್ಲ’ ಎಂದು ಬೆದರಿಕೆಯೊಡ್ಡಿದ್ದರು ಎಂದು ಆರೋಪಿಸಿದ್ದಾರೆ.
ಕೆಲ ಮನೆಗಳ ನೀರಿನ ಸಂಪ್ಗಳನ್ನು ಒಡೆದಿರುವ ಫೋಟೊಗಳನ್ನು ನೀಡಿರುವವರು, ಒತ್ತುವರಿ ಮಾಡಿರುವ ಮನೆಯ ಫೋಟೊವನ್ನು ಮಾತ್ರ ಮಾಧ್ಯಮದವರಿಂದ ಮರೆಮಾಚಿದ್ದು ಏಕೆ’ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.
‘ಮುಖ್ಯರಸ್ತೆಗಳಲ್ಲಿ ಪೇವರ್ಸ್ ಹಾಕುವುದರಿಂದ ವಾಹನಗಳ ನಿಲುಗಡೆ ಮತ್ತು ಪಾದಚಾರಿಗಳ ಸಂಚಾರಕ್ಕೆ ಅನುಕೂಲವಾಗುತ್ತದೆ. ಆದರೆ, ಒಳರಸ್ತೆಗಳಲ್ಲಿ ಪೇವರ್ಸ್ ಹಾಕುವ ಅಗತ್ಯ ಇರಲಿಲ್ಲ. ಎಂದಷ್ಟೇ ಹೇಳಿದ್ದೆವು. ಕಾಮಗಾರಿಯನ್ನೇ ವಿರೋಧಿಸುವುದಾದರೆ ಮನೆಗಳ ಮುಂದಿನ ಅಂಗಳವನ್ನೇ ಅಗೆಯಲು ಬಿಡುತ್ತಿರಲಲ್ಲ. ಮಾಧ್ಯಮಮಿತ್ರರು ಸ್ಥಳಕ್ಕೆ ಭೇಟಿ ನೀಡಿ, ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಿ ವರದಿಯನ್ನು ಬಿತ್ತರಿಸಬೇಕು. ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು’ ಎಂದು ಮನವಿ ಮಾಡಿದ್ದಾರೆ.