SUDDIKSHANA KANNADA NEWS/ DAVANAGERE/ DATE:04-03-2025
ದಾವಣಗೆರೆ: ಕೋಳಿಶೀತ ಜ್ವರ(ಹಕ್ಕಿ ಜ್ವರ)ವು ಹೆಚ್5ಎನ್1 ವೈರಸ್ ನಿಂದ ಪಕ್ಷಿಗಳಿಗೆ ಹರಡುವ ಖಾಯಿಲೆಯಾಗಿದ್ದು, ಮನುಷ್ಯರಿಂದ ಮನುಷ್ಯರಿಗೆ ಸಾಂಕ್ರಮಿಕವಾಗಿ ಹರಡುವುದಿಲ್ಲ. ಹಾಗಾಗಿ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ, ಆದರೆ ಮುನ್ನೆಚ್ಚರಿಕೆ ಕ್ರಮವಾಗಿ ಎಸ್‍ಓಪಿ ಅಳವಡಿಸಲು ಕ್ರಮವಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಜಿ.ಎಂ ಅವರು ತಿಳಿಸಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋಳಿಶೀತ ಜ್ವರಕ್ಕೆ ಸಂಬಂಧಿಸಿದಂತೆ ಏರ್ಪಡಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾಮಾನ್ಯವಾಗಿ ಶೀಥಲ ಪ್ರದೇಶದ ವಲಸೆ ಹಕ್ಕಿಗಳು ವಂಶಾಭಿವೃದ್ಧಿಗಾಗಿ ಬಂದಾಗ ಹಿಕ್ಕೆ, ಪುಕ್ಕ ಹಾಗೂ ಬಾಯಿ ಮತ್ತು ಕಣ್ಣಿನಿಂದ ಹೊರ ಬರುವ ಸ್ರವಿಕೆಯಿಂದ ಕಾಯಿಲೆ ಹರಡು ಸಂಭವವಿದ್ದು, ಪಕ್ಷಿಗಳಿಗೆ ರೋಗವು ಹರಡುತ್ತದೆ ಎಂದು ತಿಳಿಸಿದರು.
ಇದು ಬಳ್ಳಾರಿ ಜಿಲ್ಲೆಯಯಲ್ಲಿ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನ ಕುಕ್ಕುಟ ಸಂವರ್ಧನಾ ಕೇಂದ್ರದಲ್ಲಿ ಸಾಕಾಣಿಕೆ ಮಾಡಿದ ಅಸಿಲ್ ಮತ್ತು ಕಾವೇರಿ ತಳಿಯ ಕೋಳಿಗಳಿಗೆ ಫೆಬ್ರವರಿ 23 ರಂದು ಕೋಳಿ ಶೀತ ಜ್ವರ ರೋಗದ ಲಕ್ಷಣ ಕಂಡುಬಂದು ಕೆಲವು ಕೋಳಿಗಳು ಮರಣ ಹೊಂದಿದ್ದವು. ಪರೀಕ್ಷೆಗಾಗಿ ಭೋಪಾಲ್‍ನ ರಾಷ್ಟ್ರೀಯ ಹೈ ಸೆಕ್ಯುರಿಟಿ ಪ್ರಾಣಿ ರೋಗಗಳ ಪ್ರಯೋಗಾಲಯಕ್ಕೆ ಕಳುಹಿಸಿದ್ದು ಸಂಸ್ಥೆಯು ಕೋಳಿಶೀತ ಜ್ವರವೆಂದು ದೃಢೀಕರಿಸಿರುತ್ತದೆ. ಇದಕ್ಕಾಗಿ ಬಳ್ಳಾರಿಯಿಂದ ಹಾಗೂ ಚಿಕ್ಕಬಳ್ಳಾಪುರದಿಂದ ದಾವಣಗೆರೆಗೆ ಸಾಗಾಣಿಕೆಯಾಗುವ ಕೋಳಿಗಳನ್ನು ನಿರ್ಬಂಧಿಸಲು ಚೆಕ್ ಪೋಸ್ಟ್ ಗಳನ್ನು ಸ್ಥಾಪನೆ ಮಾಡಿ ಸಂಪೂರ್ಣ ನಿಗಾವಹಿಸಲು ಮತ್ತು ಎಲ್ಲಿಯಾದರೂ ಹಕ್ಕಿಗಳು ಮರಣ ಹೊಂದಿದಲ್ಲಿ, ತಕ್ಷಣ ಮಾಹಿತಿ ನೀಡಲು ಸಹಾಯವಾಣಿ ಸ್ಥಾಪಿಸಲಾಗುತ್ತಿದೆ ಎಂದರು.
ಬೇಯಿಸಿ ನಂತರ ಸೇವಿಸಿ:
ಸಾರ್ವಜನಿಕರು ಮಾಂಸ ಮತ್ತು ಮೊಟ್ಟೆಗಳನ್ನು 70 ಡಿಗ್ರಿ ಅಧಿಕ ಉಷ್ಣಾಂಶದಲ್ಲಿ ಕನಿಷ್ಠ 30 ನಿಮಿಷ ಬೇಯಿಸಿದಾಗ ವೈರಾಣು ನಾಶಗೊಳ್ಳುತ್ತದೆ. ಹಾಗಾಗಿ ಸಾರ್ವಜನಿಕರು ಮಾಂಸ ಮತ್ತು ಮೊಟ್ಟೆಗಳನ್ನು ಚೆನ್ನಾಗಿ ಬೇಯಿಸಿದ ನಂತರ ಸೇವನೆ ಮಾಡಬೇಕು ಎಂದು ಹೇಳಿದರು.