ಬಿಹಾರ: ರೈಲಿನಲ್ಲಿ ಪ್ರಯಾಣ ಮಾಡುವಾಗ ಪ್ರಯಾಣಿಕರನ್ನೇ ಟಾರ್ಗೆಟ್ ಮಾಡಿ ಮೊಬೈಲ್ ಪಾಸ್ ವರ್ಡ್ ಪಡೆದು ಯುವಕನೊಬ್ಬ ಹಣ ಲಪಟಾಯಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೆಚ್ಚಾಗಿ ಸ್ಲೀಪರ್ ಕೋಚ್ ಪ್ರಯಾಣಿಕರ ಟಾರ್ಗೆಟ್ ಮಾಡ್ತಿದ್ದ.
ಈ ರೀತಿ ಮೋಸ ಮಾಡುತ್ತಿದ್ದ ಯುವಕನ ಹೆಸರು ಸಗೀರ್ ಎಂದು ಗುರುತಿಸಲಾಗಿದೆ. ಬಿಹಾರದ ದರ್ಭಾಂಗ ಮೂಲದವನಾಗಿದ್ದು, ಪ್ರಸ್ತುತ ಘಾಜಿಯಾಬಾದ್ನಲ್ಲಿ ವಾಸಿಸುತ್ತಿದ್ದ.
ಬಂಧಿತನಿಂದ ಎಂಟು ಫೋನ್ಗಳು, ಎರಡು ಆಧಾರ್ ಕಾರ್ಡ್ಗಳು, ಮಾದಕವಸ್ತು, ಮಾತ್ರೆಗಳು, ಒಂದು ಬ್ಯಾಗ್ ಮತ್ತು 67,150 ರೂ.ನಗದು ವಶಪಡಿಸಿಕೊಳ್ಳಲಾಗಿದೆ.
ಯುವಕನೊಬ್ಬ ರೈಲಿನಲ್ಲಿ ಸಹ ಪ್ರಯಾಣಿಕರೊಂದಿಗೆ ಸ್ನೇಹ ಬೆಳೆಸುತ್ತಿದ್ದ. ಅವರ ಫೋನ್ಗಳಲ್ಲಿ ಅವರೊಂದಿಗೆ ಲುಡೋ ಆಡುವ ನೆಪದಲ್ಲಿ, ಅವರ ಫೋನ್ ಪಾಸ್ವರ್ಡ್ ಪಡೆಯುತ್ತಿದ್ದ.
ಈ ಮಾಹಿತಿ ಪಡೆದು ರೈಲಿನಿಂದ ಇಳಿಯುವ ಮುನ್ನ ಪ್ರಯಾಣಿಕರಿಗೆ ಮಾದಕ ವಸ್ತು ನೀಡಿ ಮೊಬೈಲ್ ಫೋನ್, ಎಟಿಎಂ ಕಾರ್ಡ್, ನಗದು ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ದೋಚುತ್ತಿದ್ದ. ನಂತರ ಅವರು ಕದ್ದ ಫೋನ್ಗಳನ್ನು ಸಂತ್ರಸ್ತರ ಪಾಸ್ ವರ್ಡ್ ಬದಲಾಯಿಸಲು ಮತ್ತು ಅವರ ಖಾತೆಗಳಿಂದ ಹಣವನ್ನು ಹಿಂಪಡೆಯಲು ಬಳಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.