SUDDIKSHANA KANNADA NEWS/ DAVANAGERE/ DATE:31-01-2025
ದಾವಣಗೆರೆ: ಅಡಿಕೆ ನಾಡು ಚನ್ನಗಿರಿ(Channagiri)ಗೆ ತನ್ನದೇ ಆದ ಇತಿಹಾಸವಿದೆ. ಮುಖ್ಯಮಂತ್ರಿಯಾಗಿದ್ದವರನ್ನೇ ಸೋಲಿಸಿ ಪಕ್ಷೇತರರೊಬ್ಬರು ಗೆದ್ದ ಕ್ಷೇತ್ರ ಇಡೀ ದೇಶದ ಗಮನ ಸೆಳೆದಿತ್ತು. ಆದ್ರೆ, ಈಗ ದಾವಣಗೆರೆಯ ದೇವರಾಜ ಅರಸ್ ಬಡಾವಣೆಯ ವ್ಯಕ್ತಿಯೊಬ್ಬ ಮಾಡಿರುವ ಅನಾಚಾರದಿಂದ ಚನ್ನಗಿರಿ ತಾಲೂಕಿನಲ್ಲಿ ಆತಂಕಕ್ಕೆ ಕಾರಣವಾಗಿದೆ. ಮಾತ್ರವಲ್ಲ, ಇಂಥದ್ದೊಂದು ಘಟನೆ ಇತಿಹಾಸದಲ್ಲಿ ನಡೆದಿರಲಿಲ್ಲ ಎನ್ನುತ್ತಾರೆ ನಿವಾಸಿಗಳು.
ಅಮರ್ ಮೆಡಿಕಲ್ ಶಾಪ್ ಇಟ್ಟುಕೊಂಡು ಮಹಿಳೆಯರು, ಯುವತಿಯರು, ಕಾಲೇಜು ವಿದ್ಯಾರ್ಥಿನಿಯರನ್ನು ಟಾರ್ಗೆಟ್ ಮಾಡಿ ಹೀನ ಕೃತ್ಯಕ್ಕೆ ಬಳಸಿದ್ದು ವಿಡಿಯೋ ವೈರಲ್ ಬಳಿಕ ಬಟಾಬಯಲಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ವಿಡಿಯೋ
ವೈರಲ್ ಆಗುತ್ತಿದ್ದಂತೆ ಜನರು ಆಘಾತಕ್ಕೆ ಒಳಗಾಗಿದ್ದಾರೆ. ಕೆಲವರಂತೂ ಮನೆಯಿಂದ ಹೆಣ್ಣು ಮಕ್ಕಳನ್ನು ಹೇಗೆ ಹೊರಗೆ ಕಳುಹಿಸಬೇಕೆಂಬ ಚಿಂತೆಯಲ್ಲಿ ಮುಳುಗುವಂತೆ ಮಾಡಿದೆ.
ಹಾಸನದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ರಾಸಲೀಲೆ ಪ್ರಕರಣ ವಿಶ್ವಾದ್ಯಂತ ಸುದ್ದಿ ಮಾಡಿತ್ತು. ಪ್ರಜ್ವಲ್ ರೇವಣ್ಣ ಕೃತ್ಯಕ್ಕೆ ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಾಗಿತ್ತು. ಇಂಥ ಕೃತ್ಯ ಎಸಗಿದ್ದ ಪ್ರಜ್ವಲ್ ರೇವಣ್ಣ ಜೈಲಿನಲ್ಲಿದ್ದು, ಈ
ಪ್ರಕರಣ ಜನರ ಮನಸ್ಸಿನಲ್ಲಿ ಇನ್ನೂ ಮಾಸಿಲ್ಲ. ಇಂಥದ್ದೇ ಪ್ರಕರಣ ಚನ್ನಗಿರಿಯಲ್ಲಿ ಬೆಳಕಿಗೆ ಬಂದಿರುವುದು ಆಶ್ಚರ್ಯ ಮೂಡಿಸಿದೆ.
ಚನ್ನಗಿರಿ ತಾಲ್ಲೂಕಿನಲ್ಲಿ ಇಂತಹ ಲೈಂಗಿಕ ದೌರ್ಜನ್ಯ ಪ್ರಕರಣ ಇದುವರೆಗೆ ನಡೆದಿಲ್ಲ. ಈಗ ಇಂತಹ ದುಷ್ಟ ಎಲ್ಲಿಂದ ಹುಟ್ಟಿಕೊಂಡನೋ, ನಮ್ಮ ಪಟ್ಟಣ ಹಾಗೂ ತಾಲ್ಲೂಕಿನ ಮಾನ ಮಾರ್ಯಾದೆಯನ್ನು ತೆಗೆದು ಹಾಕಿದ್ದಾನೆ. ಇಂತಹ
ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಮೆಡಿಕಲ್ ಶಾಪ್ ಸೇರಿದಂತೆ ಇತರೆ ಅಂಗಡಿಗಳಿಗೆ ನಮ್ಮ ಮಕ್ಕಳನ್ನು ಹಾಗೂ ಹೆಣ್ಣು ಮಕ್ಕಳನ್ನು ಹೇಗೆ ಕಳುಹಿಸುವುದು. ಯಾರನ್ನೂ ನಂಬಬೇಕೋ ಬಿಡಬೇಕೋ ಎಂಬ ಚಿಂತೆಯಲ್ಲಿ ಇರುವಂತಹ
ವಾತಾವರಣ ಪಟ್ಟಣದಲ್ಲಿ ಸೃಷ್ಟಿಯಾಗಿದೆ ಎಂದು ಜನರು ಹೇಳುತ್ತಿದ್ದಾರೆ.
ಅಮರ್ ಮೆಡಿಕಲ್ ಶಾಪ್ ಮಾಲೀಕ ವಿಕೃತ ಕಾಮಿಯಾಗಿದ್ದು, ಸ್ನಾನ ಮಾಡುವ ಮಹಿಳೆಯರು, ಬಾಲಕಿಯರು, ಬಸ್ ನಲ್ಲಿ ಪ್ರಯಾಣಿಸುವ ಮಹಿಳೆಯರ ಪೋಟೋಗಳನ್ನು ತೆಗೆದಿದ್ದಾನೆ. ಈತ ಇನ್ನು ಏನೇನೋ ಮಾಡಿದ್ದಾನೆ ಎಂಬುದು ವಿಚಾರಣೆಯಿಂದ ಹೊರ ಬರಬೇಕಾಗಿದೆ. ಇಡೀ ಪಟ್ಟಣ ಈ ಸುದ್ಧಿಯನ್ನು ಕೇಳಿ ಬೆಚ್ಚಿ ಬಿದ್ದಿದೆ. ಇಂತಹ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಮುಂದೆ ಇಂತಹ ಘಟನೆಗಳು ನಡೆಯದಂತೆ ಜನರು ಜಾಗೃತಗೊಳ್ಳಬೇಕಾಗಿದೆ. ಘಟನೆಯ ವಿರುದ್ಧ ಮಹಿಳೆಯರು ಬೀದಿಗೆ ಇಳಿದು ಹೋರಾಟ ಮಾಡಲು ಸಿದ್ಧರಾಗಿದ್ದೇವೆ ಎಂದು ಪುರಸಭೆ ಸದಸ್ಯೆ ಕಮಲಾ ಹರೀಶ್ ಮಾಹಿತಿ ನೀಡಿದ್ದಾರೆ.
Read Also This Story:
EXCLUSIVE: ವಿದ್ಯಾರ್ಥಿನಿಯೊಂದಿಗೆ ಮೆಡಿಕಲ್ ಶಾಪ್ ಮಾಲೀಕ ರಾಸಲೀಲೆ ವಿಡಿಯೋ ವೈರಲ್: ಆರೋಪಿ ಸೆರೆ!
ಪಟ್ಟಣದಲ್ಲಿನ ಶಾಲಾ ಕಾಲೇಜುಗಳ ಮುಂದೆ ಕಾಲೇಜಿಗೆ ಹೋಗುವ ಹುಡುಗಿಯರನ್ನು ಚುಡಾಯಿಸುವುದು. ವಿದ್ಯಾರ್ಥಿನಿಯರ ಹಾಸ್ಟೆಲ್ ಗಳ ಮುಂದೆ ಸಂಜೆಯಾಗುತ್ತಿದ್ದಂತೆ ಹುಡುಗರು ಬಂದು ಚುಡಾಯಿಸುವುದು ಮುಂತಾದ ಘಟನೆಗಳು ನಡೆಯುತ್ತಿವೆ. ಹಾಗೆಯೇ ಈ ಮೆಡಿಕಲ್ ಶಾಪ್ ಮಾಲೀಕನ ಲೈಂಗಿಕ ದೌರ್ಜನ್ಯ ಪ್ರಕರಣದಿಂದಾಗಿ ಬಾಲಕಿಯರು, ವಿದ್ಯಾರ್ಥಿನಿಯರು ಹಾಗೂ ಹೆಣ್ಣು ಮಕ್ಕಳು ರಸ್ತೆಯಲ್ಲಿ ಹೋಗುವುದಕ್ಕೆ ಹಿಂದೆ ಮುಂದೆ ನೋಡುವಂತಾಗಿದೆ. ಇಂತಹ ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂಬ ಅಭಿಪ್ರಾಯ ವಿದ್ಯಾರ್ಥಿ ಸಮೂಹದಲ್ಲಿ ಕೇಳಿ ಬರುತ್ತಿದೆ.
ಈ ಘಟನೆ ಸಾಮಾಜಿಕ ಜಾಲ ತಾಣದಲ್ಲಿನ ವಿಡಿಯೋಗಳ ಮೂಲಕ ಹೊರ ಬಂದಿದ್ದು, ಇನ್ನು ಯಾವ ಸಂತ್ರಸ್ಥರು ಪೊಲೀಸ್ ಠಾಣೆಗೆ ದೂರು ನೀಡಿರುವುದಿಲ್ಲ. ಸಂತ್ರಸ್ಥರು ಧೈರ್ಯವಾಗಿ ಹೊರ ಬಂದು ಠಾಣೆಗೆ ದೂರು ನೀಡಿದರೆ ಮಾತ್ರ ಈ ಲೈಂಗಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ತಕ್ಕ ಶಿಕ್ಷೆಯಾಗಲಿದೆ. ಸಂತ್ರಸ್ಥೆಯರಿಗೆ ನ್ಯಾಯ ದೊರಕಿಸಿಕೊಡಲು ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕಾಗಿದೆ ಎಂದು ಜನರು ಹೇಳುತ್ತಿದ್ದಾರೆ.