SUDDIKSHANA KANNADA NEWS/ DAVANAGERE/ DATE:31-01-2025
ದಾವಣಗೆರೆ: ಅಶ್ಲೀಲ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಚನ್ನಗಿರಿ(Channagiri)ಯಲ್ಲಿ ಜನರ ಆಕ್ರೋಶ ಭುಗಿಲೆದ್ದಿದೆ. ಚನ್ನಗಿರಿ ಪಟ್ಟಣದಲ್ಲಿ ಅಮರ್ ಮೆಡಿಕಲ್ ಶಾಪ್ ಮಾಲೀಕ ಅಮ್ಜದ್ ರಾಸಲೀಲೆ ವಿಡಿಯೋ ವೈರಲ್ ಆಗಿದ್ದು, ಜನರು ಬೆಚ್ಚಿಬೀಳುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಫೆಬ್ರವರಿ 3ರಂದು ಚನ್ನಗಿರಿ ಪಟ್ಟಣ ಬಂದ್ ಗೆ ಕರೆ ನೀಡಲಾಗಿದೆ.
ಅಮಾಯಕ ಹೆಣ್ಣು ಮಕ್ಕಳು, ಶಾಲಾ ವಿದ್ಯಾರ್ಥಿನಿಯರು ಹಾಗೂ ಯುವತಿಯರ ಜೊತೆ ರಾಸಲೀಲೆ ನಡೆಸಿ ವಿಡಿಯೋ ಚಿತ್ರೀಕರಿಸುತ್ತಿದ್ದ ಅಮ್ಜದ್ ಗೆ ಕಠಿಣ ಶಿಕ್ಷೆಯಾಗಲೇಬೇಕು. ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಚನ್ನಗಿರಿ ಸ್ವಯಂಪ್ರೇರಿತ ಬಂದ್ ಗೆ ಕರೆ ಕೊಡಲಾಗಿದೆ.
ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಹಿಳಾ, ಹಿಂದೂ ಪರ ಸಂಘಟನೆಗಳು ಹಾಗೂ ಕನ್ನಡಪರ ಸಂಘಟನೆಗಳಿಂದ ಕರೆ ನೀಡಲಾಗಿದ್ದು, ಅಂದು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಪಟ್ಟಣದ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಹೊರಡುವ ಪ್ರತಿಭಟನೆ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಿ ತಹಶೀಲ್ದಾರ್ ಕಚೇರಿಗೆ ಆಗಮಿಸಿ ತಹಶೀಲ್ದಾರ್ ಅವರಿಗೆ ಮನವಿ ನೀಡಲಾಗುವುದು. ಪಟ್ಟಣದ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡುವ ಮೂಲಕ ಈ ಪ್ರತಿಭಟನೆಗೆ
ಬೆಂಬಲ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಚನ್ನಗಿರಿ ಪಟ್ಟಣದಲ್ಲಿ ಪತ್ರಿಕಾಗೋಷ್ಠಿ ನಡೆಸಿರುವ ವಿಶ್ವ ಹಿಂದೂ ಪರಿಷತ್ ನ ಜಿಲ್ಲಾ ಸಂಚಾಲಕ ಮಂಜುನಾಥ್ ಅವರು ಈ ಮಾಹಿತಿ ನೀಡಿದ್ದಾರೆ. ಅಮರ್ ಮೆಡಿಕಲ್ ಶಾಪ್ ಮಾಲೀಕ ಅಮ್ಜದ್ ಅವರು ಅಪ್ರಾಪ್ತ ಬಾಲಕಿಯರು ಹಾಗೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ವಿಡಿಯೋಗಳು ನಾಲ್ಕೈದು ದಿನಗಳಿಂದ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದ್ದು, ಈತನನ್ನು ದಾವಣಗೆರೆ ದೇವರಾಜ್ ಅರಸು ಬಡಾವಣೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಈ ಕೃತ್ಯವನ್ನು ಇಡೀ ನಾಗರೀಕ ಸಮಾಜ ಬಲವಾಗಿ ಖಂಡಿಸುತ್ತದೆ ಎಂದು ತಿಳಿಸಿದರು.
ಹಿಂದೂ ಸಮಾಜದ ಮಹಿಳೆಯರು ಹಾಗೂ ಶಾಲಾ ಕಾಲೇಜುಗಳ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿಭಟನೆ ನಡೆಸಲಾಗುವುದು ಹಾಗೂ ಬಂದ್ ಗೆ ಕರೆ ನೀಡಲಾಗಿದೆ. ಸಾರ್ವಜನಿಕರು ಸಹಕರಿಸುವಂತೆ ಮನವಿ
ಮಾಡಿದ ಅವರು, ಈಗಾಗಲೇ ವರ್ತಕರ ಸಂಘದ ಜೊತೆ ಚರ್ಚೆ ನಡೆಸಿದ್ದು, ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಅಮರ್ ಮೆಡಿಕಲ್ ಶಾಪ್ ನ ಪರವಾನಿಗೆ ಕೂಡಲೇ ರದ್ಧುಪಡಿಸಬೇಕು. ಇಂತಹ ಕೃತ್ಯಗಳು ಪಟ್ಟಣದಲ್ಲಿ ಮುಂದಿನ ದಿನಗಳಲ್ಲಿ ನಡೆಯಬಾರದು. ಪೊಲೀಸರು ಆರೋಪಿಯ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಯಾವುದೇ ಕಾರಣಕ್ಕೂ ಶಿಕ್ಷೆಯಿಂದ ತಪ್ಪಿಸಿಕೊಳ್ಳದಂತೆ ನೋಡಿಕೊಳ್ಳಬೇಕು. ಇಂಥ ಕಾಮುಕ ನಾಗರಿಕ ಸಮಾಜದಲ್ಲಿ ಬದುಕಲು ಅರ್ಹನಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಕುರುಬ ಸಮಾಜದ ನಗರ ಘಟಕದ ಅಧ್ಯಕ್ಷ ಕೆ.ಆರ್. ಗೋಪಿ, ಪುರಸಭೆ ಸದಸ್ಯರಾದ ಚಿಕ್ಕಣ್ಣ, ಕಮಲಾ ಹರೀಶ್, ಕನ್ನಡನಾಡು ಹಿತ ರಕ್ಷಣಾ ಸಮಿತಿ ನಗರ ಘಟಕದ ಅಧ್ಯಕ್ಷ ಕೆ.ಆರ್. ನಟರಾಜ್ ರಾಯ್ಕರ್, ಕೆ.ಪಿ.ಎಂ.
ಲತಾ, ಸರೋಜಮ್ಮ, ಶಶಿಕಲಾ, ನವೀನ್ ಪಲ್ಲಕ್ಕಿ, ಶಿವಲಿಂಗಪ್ಪ ಉಪಸ್ಥಿತರಿದ್ದರು.