SUDDIKSHANA KANNADA NEWS/ DAVANAGERE/ DATE:25-02-2025
ದಾವಣಗೆರೆ: ಸಾಮಾಜಿಕ, ಶೈಕ್ಷಣಿಕ, ಜಾತಿ ಗಣತಿ ವರದಿ ಬಿಡುಗಡೆ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜು ಅವರನ್ನು ಬೆಂಬಲಿಸಿದ ಕ್ಷೇತ್ರದ ಅಹಿಂದ ಮತದಾರರಿಗೆ ಮಾಡುತ್ತಿರುವ ದ್ರೋಹ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಅಹಿಂದ ಸಹಕಾರವಿಲ್ಲದೇ ಚುನಾವಣೆ ಎದುರಿಸಿ ಗೆಲ್ಲಲಿ ಎಂದು ಅಹಿಂದ ಮುಖಂಡರು ಸವಾಲು ಹಾಕಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಹಿಂದ ಚೇತನ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಮೌರ್ಯ ಅವರು, ಕಾಂಗ್ರೆಸ್ ಟಿಕೆಟ್ ಪಡೆದು, ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರ ಸಹಕಾರದಿಂದ ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿರುವ ಅಹಿಂದ ಮತದಾರರ ಮತಗಳಿಂದ ಆಯ್ಕೆಯಾಗಿ ಶಾಸಕರಾಗಿರುವ ಶಿವಗಂಗಾ ಬಸವರಾಜುರವರು ಯಾವುದೇ ಕಾರಣಕ್ಕೂ ಜಾತಿ ಗಣತಿ ವರದಿಗೆ ವಿರೋಧವಿದೆ ಎಂದು ಬಹಿರಂಗವಾಗಿ ಹೇಳಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
2015ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಮಾಜಿಕ, ಶೈಕ್ಷಣಿಕ, ಜಾತಿ ಗಣತಿ ನಡೆಸಲು 165 ಕೋಟಿ ರೂಪಾಯಿಗಳನ್ನು ಬಿಡುಗಡೆಗೊಳಿಸಿ, ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಆಯೋಗದ ಸಹಯೋಗದಲ್ಲಿ ‘ವಿದ್ಯಾವಂತ, ತರಬೇತಿ ಪಡೆದ ಶಿಕ್ಷಕರು’ಗಳಿಂದ ಮನೆ, ಮನೆ ಸಮೀಕ್ಷೆಗಳನ್ನು ನಡೆಸಿದ್ದಾರೆ. 55 ಪ್ರಶ್ನೆಗಳನ್ನು ಒಳಗೊಂಡ ಸಮೀಕ್ಷೆಯಲ್ಲಿ ಒಬ್ಬ ವ್ಯಕ್ತಿಯ, ಒಂದು ಕುಟುಂಬದ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಮಾಹಿತಿಗಳ ಸಂಗ್ರಹವಾಗಿರುತ್ತದೆ. ವರದಿ ಸಿದ್ಧವಾಗಿದ್ದರೂ 10 ವರ್ಷಗಳಿಂದ ಬಿಡುಗಡೆಗೊಳಿಸಲು ಮೀನಾ ಮೇಷ ಎಣಿಸುತ್ತಿರುವುದು, ಅಂದಿನ ಕಾಂಗ್ರೆಸ್, ಸಮ್ಮಿಶ್ರ, ಬಿಜೆಪಿ ಮತ್ತು ಮತ್ತೊಮ್ಮೆ ಕಾಂಗ್ರೆಸ್ ಪಕ್ಷಗಳ ಸರ್ಕಾರಗಳು ಅಹಿಂದ ವರ್ಗಗಳಿಗೆ ಮಾಡುತ್ತಿರುವ ಅನ್ಯಾಯ ಎಂದು ಕಿಡಿಕಾರಿದರು.
ಕಾಂಗ್ರೆಸ್ ಪಕ್ಷದ ವರಿಷ್ಠರು ಪ್ರತಿಪಕ್ಷದ ನಾಯಕರೂ ಆಗಿರುವ ರಾಹುಲ್ ಗಾಂಧಿಯವರು ದೇಶಾದ್ಯಂತ ಜಾತಿ ಗಣತಿ ಮಾಡಲು ಲೋಕಸಭೆಯಲ್ಲಿ ಹಾಗೂ ಚುನಾವಣಾ ಪ್ರಚಾರಗಳಲ್ಲಿ ಒತ್ತಾಯಿಸಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ “ಜಾತಿ ಗಣತಿ” ಬಿಡುಗಡೆ ಮಾಡುತ್ತೇವೆಂದು ವಾಗ್ದಾನ ನೀಡಿದೆ. ಅಂದು ಪ್ರಣಾಳಿಕೆಯನ್ನು ಜನರ ಮುಂದಿಟ್ಟು ಮತಗಳನ್ನು ಕೇಳಿ ಗೆದ್ದಿರುವ ಚನ್ನಗಿರಿ ಶಾಸಕರಿಗೆ ಅಂದು ಜಾತಿ ಗಣತಿಯ ಅಂಶವನ್ನು ಯಾಕೆ ವಿರೋಧಿಸಲಿಲ್ಲ ? 10ವರ್ಷಗಳ ನಂತರ ನಮ್ಮ ಮನೆಗೆ ಬಂದು ಸಮೀಕ್ಷೆ ನಡೆಸಲಿಲ್ಲ, ಎಲ್ಲೋ ಕುಳಿತು ಸಮೀಕ್ಷೆ ಮಾಡಿರುತ್ತಾರೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿರುವ ಶಾಸಕರು ಅಂದು ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯರಾಗಿ, ಸರ್ಕಾರದ ಭಾಗವಾಗಿದ್ದರು. ಇಂದು “ನಮ್ಮ ಮನೆಗೆ ಬಂದಿಲ್ಲ ಎಂದು ಹೇಳುವುದೇ ಪ್ರಜಾಪ್ರಭುತ್ವಕ್ಕೆ ಹಾಗೂ ತನ್ನ ಪಕ್ಷಕ್ಕೆ ಮಾಡುತ್ತಿರುವ ಅಪಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚನ್ನಗಿರಿ ಕ್ಷೇತ್ರದಲ್ಲಿ ಶೇಕಡಾ 80ರಷ್ಟಿರುವ ಅಹಿಂದ ವರ್ಗಗಳಿಗೆ ಅಪಮಾನ ಮಾಡುತ್ತಿರುವ ಶಿವಗಂಗಾ ಬಸವರಾಜುರವರು ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅಹಿಂದ ವರ್ಗಗಳ ಮತಗಳ ಬೆಂಬಲವಿಲ್ಲದೇ ಚುನಾವಣೆ ಎದುರಿಸಲಿ ಎಂಬ ಪಂಥಾಹ್ವಾನವನ್ನು ನೀಡುತ್ತಿದ್ದೇವೆ ಎಂದು ಹೇಳಿದರು.
ಪಕ್ಕದ ತೆಲಂಗಾಣ ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರ ಒಂದೇ ವರ್ಷದಲ್ಲಿ ಜಾತಿ ಗಣತಿಯನ್ನು ಬಿಡುಗಡೆ ಮಾಡಿ ಧೈರ್ಯ ಹಾಗೂ ಬದ್ಧತೆ ತೋರಿದೆ. ಅಹಿಂದ ವರ್ಗಗಳ ಪರಮೋಚ್ಚ ನಾಯಕ ಸಿದ್ದರಾಮಯ್ಯನವರು 10 ವರ್ಷಗಳ ಹಿಂದೆ ತಾವೇ ನಡೆಸಿದ ಸಮೀಕ್ಷೆ, ಮತ್ತೊಮ್ಮೆ ಮುಖ್ಯಮಂತ್ರಿಯಾಗಿ 2 ವರ್ಷಗಳು ಕಳೆದರೂ ಕಾಲಹರಣ ಮಾಡುತ್ತಾ, ಮೀನಾ ಮೇಷ ಎಣಿಸುತ್ತಿರುವುದು ಯಾಕೆ? ಮುಖ್ಯಮಂತ್ರಿಗಳು ಈಗಲಾದ್ರೂ ಧೈರ್ಯ ತೋರಿ, ಜಾತಿ ಗಣತಿ ವರದಿಯನ್ನು ಬಿಡುಗಡೆಗೊಳಿಸಿ, ತಮ್ಮದೇ ಪಕ್ಷದ ಈ ವರದಿಯನ್ನು ವಿರೋಧಿಸುವ ಶಾಸಕರು, ಸಚಿವರುಗಳ ಉದ್ಧಟತನದ ಮಾತುಗಳಿಗೆ ಉತ್ತರ ನೀಡಿ, ಅಹಿಂದ ವರ್ಗಗಳಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಚಂದ್ರು ದೀಟೂರು, ಎಸ್. ಎಂ. ಸಿದ್ದಲಿಂಗಪ್ಪ, ಅನಿಲ್ ಕುಮಾರ್, ಹಸನ್ ಬಾಬು, ಅಣ್ಣಪ್ಪ ಮತ್ತಿತರರು ಹಾಜರಿದ್ದರು.