ಬೆಣ್ಣೆ ನಗರಿಯಲ್ಲಿ ಸಿಎಂ ಸಿದ್ದರಾಮಯ್ಯ ಅಬ್ಬರದ ಭಾಷಣ ಮಾಡಿದ್ದು, ತಮ್ಮ ಹಳೇ ಖದರ್‌ನಲ್ಲಿ ಜಾತಿ ಗಣತಿ ಜಾರಿ ಮಾಡೇ ಮಾಡ್ತೀವಿ ಎಂದಿದ್ದಾರೆ. ಕನಕ ಜಯಂತೋತ್ಸವದಲ್ಲಿ ಮಾತನಾಡಿದ ಮುಖ್ಯಮಂತ್ರಿ ನಾನು ಯಾವಾಗಲು ಜಾತಿಗಣತಿ ಪರವಾಗಿರುವವನು. ಸಮ ಸಮಾಜದ ನಿರ್ಮಾಣ ಮಾಡಬೇಕೆಂಬುದು ನನ್ನ ಕನಸು ಎಂದು ಹೇಳಿದರು.
ದಾವಣಗೆರೆ ಹೈಸ್ಕೂಲ್ ಮೈದಾನದಲ್ಲಿ ಕನಕ ಜಯಂತೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಮಾತಾಡಿದ ಸಿಎಂ, ಟೇಬಲ್ ಕುಟ್ಟಿ ಕಾಂತರಾಜು ವರದಿ ಅನುಷ್ಠಾನಕ್ಕೆ ನಾನು ಬದ್ಧ ಎಂದು ಗುಡುಗಿದರು. ಮುಂದಿನ ಕ್ಯಾಬಿನೆಟ್‌ನಲ್ಲಿ ಜಾತಿ ಗಣತಿ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಕ್ಯಾಬಿನೆಟ್‌ನಲ್ಲಿ ಕಾಂತರಾಜ್ ಆಯೋಗದ ವರದಿ ಅನುಷ್ಠಾನಕ್ಕೆ ಚರ್ಚಿಸುತ್ತೇನೆ ಎಂದು ಹೇಳಿದರು.
ಮಾತು ಮುಂದುವರೆಸಿದ ಸಿಎಂ ಸಿದ್ದರಾಮಯ್ಯ, ಕನಕದಾಸರು ಆಕಸ್ಮಿಕವಾಗಿ ಕುರುಬ ಜಾತಿಯಲ್ಲಿ ಹುಟ್ಟಿದರು. ನಂತರ ಸಂತರಾಗಿ ಬೆಳೆದರು. ಸಾಹಿತ್ಯದಲ್ಲಿ ಎರಡು ವಿಧ ಇದ್ದವು ಶರಣ ಸಾಹಿತ್ಯ, ದಾಸ ಸಾಹಿತ್ಯ. ಶರಣ ಸಾಹಿತ್ಯದಲ್ಲಿ ಇವನ್ಯಾರವ ಇವ್ಯಾರವ ಎಂದನಿಸದಿರಯ್ಯ ಇವ ನಮ್ಮವ ಇವ ನಮ್ಮವ ಎಂದಿನಿಸಯ್ಯ ಅಂತ ಹೇಳಿದ್ದಾರೆ. ಕನಕದಾಸರು ಜಾತಿ ವ್ಯವಸ್ಥೆ ಬಗ್ಗೆ ಕುಲ ಕುಲ ಎಂದು ಹೊಡೆದಾಡದಿರಿ ಕುಲದ ನೆಲೆ ಏನಾದ್ರೂ ಬಲ್ಲಿರಾ ಎಂದ್ರು. ನಮ್ಮಲ್ಲಿ ಜಾತಿ, ಧರ್ಮ, ಭಾಷೆ ಸಂಸ್ಕೃತಿ ತಾರತಮ್ಯ ಇದೆ. ಈ ತಾರತಮ್ಯ ಹೋಗಿ ಮನುಷ್ಯರಾಗಿ ಬಾಳಬೇಕು ಅಂತ ಅನೇಕ ದಾರ್ಶನಿಕರ ಹೇಳಿದ್ದಾರೆ
ಹಿಂದೆ ವರ್ಣ ವ್ಯವಸ್ಥೆಯಿಂದ ಎಲ್ಲರಿಗೂ ಸಮಾನ ಅವಕಾಶ ಸಿಗಲಿಲ್ಲ. ಹುಟ್ಟಿನಿಂದ ಯಾರು ಕೂಡ ದಡ್ಡರಲ್ಲ ಅವರಿಗೆ ಅವಕಾಶ ಸಿಗಬೇಕು. ನಮಗೆ ವರ್ಣ ವ್ಯವಸ್ಥೆಯಲ್ಲಿ ರಕ್ಷಣೆ ಇರಲಿಲ್ಲ. ಸಂವಿಧಾನ ಇದ್ದರಿಂದ ನಮಗೆ ರಕ್ಷಣೆ ಸಿಗುತ್ತಾ ಇದೆ. ಸಂವಿಧಾನ ಬಂದ ರಾಜಕೀಯ ಮೇಲೆ ಸಮಾನತೆ ಬಂದಿದೆ. ನಾವು ಯಾವ ಜಾತಿ ಧರ್ಮದವರನ್ನ ವಿರೋಧ ಮಾಡಲ್ಲ. ಆದರೆ ಜಾತಿ ಮಾಡುವವರನ್ನ ವಿರೋಧ ಮಾಡ್ತೀವಿ ಎಂದು ಸಮಾನತೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ಪಾಠ ಮಾಡಿದರು.