SUDDIKSHANA KANNADA NEWS/ DAVANAGERE/ DATE:16-11-2024
ಮಹಾರಾಷ್ಟ್ರ: ಮಹಾರಾಷ್ಟ್ರ ಸರ್ಕಾರದ ವಿರುದ್ಧ ಕೇಸು ದಾಖಲಿಸಲು ನಿರ್ಧರಿಸಿದ್ದೇವೆ. ನಮ್ಮ ಸರ್ಕಾರದ ವಿರುದ್ಧ ಪುಟಗಟ್ಟಲೆ ಸುಳ್ಳು ಜಾಹಿರಾತು ನೀಡಿರುವ ಮಹಾರಾಷ್ಟ್ರ ಬಿಜೆಪಿ ಸರ್ಕಾರದ ವಿರುದ್ಧ ಕೇಸು ದಾಖಲಿಸಲು ನಿರ್ಧರಿಸಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮಹಾರಾಷ್ಟ್ರದ ಮಂಗಳವೇಡಾದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ಪ್ರತೀ ವರ್ಷ 4 ಲಕ್ಷ 50 ಸಾವಿರ ಕೋಟಿಯಷ್ಟು ತೆರಿಗೆಯನ್ನು ಕೇಂದ್ರಕ್ಕೆ ಪಾವತಿಸಿದರೆ, ವಾಪಾಸ್ ರಾಜ್ಯಕ್ಕೆ ಬರುತ್ತಿರುವುದು 60 ಸಾವಿರ ಕೋಟಿ ರೂಪಾಯಿ ಮಾತ್ರ. ಮಹಾರಾಷ್ಟ್ರ ರಾಜ್ಯ ಪ್ರತೀ ವರ್ಷ 8 ಲಕ್ಷ 78 ಸಾವಿರ ಕೋಟಿ ರೂಪಾಯಿ ತೆರಿಗೆ ಕಟ್ಟಿದರೆ ವಾಪಾಸ್ ಬರುತ್ತಿರುವುದು 1 ಲಕ್ಷ 30 ಸಾವಿರ ಕೋಟಿ ಮಾತ್ರ. ಹೀಗಾಗಿ ಮಹಾರಾಷ್ಟ್ರ ಕಟ್ಟುವ ಪ್ರತೀ ಒಂದು ರೂಪಾಯಿ ತೆರಿಗೆಯಲ್ಲಿ 15 ಪೈಸೆಯಷ್ಟನ್ನು, ಕರ್ನಾಟಕ 13 ಪೈಸೆಯಷ್ಟನ್ನು ಮಾತ್ರ ವಾಪಾಸ್ ಪಡೆಯುತ್ತಿದೆ ಎಂದು ಆರೋಪಿಸಿದರು.
ಕೇಂದ್ರದ ಮೋದಿ ಸರ್ಕಾರ ಕರ್ನಾಟಕ ಮತ್ತು ಮಹಾರಾಷ್ಟ್ರ ಎರಡೂ ರಾಜ್ಯಗಳಿಗೂ ಅನ್ಯಾಯ ಮಾಡುತ್ತಿದೆ. ಗ್ಯಾರಂಟಿಗಳ ಜಾರಿಯಿಂದ ಆರ್ಥಿಕತೆ ನಾಶವಾಗುತ್ತದೆ ಎಂದು ಮೋದಿ ಭಾಷಣ ಮಾಡಿದ್ದಾರೆ. ಆದರೆ, ಇದೇ ಬಿಜೆಪಿ ಮಹಾರಾಷ್ಟ್ರ ಚುನಾವಣೆಯಲ್ಲೂ ಗ್ಯಾರಂಟಿಗಳನ್ನು ಘೋಷಿಸಿದೆ. ಮಧ್ಯಪ್ರದೇಶ ಚುನಾವಣೆಯಲ್ಲೂ ಗ್ಯಾರಂಟಿಗಳನ್ನು ಘೋಷಿಸಿತ್ತು. ಮೋದಿ ಯಾಕೆ ಈ ಮಟ್ಟದ ಸುಳ್ಳು ಹೇಳುತ್ತಾರೆ? ಕರ್ನಾಟಕ ರಾಜ್ಯದಲ್ಲಿ ಎಲ್ಲಾ ಜಾತಿ, ಎಲ್ಲಾ ಧರ್ಮ, ಎಲ್ಲಾ ವರ್ಗದವರೂ ನಮ್ಮ ಗ್ಯಾರಂಟಿಗಳ ಅನುಕೂಲ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಮಹಾರಾಷ್ಟ್ರ ಸರ್ಕಾರ ಸಾಮಾಜಿಕವಾಗಿ, ಆರ್ಥಿಕವಾಗಿ ದೊಡ್ಡ ರಾಜ್ಯ. ಆದ್ದರಿಂದ ಇಲ್ಲಿ ಕಾಂಗ್ರೆಸ್ ಮತ್ತು ಮಹಾ ವಿಕಾಸ್ ಆಘಾಡಿ ಒಕ್ಕೂಟ ಅಧಿಕಾರಕ್ಕೆ ಬಂದರೆ ಎಲ್ಲಾ ಗ್ಯಾರಂಟಿಗಳನ್ನು ಜಾರಿ ಮಾಡುತ್ತಾರೆ. ಅನುಮಾನ ಬೇಡ ಎಂದರು.
ಮೋದಿ ಸರ್ಕಾರ ರೈತರ ಒಂದು ರೂಪಾಯಿ ಸಾಲವನ್ನೂ ಮನ್ನಾ ಮಾಡಲಿಲ್ಲ. ಶ್ರೀಮಂತ ಉದ್ಯಮಿಗಳ 16 ಲಕ್ಷ ಕೋಟಿ ರೂಪಾಯಿ ಸಾಲವನ್ನು ಮಾತ್ರ ಮನ್ನಾ ಮಾಡಿದೆ. ಆದ್ದರಿಂದ ಬಿಜೆಪಿ ಮತ್ತು ಮೋದಿ ಕೇವಲ ಅತ್ಯಂತ ಶ್ರೀಮಂತರ ಪರವಾಗಿದೆ ಎನ್ನುವುದು ಸಾಬೀತಾಗಿದೆ ಎಂದು ವಾಗ್ದಾಳಿ ನಡೆಸಿದರು.
ನಾನು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ರೈತರ ₹8,165 ಕೋಟಿ ಸಾಲ ಮನ್ನಾ ಮಾಡಿದ್ದೇನೆ. ಮನಮೋಹನ್ ಸಿಂಗ್ ಅವರು ಪ್ರಧಾನಿ ಆದಾಗ ಭಾರತದ ರೈತರ 76 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ದರು. ಆದ್ದರಿಂದ ಮಹಾರಾಷ್ಟ್ರ ಜನತೆ ಮಹಾ ವಿಕಾಸ್ ಅಘಾಡಿಯನ್ನು ಗೆಲ್ಲಿಸುವ ಮೂಲಕ ಮಹಾರಾಷ್ಟ್ರದ ಅಭಿವೃದ್ಧಿ ಮತ್ತು ಮಹಾರಾಷ್ಟ್ರದ ಜನತೆಯ ಆರ್ಥಿಕ ಪ್ರಗತಿಗೆ ಕಾರಣರಾಗಬೇಕು ಎಂದು ವಿನಂತಿಸುತ್ತೇನೆ ಎಂದರು.