SUDDIKSHANA KANNADA NEWS/ DAVANAGERE/ DATE-30-04-2025
ದಾವಣಗೆರೆ: ಆರು ಸಾವಿರದ ಇನ್ನೂರು ಸರ್ಕಾರಿ ಶಾಲೆಗಳನ್ನು ಮುಚ್ಚಲು ರಾಜ್ಯ ಸರ್ಕಾರ ಹುನ್ನಾರ ನಡೆಸಿದ್ದು, ಈ ಹಿನ್ನೆಲೆಯಲ್ಲಿ ಜನಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. 50 ಲಕ್ಷ ಮಂದಿಯ ಸಹಿ ಸಂಗ್ರಹ ಅಭಿಯಾನ ನಡೆಸಲಾಗುತ್ತಿದೆ.
ಎಐಡಿಎಸ್ಒ ಸಂಘಟನೆಯು ಈ ಅಭಿಯಾನ ನಡೆಸುತ್ತಿದ್ದು, ದಾವಣಗೆರೆಯ ಪಿಬಿ ರಸ್ತೆಯ ಮಹಾನಗರ ಪಾಲಿಕೆ ಸಮೀಪದ ಸಿಟಿ ಬಸ್ ನಿಲ್ದಾಣದ ಮುಂಭಾಗ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವ ಸರ್ಕಾರದ ನಿಲುವು ವಿರೋಧಿಸಿ ಸಾರ್ವಜನಿಕರಿಂದ ಸಹಿ ಸಂಗ್ರಹಿಸಿತು.
ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷೆ ಪೂಜಾ ನಂದಿಹಳ್ಳಿ, ರಾಜ್ಯ ಸರ್ಕಾರ ಕಡಿಮೆ ದಾಖಲಾತಿ ಹೆಸರಿನಲ್ಲಿ 6,000ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿದೆ ಅದರಲ್ಲಿ ದಾವಣಗೆರೆಯಲ್ಲಿ ಮುಚ್ಚುತ್ತಿರುವ ಶಾಲೆಗಳ ಸಂಖ್ಯೆ 100ಕ್ಕೂ ಹೆಚ್ಚು. ಸರ್ಕಾರಿ ಶಾಲೆಗಳು ಬಡ ವಿದ್ಯಾರ್ಥಿಗಳ ಆಶಾಕಿರಣ, ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಅಡಿಪಾಯ. ಈ ಶಾಲೆಗಳಿಗೆ ಶಿಕ್ಷಣದ ಕನಸು ಹೊತ್ತು ಬರುವವರು ಬಹುತೇಕ ಬಡವರ, ರೈತ ಮತ್ತು ಕಾರ್ಮಿಕರ ಮಕ್ಕಳು. ಅಂತಹ ಸರ್ಕಾರಿ ಶಾಲೆಗಳ ಇಂದಿನ ಪರಿಸ್ಥಿತಿ ಬಹಳ ಶೋಚನೀಯ ಹಾಗೂ ಚಿಂತಾಜನಕವಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದ ವರದಿಯ ಪ್ರಕಾರ ರಾಜ್ಯದಲ್ಲಿ ಸುಮಾರು 7,821 ಏಕೋಪಾಧ್ಯಾಯ ಶಾಲೆಗಳಿವೆ. 3500ಕ್ಕೂ ಹೆಚ್ಚು ಶಾಲೆಗಳಲ್ಲಿ ಬಳಕೆಗೆ ಯೋಗ್ಯ ಶೌಚಾಲಯ ವ್ಯವಸ್ಥೆ ಇಲ್ಲ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಹಲವು ಶಾಲೆಗಳ ಕಟ್ಟಡಗಳು ವರ್ಷಗಳಿಂದ ದುರಸ್ತಿ ಕಾಣದೆ ಚಾವಣಿಗಳು ಸೋರುತ್ತಿವೆ. ಎಲ್ಲದಕ್ಕಿಂತ ಮುಖ್ಯವಾಗಿ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ 59,000ಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇವೆ. 29 ಸಾವಿರಕ್ಕಿಂತ ಹೆಚ್ಚು ಸರ್ಕಾರಿ ಶಾಲೆಗಳು ಶಿಥಿಲಗೊಂಡು ಬೀಳುವ ಹಂತದಲ್ಲಿವೆ. ಸರ್ಕಾರದ ಬೇಜವಾಬ್ದಾರಿತನದಿಂದ, ಹಲವು ವರ್ಷಗಳಿಂದ ದುರಸ್ತಿ ಕಾಣದ ಶಾಲೆಗಳ ಚಾವಣಿ ಕುಸಿದು ಮಕ್ಕಳು ಗಾಯಗೊಂಡಿರುವುದು, ಪ್ರಾಣ ಕಳೆದುಕೊಂಡಿರುವುದಂತೂ ಹೃದಯವಿದ್ರಾವಕ ಎಂದರು.
ರಾಜ್ಯದ ಸರ್ಕಾರಿ ಶಾಲೆಗಳು ಎದುರಿಸುತ್ತಿರುವ ಯಾವ ಗಂಭೀರ ಸಮಸ್ಯೆಗಳನ್ನು ಪರಿಹರಿಸದೇ, ಕಡಿಮೆ ದಾಖಲಾತಿ ಹೆಸರಲ್ಲಿ ಶಾಲೆಗಳನ್ನು ಮುಚ್ಚುತ್ತಿರುವುದು ಬಡವರ ಮಕ್ಕಳಿಂದ ಶಾಶ್ವತವಾಗಿ ಶಿಕ್ಷಣವನ್ನು ಕಿತ್ತುಕೊಳ್ಳುವ ಹುನ್ನಾರವಾಗಿದೆ ಎಂದು ಕಿಡಿಕಾರಿದರು.
ಸರ್ಕಾರವು ತನ್ನ ಈ ಅವೈಜ್ಞಾನಿಕ ಮತ್ತು ಅಪ್ರಜಾತಾಂತ್ರಿಕ ಜನ ವಿರೋಧಿ ನಿರ್ಧಾರವನ್ನು ಕೈಬಿಡಬೇಕು ಹಾಗೂ ಕೂಡಲೇ ಹಾಜರಾತಿ ಕಡಿಮೆ ಇರುವ ಶಾಲೆಗಳನ್ನು ಮುಚ್ಚುವ ಬದಲು ಅವಶ್ಯಕ ಮೂಲಭೂತ ಸೌಲಭ್ಯಗಳನ್ನು ನೀಡಿ ಅಭಿವೃದ್ಧಿಪಡಿಸಿ ರಕ್ಷಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿಗಳಾದ ಟಿ. ಎಸ್. ಸುಮನ್, ಕಾರ್ಯಕರ್ತರಾದ ಗಂಗಾಧರ, ಪ್ರೇಮ್ ಕುಮಾರ ವಿದ್ಯಾರ್ಥಿಗಳು ಭಾಗವಹಿಸಿದ್ದರು.