SUDDIKSHANA KANNADA NEWS/ DAVANAGERE/ DATE:16-11-2024
ಬೆಂಗಳೂರು: ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ನಮ್ಮ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ 40% ಕಮಿಷನ್ ಎಂಬ ಸುಳ್ಳು ಅಪಪ್ರಚಾರ ನಡೆಸಿದ್ದ ಕಾಂಗ್ರೆಸ್ ಪಕ್ಷದ ಆರೋಪ ಆಧಾರರಹಿತ ಹಾಗೂ ಹಸೀ ಸುಳ್ಳು ಎಂಬುದು ಇದೀಗ ಲೋಕಾಯುಕ್ತ ತನಿಖೆಯಲ್ಲೇ ಬಹಿರಂಗವಾಗಿದೆ. ಭ್ರಷ್ಟತೆಯ ಕೂಪದಲ್ಲಿ ಮುಳುಗಿರುವ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಸರ್ಕಾರ ತಾನು ಹೇಳುವುದೆಲ್ಲಾ ಸುಳ್ಳು, ಕಟ್ಟುಕಥೆ ಕಟ್ಟುವಲ್ಲಿ ತಾನು ನಿಸ್ಸೀಮ ಎಂಬುದು ಸಾಬೀತಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಆರೋಪಿಸಿದ್ದಾರೆ.
ಈ ಸಂಬಂಧ ಟ್ವೀಟ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಅವರು, ನೈತಿಕ ಮಾರ್ಗದಲ್ಲಿ ಎಂದೂ ಅಧಿಕಾರ ಹಿಡಿಯದ ಕಾಂಗ್ರೆಸ್ಸಿಗರು ದುರ್ಮಾರ್ಗ, ಅನೀತಿ, ಅಪಪ್ರಚಾರ ಹಾಗೂ ಸಮಾಜ ಒಡೆಯುವ ಕೆಲಸಗಳಿಂದಲೇ ಅಧಿಕಾರ ಕಬಳಿಸಿದ್ದಾರೆ ಎಂಬುದಕ್ಕೆ ಪ್ರಸ್ತುತ ಬಹಿರಂಗವಾಗಿರುವ ಲೋಕಾಯುಕ್ತ ವರದಿ ಸಾಕ್ಷಿ ಹೇಳುತ್ತಿದೆ ಎಂದು ಗುಡುಗಿದ್ದಾರೆ.
ಕರ್ನಾಟಕದ ಜನತೆಯನ್ನು ವಂಚಿಸಿ, ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಕೂಡಲೇ ಅಧಿಕಾರದಿಂದ ಕೆಳಗಿಳಿದು ಕರ್ನಾಟಕದ ಜನತೆಯ ಕ್ಷಮೆ ಕೋರಲಿ ಎಂದು ಒತ್ತಾಯಿಸುತ್ತೇನೆ ಎಂದಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವಾಗಲೇ ಲೋಕಾಯುಕ್ತ ತನಿಖಾ ವರದಿ ಬಹಿರಂಗವಾಗಿರುವ ಹಿನ್ನೆಲೆಯಲ್ಲಿ ಈ ಕುರಿತು ಕಾಂಗ್ರೆಸ್ಸಿಗರು ಇನ್ನೇನೂ ಸಮಜಾಯಿಸಿ ನೀಡುವುದಕ್ಕಾಗಲಿ, ವಿತಂಡವಾದ ಮಾಡುವುದಕ್ಕಾಗಲಿ ಅವಕಾಶವೇ ಇಲ್ಲ ಎಂದು ಹೇಳಿದ್ದಾರೆ.
ಸದ್ಯ ಬಾಕಿ ಬಿಲ್ ಪಾವತಿಯಾಗದೇ ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವ ಗುತ್ತಿಗೆದಾರರು ರಾಜ್ಯದಲ್ಲಿರುವುದು 40% ಅಲ್ಲ 80% ಕಾಂಗ್ರೆಸ್ ಸರ್ಕಾರ ಎಂಬ ಅಸಲಿ ಸತ್ಯವನ್ನು ಬಹಿರಂಗ ಪಡಿಸುತ್ತಿದ್ದಾರೆ. ಒಂದರ ಮೇಲೊಂದು ಹಗರಣಗಳ ತನಿಖೆಯ ಕಾನೂನಿನ ಉರುಳು ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಸರ್ಕಾರವನ್ನು ಸುತ್ತಿಕೊಳ್ಳುತ್ತಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಶಾಸಕರು ಮಾರಾಟವಾಗುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳೇ ಅಧಿಕೃತ ಹೇಳಿಕೆ ನೀಡಿ ಕರ್ನಾಟಕದ ಗೌರವವನ್ನು ಹರಾಜು ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಜನಪರ ಹಾಗೂ ಅಭಿವೃದ್ಧಿಪರ ಆಡಳಿತ ನೀಡುತ್ತಿದ್ದ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಅಪಪ್ರಚಾರ ನಡೆಸಿದವರಿಗೆ ಜನರೇ ತಕ್ಕ ಶಾಸ್ತಿ ಮಾಡಲಿದ್ದಾರೆ. ಆದರೆ ಇದೀಗ ತಮ್ಮ ಕರಾಳತೆಯ ಭ್ರಷ್ಟ ಮುಖವನ್ನು ಮುಚ್ಚಿಕೊಳ್ಳಲು ಕೋವಿಡ್ ಸಂದರ್ಭದಲ್ಲಿ ಅವ್ಯವಹಾರ ನಡೆದಿದೆ ಎಂಬ ಮಧ್ಯಂತರ ವರದಿಯನ್ನು ತರಾತುರಿಯಲ್ಲಿ ತರಿಸಿಕೊಂಡು ಎಸ್ ಐ ಟಿ ರಚಿಸಲು ಹೊರಟಿದ್ದೀರಿ. ಈ ತನಿಖೆಯಿಂದಲೂ ನಿಮಗೆ ಮುಖಭಂಗವೇ ಕಟ್ಟಿಟ್ಟ ಬುತ್ತಿಯಾಗಲಿದೆ, ಕಾಂಗ್ರೆಸ್ ಫೇಲ್ಸ್ ಕರ್ನಾಟಕ ಎಂದು ಕಿಡಿಕಾರಿದ್ದಾರೆ.