SUDDIKSHANA KANNADA NEWS/ DAVANAGERE/ DATE:07-03-2025
ಬೆಂಗಳೂರು: ʻಗೃಹಲಕ್ಷ್ಮಿʼ ಯೋಜನೆಯ ಯಜಮಾನಿಯರನ್ನು ಸ್ವಸಹಾಯ ಗುಂಪುಗಳ ಸದಸ್ಯರುಗಳನ್ನಾಗಿಸಿ ರಾಜ್ಯಮಟ್ಟದ ʻಅಕ್ಕ ಕೋ-ಆಪರೇಟಿವ್ ಸೊಸೈಟಿʼ ವ್ಯಾಪ್ತಿಗೆ ತರಲಾಗುವುದು. ರಾಷ್ಟ್ರೀಯ ಜೀವನೋಪಾಯ ಅಭಿಯಾನದಡಿ ಮಹಿಳಾ ಸ್ವ-ಸಹಾಯ ಸಂಘಗಳಿಂದ ಆಯ್ದ 50 ಸ್ಥಳಗಳಲ್ಲಿ ಶಿಶು ಪಾಲನೆಗಾಗಿ ʻವಾತ್ಸಲ್ಯ ಕೇಂದ್ರʼಗಳನ್ನು ಸ್ಥಾಪಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ತಜ್ಞ ಚಿಕಿತ್ಸೆ ಪಡೆಯಲು ಸರ್ಕಾರಿ ಆಸ್ಪತ್ರೆಗಳಿಗೆ ಆಗಮಿಸುತ್ತಿರುವ ಬಡ ರೋಗಿಗಳು ಹಾಗೂ ಅವರ ಆರೈಕದಾರರಿಗಾಗಿ ವಿಶ್ರಾಂತಿ ಗೃಹಗಳನ್ನು ಸ್ಥಾಪಿಸಲಾಗುವುದು.
ಪಿ.ಎಮ್. ಸ್ವನಿಧಿ ಯೋಜನೆಯಡಿ ಸಾಲದ ಗರಿಷ್ಠ ಮಿತಿಯನ್ನು ತಲುಪಿರುವ ಬೀದಿಬದಿ ವ್ಯಾಪಾರಿಗಳು, ತಮ್ಮ ವ್ಯಾಪಾರ ವಹಿವಾಟನ್ನು ವಿಸ್ತರಿಸಲು ಒಂದು ಲಕ್ಷದವರೆಗಿನ ಸಾಲ ಪಡೆದಲ್ಲಿ ಶೇ.8ರಷ್ಟು ಬಡ್ಡಿ ಸಹಾಯಧನವನ್ನು ಸರ್ಕಾರದಿಂದ ನೀಡಲಾಗುವುದು. ಮಹಿಳಾ ಸಬಲೀಕರಣಕ್ಕಾಗಿ ಗ್ರಾಮ ಪಂಚಾಯತಿ ಸ್ವ- ಸಹಾಯ ಸಂಘಗಳ ಸಹಭಾಗಿತ್ವದಲ್ಲಿ ಈ ಕೆಳಕಂಡ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲಾಗುವುದು.
ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಕಛೇರಿ ಆವರಣಗಳಲ್ಲಿ ʻಅಕ್ಕ ಕೆಫೆ ಮತ್ತು ಕ್ಯಾಂಟೀನ್ʼ ಸ್ಥಾಪಿಸಲಾಗುವುದು. ಪ್ರತಿ ತಾಲ್ಲೂಕಿನಲ್ಲಿ ಒಂದು ʻಸಮಗ್ರ ಕೃಷಿ ಕ್ಲಸ್ಟರ್ʼ ಅಭಿವೃದ್ಧಿಪಡಿಸಲಾಗುವುದು.
ಶಾಲೆ, ಅಂಗನವಾಡಿ ಮತ್ತು ವಸತಿ ನಿಲಯಗಳಿಗೆ ಮೊಟ್ಟೆ ಮತ್ತು ತರಕಾರಿ ಪೂರೈಸಲು ಸ್ವ-ಸಹಾಯ ಸಂಘಗಳ ʻಕಿರು ಉದ್ಯಮʼಗಳನ್ನು ಪ್ರೋತ್ಸಾಹಿಸಲಾಗುವುದು. ಸ್ವ-ಸಹಾಯ ಸಂಘಗಳ ಮೂಲಕ ಪ್ರತಿ ಜಿಲ್ಲೆಯಲ್ಲಿ ಒಂದು ʻಸಮುದಾಯ ಪ್ರವಾಸಿ ಯೋಜನೆʼಯನ್ನು ಅನುಷ್ಠಾನ ಮಾಡಲಾಗುವುದು.
ಬೆಂಗಳೂರು, ಕಲಬುರಗಿ, ಮಂಗಳೂರು, ಮತ್ತು ಬೆಳಗಾವಿ ಕೆಜಿಟಿಟಿಐ ಕೇಂದ್ರಗಳಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ʻIndustry-4.0ʼ ಗೆ ಅನುಗುಣವಾಗಿ ಹೊಸ ತಂತ್ರಜ್ಞಾನ ಆಧಾರಿತ ಪಠ್ಯಕ್ರಮದೊಂದಿಗೆ ಹೊಸ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು. ಉದ್ಯಮ ಸಂಬಂಧಿತ ಕೌಶಲ್ಯಗಳನ್ನು ಹೆಚ್ಚಿಸಿ ಸ್ಥಳೀಯ ಉದ್ಯೋಗ ಮತ್ತು ಉದ್ಯಮಶೀಲತೆಗೆ ಒತ್ತು ಕೊಡಲು KKRDB ವತಿಯಿಂದ ಕಲಬುರಗಿ ಜಿಲ್ಲೆ ಸೇಡಂನಲ್ಲಿರುವ ಸರ್ಕಾರಿ ITI ಯನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ 25 ಕೋಟಿ ರೂ. ವೆಚ್ಚದಲ್ಲಿ ಉನ್ನತೀಕರಿಸಲಾಗುವುದು.
ಕಳೆದ ಸಾಲಿನ ಆಯವ್ಯಯದಲ್ಲಿ ಘೋಷಿಸಲಾದ ಕಲಬುರಗಿ ಜಿ.ಟಿ.ಟಿ.ಸಿ ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರಕ್ಕೆ 60 ಕೋಟಿ ರೂ. ಹಾಗೂ ಕೊಪ್ಪಳದ ತಳಕಲ್ನಲ್ಲಿರುವ ಕೇಂದ್ರಕ್ಕೆ 90 ಕೋಟಿ ರೂ. ಅನ್ನು KKRDB ವತಿಯಿಂದ ಒದಗಿಸಲಾಗಿತ್ತು.
ಈ ಎರಡು ಕೇಂದ್ರಗಳಿಗೆ ಉಳಿದ ಅನುದಾನವನ್ನು ಒದಗಿಸುವುದರೊಂದಿಗೆ ಮೈಸೂರಿನ ವರುಣಾದಲ್ಲಿನ ಜಿಟಿಟಿಸಿ ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರಕ್ಕೆ ನಬಾರ್ಡ್ ಸಹಯೋಗದೊಂದಿಗೆ 60 ಕೋಟಿ ರೂ. ಅನುದಾನ ಒದಗಿಸಿ ಪ್ರಸಕ್ತ ವರ್ಷದಲ್ಲಿ ಸದರಿ ಕೇಂದ್ರಗಳನ್ನು ಕಾರ್ಯಾರಂಭ ಮಾಡಲಾಗುವುದು.
ಮಧುಗಿರಿ ಮತ್ತು ಇಂಡಿಯಲ್ಲಿ ನಬಾರ್ಡ್ ಸಹಯೋಗದೊಂದಿಗೆ ಹಾಗೂ ಕಂಪ್ಲಿ, ರಾಯಚೂರು ಗ್ರಾಮೀಣ ಮತ್ತು ಸಿಂಧನೂರಿನಲ್ಲಿ KKRDB Macro ಅನುದಾನದಡಿಯಲ್ಲಿ ನೂತನ GTTC ಗಳನ್ನು ಸ್ಥಾಪಿಸಲು ಕ್ರಮವಹಿಸಲಾಗುವುದು
GIZ ಸಹಯೋಗದೊಂದಿಗೆ ಜಿಟಿಟಿಸಿ ಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಜರ್ಮನಿ ಹಾಗೂ ಇತರ ಯುರೋಪಿಯನ್ ದೇಶಗಳಲ್ಲಿ ಲಭ್ಯವಿರುವ ಉದ್ಯೋಗಾವಕಾಶಗಳ ಪೂರ್ಣ ಉಪಯೋಗ ಪಡೆಯಲು ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.
ಇಪ್ಪತ್ತು ಸಾವಿರ ವಿದ್ಯಾರ್ಥಿಗಳಿಗೆ ಭಾಷಾ ತರಬೇತಿ ನೀಡಲು 20 ಕೋಟಿ ರೂ. ವೆಚ್ಚದಲ್ಲಿ 36 ಜರ್ಮನ್ ಭಾಷಾ ಪ್ರಯೋಗಾಲಯಗಳನ್ನು ನಿರ್ಮಿಸಲಾಗುವುದು.
ಜರ್ಮನ್ ಛೇಂಬರ್ ಆಫ್ ಕಾಮರ್ಸ್ ಸಹಯೋಗದಲ್ಲಿ 5,000 ವಿದ್ಯಾರ್ಥಿಗಳಿಗೆ ಜಾಗತಿಕ ಉದ್ಯೋಗಾವಕಾಶವನ್ನು ಹೆಚ್ಚಿಸಲು ಡಿಪ್ಲೋಮ ಕೋರ್ಸ್ನ ಭಾಗವಾಗಿ ಒಂದು ವರ್ಷದ ತರಬೇತಿಯನ್ನು
ಜರ್ಮನಿಯಲ್ಲಿ ಪಡೆಯಲು ಅವಕಾಶ ಕಲ್ಪಿಸಲಾಗುವುದು.
ಜಿಟಿಟಿಸಿ, ಜರ್ಮನ್ ವಿಶ್ವವಿದ್ಯಾಲಯಗಳು ಮತ್ತು ಉದ್ಯಮಗಳ ಸಹಯೋಗದೊಂದಿಗೆ ಜರ್ಮನಿಯ ಡ್ಯುಯಲ್ ಎಜುಕೇಷನ್ ಮಾದರಿಯಲ್ಲಿ ಬಿ.ಇ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗುವುದು.