SUDDIKSHANA KANNADA NEWS/ DAVANAGERE/ DATE:07-03-2025
ದಾವಣಗೆರೆ: ರಾಜ್ಯ ಸರ್ಕಾರದ ಈ ಬಾರಿಯ ಬಜೆಟ್‌ನಲ್ಲಿ ದಾವಣಗೆರೆ ಸೇರಿದಂತೆ ಮಧ್ಯ ಕರ್ನಾಟಕದ ಪಾಲಿಗೆ ನಿರಾಶಾದಾಯಕವಾಗಿದೆ. ಪ್ರತಿ ವರ್ಷ ಸಾವಿರಾರು ಯುವಕ, ಯುವತಿಯರು ಇಂಜಿನಿಯರಿಂಗ್, ಎಂಬಿಎ ಹಾಗೂ ಎಂಸಿಎ ಮುಂತಾದ ಪದವಿಯನ್ನು ಪಡೆದು ಕೆಲಸಕ್ಕಾಗಿ ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ ಹಾಗೂ ಪರ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಅವರಿಗೆ ಉದ್ಯೋಗ ಕಲ್ಪಿಸುವ ಬಗ್ಗೆ ಬಜೆಟ್ ನಲ್ಲಿ ಹೇಳಿಲ್ಲ ಎಂದು ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಕೆ. ಜಿ. ಯಲ್ಲಪ್ಪ ಹೇಳಿದ್ದಾರೆ.
ಉದ್ಯೋಗ ಸೃಷ್ಟಿಗಾಗಿ ರಾಜ್ಯ ಸರ್ಕಾರವು ದಾವಣಗೆರೆಯಲ್ಲಿ ಐಟಿಬಿಟಿಯಂತಹ ಹಾಗೂ ಸಾವಿರಾರು ಜನರಿಗೆ ಉದ್ಯೋಗ ನೀಡಬಲ್ಲ ಯಾವುದೇ ಕೈಗಾರಿಕೆಗಳನ್ನು ನೀಡದೆ ಅನ್ಯಾಯ ಮಾಡಿದೆ. ರೈತರ ಬಹುದಿನಗಳ ಬೇಡಿಕೆಯಾದ ಮೆಕ್ಕೆ ಜೋಳ
ಸಂಸ್ಕರಣ ಕೇಂದ್ರವನ್ನು ಸಹ ಮಂಜೂರು ಮಾಡಿಲ್ಲ. ದಾವಣಗೆರೆಗೆ ಮುಖ್ಯವಾಗಿ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಮಂಜೂರು ಮಾಡಬೇಕಾಗಿತ್ತು ಎಂದು ಹೇಳಿದ್ದಾರೆ.
ಕಾರ್ಮಿಕ ವರ್ಗಕ್ಕೆ ಸಮಾಧಾನ ತರದ ಬಜೆಟ್: ಕೆ.ರಾಘವೇಂದ್ರ ನಾಯರಿ
ಕಾರ್ಮಿಕ ವರ್ಗದ ಹಿತವನ್ನು ಕಡೆಗಣಿಸಲಾದ ಬಜೆಟ್ ಇದು. ಅಂಗನವಾಡಿ, ಬಿಸಿಯೂಟ ಮತ್ತು ಆಶಾ ಕಾರ್ಯಕರ್ತೆಯರ ಹೋರಾಟ, ಬೇಡಿಕೆಗೆ ಮನ್ನಣೆ ನೀಡದೇ ಗೌರವಧನದಲ್ಲಿ ಕೇವಲ ಒಂದು ಸಾವಿರ ರೂಪಾಯಿಗಳ ಏರಿಕೆ ಮಾಡಲಾಗಿದೆ. ಇದು ಕಾರ್ಮಿಕವರ್ಗದ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ನಮ್ಮ ಹೋರಾಟವನ್ನು ಎಐಟಿಯುಸಿ ಸಂಘಟನೆಯ ನೇತೃತ್ವದಲ್ಲಿ ಮುಂದುವರೆಸುತ್ತೇವೆ ಎಂದು ಕಾರ್ಮಿಕ ಮುಖಂಡ ಕೆ.ರಾಘವೇಂದ್ರ ನಾಯರಿ ಹೇಳಿದ್ದಾರೆ.
ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನವನ್ನು ನಡೆಸಬೇಕೆಂಬ ಒತ್ತಾಯಕ್ಕೂ ಸರಕಾರವು ಮನ್ನಣೆ ನೀಡಿಲ್ಲ. ಈ ಬಗ್ಗೆಯೂ ಹೋರಾಟ ಮುಂದುವರೆಯಲಿದೆ. ಇನ್ನುಳಿದಂತೆ ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸಲು ವಸತಿ ಶಾಲೆಗಳ ಆರಂಭ, ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯಡಿ 5 ಲಕ್ಷ ರೂಪಾಯಿಗಳ ಮಿತಿ ಪೂರ್ಣಗೊಂಡಲ್ಲಿ ಹೃದ್ರೋಗ, ಕ್ಯಾನ್ಸರ್ ಚಿಕಿತ್ಸೆಗೆ ಹೆಚ್ಚುವರಿಯಾಗಿ 5 ಲಕ್ಷ ರೂಪಾಯಿ ನೀಡುವ ಯೋಜನೆ, 2500 ಪತ್ರಕರ್ತರಿಗೆ ಮಾಧ್ಯಮ ಸಂಜೀವಿನಿ ಯೋಜನೆ ಕಲ್ಪಿಸಿರುವುದು ಸ್ವಾಗತಾರ್ಹವಾಗಿದೆ ಎಂದು ತಿಳಿಸಿದ್ದಾರೆ.