SUDDIKSHANA KANNADA NEWS/ DAVANAGERE/ DATE:07-03-2025
ದಾವಣಗೆರೆ: ಫೆಬ್ರವರಿ ಮತ್ತು ಮಾರ್ಚ್-2025ರ ಮಾಹೆಗೆ ರಾಜ್ಯದ ಅಂತ್ಯೋದಯ ಮತ್ತು ಆದತ್ಯಾ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆಯಡಿ ನೇರ ನಗದು ವರ್ಗಾವಣೆ ಬದಲಾಗಿ ಹೆಚ್ಚುವರಿ 5 ಕೆ.ಜಿ ಓ.ಎಂ.ಎಸ್. ಎಸ್.ಡಿ ಅಕ್ಕಿ ಹಂಚಿಕೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ತಿಳಿಸಿದ್ದಾರೆ.
ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ವಯ ವಿತರಿಸಲಾಗುವ 5 ಕೆ.ಜಿ ಆಹಾರಧಾನ್ಯದೊಂದಿಗೆ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿಯಾಗಿ 5 ಕೆ.ಜಿ ಆಹಾರಧಾನ್ಯದ ಬದಲಾಗಿ ಪ್ರತಿ ಕೆ.ಜಿ.ಗೆ ರೂ.34/-ರಂತೆ ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ರೂ.170/-ರಂತೆ ಹಣವನ್ನು ವರ್ಗಾಯಿಸಲಾಗುತ್ತಿತ್ತು. ಆದರೆ ನಗದು ಬದಲಾಗಿ 2025 ರ ಫೆಬ್ರವರಿ ಮಾಹೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆ.ಜಿ ಅಕ್ಕಿಯನ್ನು ಹಂಚಿಕೆ ಮಾಡಲಾಗಿರುತ್ತದೆ.
ಹೆಚ್ಚುವರಿ ಹಂಚಿಕೆಯನ್ನು ಏಕ-ಸದಸ್ಯ, ದ್ವಿ-ಸದಸ್ಯ ಮತ್ತು ತ್ರಿ-ಸದಸ್ಯ ಎಎವೈ ಪಡಿತರ ಚೀಟಿಗಳನ್ನು ಹೊರತುಪಡಿಸಿ ನಾಲ್ಕು ಮತ್ತು ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರುಳ್ಳ ಎಎವೈ ಪಡಿತರ ಚೀಟಿಯ ಪ್ರತಿ ಫಲನುಭವಿಗೆ ಮತ್ತು ಆದ್ಯತಾ ಕುಟುಂಬದ ಪಿಹೆಚ್ ಹೆಚ್ ಪಡಿತರ ಚೀಟಿಯ ಪ್ರತಿ ಫಲಾನುಭವಿಗೆ ಮಾರ್ಚ್-2025ರ ಮಾಹೆಯಲ್ಲಿ ಎನ್.ಎಫ್.ಎಸ್.ಎ ಆಡಿ ಎಂದಿನಂತೆ ಹಂಚಿಕೆ ಮಾಡಿರುವ ಅಕ್ಕಿ ಸೇರಿದಂತೆ ಪ್ರತಿ ಸದಸ್ಯರಿಗೆ ಒಟ್ಟು 15 ಕೆ.ಜಿ ಅಕ್ಕಿಯನ್ನು ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗಳಿಂದ ಬಯೋಮೆಟ್ರಿಕ್ ನೀಡಿ ಪಡೆಯಬೇಕು.
ಒಂದು ವೇಳೆ ನ್ಯಾಯಬೆಲೆ ಅಂಗಡಿಯವರು ಕಡಿಮೆ ಪ್ರಮಾಣ ವಿತರಿಸಿದಲ್ಲಿ ಟೋಲ್‍ಫ್ರೀ ಸಂಖ್ಯೆ 1967 ಅಥವಾ ಸಂಬಂಧಿಸಿದ ಆಹಾರ ನಿರೀಕ್ಷಕರಿಗೆ ದೂರು ಸಲ್ಲಿಸಬಹುದೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.