SUDDIKSHANA KANNADA NEWS/ DAVANAGERE/ DATE:20-10-2024
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ಕಳೆದುಕೊಳ್ಳುವ ಭಯದಿಂದ ಜಾತಿ ಗಣತಿ ಬಿಡುಗಡೆ ಮಾಡುವುದಾಗಿ ಹೇಳುತ್ತಿದ್ದಾರೆ. ಮೊದಲು ಅದನ್ನು ಬಹಿರಂಗ ಪಡಿಸಲಿ, ಸಾರ್ವಜನಿಕ ಚರ್ಚೆಯಾಗಲಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.
ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿ ಕುರಿತು ಅಖಿಲ ಭಾರತ ವೀರಶೈವ ಮಹಾಸಭೆ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ತಮ್ಮನ್ನು ಭೇಟಿ ಮಾಡಿರುವ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಾತಿ ಗಣತಿ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ. ಇದು ಜಾತಿ ಗಣತಿಯಲ್ಲ. ಸಾಮಾಜಿಕ ಆರ್ಥಿಕ ಸಮೀಕ್ಷೆ, ರಾಜ್ಯ ಸರ್ಕಾರಕ್ಕೆ ಜಾತಿ ಗಣತಿ ಮಾಡುವ ಅಧಿಕಾರ ಇಲ್ಲ. ಕೇಂದ್ರ ಸರ್ಕಾರಕ್ಕೆ ಮಾತ್ರ ಜಾತಿ ಗಣತಿ ಮಾಡುವ ಅಧಿಕಾರವಿದೆ. ಬಿಹಾರ ಸರ್ಕಾರದ ಜಾತಿ ಗಣತಿಗೂ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಇವರು ಯಾವುದೋ ಸಮೀಕ್ಷೆ ಮಾಡಿ ಅದಕ್ಕೆ ಜಾತಿ ಗಣತಿಯ ಲೇಪನ ಮಾಡುತ್ತಿದ್ದಾರೆ ಎಂದು ಹೇಳಿದರು.
ಇನ್ನು ಈ ವರದಿ ವೈಜ್ಞಾನಿಕವಾಗಿಯೂ ಇಲ್ಲ, ಅಂಕಿ ಅಂಶ ಸಮರ್ಪಕವಾಗಿಲ್ಲ. ಹಲವು ಸಮುದಾಯಗಳಿಂದ ಆಕ್ಷೇಪಣೆ ಬಂದಿದೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಕಾಂತರಾಜ್ ಅವರು ಸಿದ್ದಪಡಿಸಿದ್ದ ವರದಿ ಸಮರ್ಪಕವಾಗಿಲ್ಲ ಎಂದು ಅಂದಿನ ಆಯೋಗದ ಕಾರ್ಯದರ್ಶಿ ಹಾಗೂ ಸದಸ್ಯರು ಸಹಿ ಹಾಕಿರಲಿಲ್ಲ. ನಂತರ ಬಂದ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗಡೆ ಅವರು, ಯಾವುದೇ ಸಮೀಕ್ಷೆ ನಡೆಸದೇ ಹಿಂದಿನ ಆಯೋಗದ ಅಧ್ಯಕ್ಷರು ಸಿದ್ದಪಡಿಸಿದ್ದ ವರದಿಯನ್ನೇ ಪರಿಷ್ಕರಿಸಿ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ವರದಿಯನ್ನು ಒಕ್ಕಲಿಗ ಸಮುದಾಯದವರು ವಿರೋಧಿಸಿದ್ದಾರೆ. ಸ್ವತ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಇದನ್ನು ವಿರೋಧಿಸಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭೆ ಕೂಡ ವಿರೋಧಿಸಿದೆ. ಎಲ್ಲ ಸಮುದಾಯಗಳ ಅನುಮಾನ ದೂರ ಮಾಡುವ ಕೆಲಸ ಸಿಎಂ ಸಿದ್ದರಾಮಯ್ಯ ಮಾಡುತ್ತಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚಿಸಲಿ. ಇಷ್ಟೆಲ್ಲ ವಿರೋಧ ಇದ್ದರೂ ಜಾರಿ ಮಾಡುತ್ತೇವೆ ಅಂತಿದ್ದಾರೆ. ಮೊದಲು ವರದಿ ಬಹಿರಂಗಪಡಿಸಲಿ, ಸಾರ್ವಜನಿಕವಾಗಿ ಚರ್ಚೆ ಆಗಲಿ ಎಂದು ಹೇಳಿದರು.
ಸಿದ್ದರಾಮಯ್ಯನವರು ವರದಿಯಲ್ಲಿ ಏನಿದೆ ಅಂತ ನೋಡಿಲ್ಲ ಅಂತಿದ್ದಾರೆ, ಆದರೆ ವರದಿ ರೆಡಿ ಮಾಡಿಸಿದವರೇ ಸಿದ್ದರಾಮಯ್ಯ. ದಿವಂಗತ ವಿ.ಪಿ. ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಅಧಿಕಾರ ಹೋಗುವ ಸಂದರ್ಭದಲ್ಲಿ
ಮಂಡಲ್ ವರದಿ ಜಾರಿ ಮಾಡಿದ್ದರು. ಅದೇ ರೀತಿ ಇವರು ಈಗ ಜಾತಿ ಗಣತಿ ಜಾರಿ ಮಾಡುವುದಾಗಿ ಹೇಳುತ್ತಿದ್ದಾರೆ ಎಂದು ಹೇಳಿದರು.