SUDDIKSHANA KANNADA NEWS/ DAVANAGERE/ DATE:21-03-2024
ದಾವಣಗೆರೆ: ದಾವಣಗೆರೆ ಬಿಜೆಪಿಯಲ್ಲಿನ ಸಮಸ್ಯೆ ಬಗೆಹರಿಯುವ ಲಕ್ಷಣ ಗೋಚರಿಸುತ್ತಿಲ್ಲ. ಲೋಕಸಭಾ ಸದಸ್ಯ ಡಾ. ಜಿ. ಎಂ. ಸಿದ್ದೇಶ್ವರರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಲೋಕಸಭೆ ಟಿಕೆಟ್ ಘೋಷಿಸಿದ ಬಳಿಕ ಮಾಜಿ ಸಚಿವ ಎಸ್. ಎ. ರವೀಂದ್ರನಾಥ್ ಅವರ ನೇತೃತ್ವದಲ್ಲಿ ಮತ್ತೆ ಸಭೆ ಸೇರಿ ಬಂಡಾಯ ಅಭ್ಯರ್ಥಿ ನಿಲ್ಲಿಸಲು ತೀರ್ಮಾನಿಸಲಾಗಿದೆ.
ಬಿಜೆಪಿ ಮುಖಂಡ ಲೋಕಿಕೆರೆ ನಾಗರಾಜ್ ಮನೆಯಲ್ಲಿ ರವೀಂದ್ರನಾಥ್ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿದ್ದ ಮಾಜಿ ಸಚಿವರು, ಮಾಜಿ ಶಾಸಕರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿಗಳು, ಬಿಜೆಪಿ
ಮುಖಂಡರು ಸೇರಿ ಚರ್ಚಿಸಿ ಈ ನಿರ್ಧಾರಕ್ಕೆ ಬರಲಾಗಿದೆ. ಮಾತ್ರವಲ್ಲ, ಅಭ್ಯರ್ಥಿ ಬದಲಾಗಲೇಬೇಕು ಎಂಬ ನಿಲುವಿನಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಸ್ಪಷ್ಟವಾಗಿ ಘೋಷಿಸಿದ್ದಾರೆ.
ಎಸ್. ಎ. ರವೀಂದ್ರನಾಥ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಶಿವಯೋಗಿಸ್ವಾಮಿ, ಮಾಜಿ ಸಚಿವರಾದ ಎಂ. ಪಿ. ರೇಣುಕಾಚಾರ್ಯ, ಕರುಣಾಕರ ರೆಡ್ಡಿ, ಮಾಜಿ ಶಾಸಕರಾದ ಗುರುಸಿದ್ದನಗೌಡರು, ಬಸವರಾಜ್ ನಾಯ್ಕ್, ಯುವ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್, ಅಜಯ್ ಕುಮಾರ್, ದೂಡಾ ಮಾಜಿ ಅಧ್ಯಕ್ಷ ಕೆ. ಎಂ. ಸುರೇಶ್, ಆರೈಕೆ ಆಸ್ಪತ್ರೆ ಮುಖ್ಯಸ್ಥ ಡಾ. ರವಿಕುಮಾರ್, ಕಲ್ಲೇಶ್ ಸೇರಿದಂತೆ ಹಲವರು ಸಭೆ ಸೇರಿ ಜಿ. ಎಂ. ಸಿದ್ದೇಶ್ವರರ ವಿರುದ್ಧ ಗುಡುಗಿದರು.
ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ:
ಸಭೆ ಬಳಿಕ ಮಾತನಾಡಿದ ರೇಣುಕಾಚಾರ್ಯ, ಮಾಜಿ ಸಚಿವರು, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕರು, ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಸೋಲುಂಡ ಪರಾಜಿತ ಮೂವರು ಅಭ್ಯರ್ಥಿಗಳು, ಕಲ್ಲೇಶಪ್ಪ, ಸುರೇಶ್ ಸೇರಿ ಒಟ್ಟಾಗಿ ತೀರ್ಮಾನ ಮಾಡಿದ್ದೇವೆ. ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬದಲಾವಣೆ ಮಾಡಬೇಕು ಎಂಬ ನಿಲುವಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ರಾಜ್ಯ ನಾಯಕರು, ರಾಷ್ಟ್ರ ನಾಯಕರನ್ನು ಭೇಟಿ ಮಾಡಿ ಹಲವು ಬಾರಿ ಮನವಿ ಮಾಡಿದ್ದೇವೆ. ನಮ್ಮ ಅಭಿಪ್ರಾಯ ಅಲ್ಲ, ಜಿಲ್ಲೆಯ ಮತದಾರರು, ಕಾರ್ಯಕರ್ತರ ಅಭಿಪ್ರಾಯದಂತೆ ತಿಳಿಸಿದ್ದೇವೆ. ಆದ್ರೆ, ಮಾತಿಗೆ ಮನ್ನಣೆ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಇನ್ನು ಹಲವು ದಿನಗಳಿವೆ. ಅಭ್ಯರ್ಥಿ ಬದಲಾವಣೆ ಮಾಡುತ್ತಾರೆ ಎಂಬ ವಿಶ್ವಾಸ ಇದೆ. ಹತ್ತಾರು ಬಾರಿ ಭೇಟಿ ಮಾಡಿ ಮನವಿ ಮಾಡಿದ್ದೇವೆ. ಆದರೂ ಸಿದ್ದೇಶ್ವರರ ಕುಟುಂಬಕ್ಕೆ ಟಿಕೆಟ್ ನೀಡಿರುವುದನ್ನು ಒಪ್ಪಲು ಸಾಧ್ಯವಿಲ್ಲ. ಹೋಳಿ ಹುಣ್ಣಿಮೆ ಹಬ್ಬದ ನಂತರ ಎಲ್ಲಾ ಮಠಾಧೀಶರ ಭೇಟಿ ಮಾಡಿ ಆಶೀರ್ವಾದ ಪಡೆಯುತ್ತೇವೆ. ಹರಪನಹಳ್ಳಿಯೂ ಸೇರಿದಂತೆ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಸಭೆ ನಡೆಸುತ್ತೇವೆ. ನೊಂದ ಕಾರ್ಯಕರ್ತರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ. ಆ ಬಳಿಕ ಹನ್ನೊಂದು ಜನರ ಪೈಕಿ ಒಬ್ಬರು ಅಚ್ಚರಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ತಿಳಿಸಿದರು.
ನಡವಳಿಕೆ ವಿರುದ್ಧದ ನಡೆ ನಮ್ಮದು:
ಕೇವಲ ಲೋಕಸಭೆ ಚುನಾವಣೆ ಮಾತ್ರವಲ್ಲ, ಮುಂಬರುವ ದಿನಗಳಲ್ಲಿ ನಡೆಯುವ ಎಲ್ಲಾ ಚುನಾವಣೆಯಲ್ಲಿಯೂ ಬಿಜೆಪಿ ಗೆಲ್ಲಬೇಕು. ಮತ್ತೆ ಬಿಜೆಪಿ ಸಂಘಟಿತವಾಗಬೇಕು. ಬಲಿಷ್ಠವಾಗಬೇಕು. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ನಮ್ಮದು ಕುಟುಂಬ ವಿರುದ್ಧದ ರಾಜಕಾರಣ ಅಲ್ಲ, ನಡವಳಿಕೆ ಬದಲಾಗಬೇಕು, ದುರಹಂಕಾರಕ್ಕೆ ಬ್ರೇಕ್ ಬೀಳಬೇಕು. ಬಿಜೆಪಿ ಕಟ್ಟಿ ಬೆಳೆಸಿದವರು, ಸಂಘಟನೆ, ಹೋರಾಟ ಮಾಡಿದವರನ್ನು ಕಡೆಗಣಿಸಿದರೆ ಸುಮ್ಮನಿರಲು ಸಾಧ್ಯವಿಲ್ಲ. ದಾವಣಗೆರೆ ಮತದಾರರು ಆಶೀರ್ವಾದ ಮಾಡುತ್ತಾರೆ ಎಂಬ ಸಂಪೂರ್ಣ ವಿಶ್ವಾಸ ಇದೆ. ಲೋಕಸಭೆ ಅಭ್ಯರ್ಥಿ ಗೆಲ್ಲಿಸಿಕೊಂಡು ನರೇಂದ್ರ ಮೋದಿ ಕೈ ಬಲಪಡಿಸುತ್ತೇವೆ. ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ ಎಂಬಂತೆ ನಡೆಯುತ್ತೇವೆ ಎಂದು ಸವಾಲು ಹಾಕಿದರು.
ಪದೇ ಪದೇ ಸಭೆ ಸೇರಲ್ಲ:
ಇನ್ನು ಮುಂದೆ ಪದೇ ಪದೇ ಸಭೆ ನಡೆಸಲ್ಲ, ದಾವಣಗೆರೆಯಲ್ಲಿ ನಾವೆಲ್ಲರೂ ಸೇರೋದು ಸಭೆ ಮಾಡೋದು, ಚರ್ಚೆ ಮಾಡುವುದು ಮಾಡುವುದಿಲ್ಲ. ಮಠಾಧೀಶರ ಆಶೀರ್ವಾದ ಪಡೆದು ರವೀಂದ್ರನಾಥ್ ಅವರ ನೇತೃತ್ವದಲ್ಲಿ ಕ್ಷೇತ್ರವಾರು ಸಭೆ ನಡೆಸುತ್ತೇವೆ. ಹನ್ನೊಂದು ಮಂದಿಯೊಳಗೆ ಒಬ್ಬರು ಕಣಕ್ಕಿಳಿಯುತ್ತಾರೆ ಎಂದು ಹೇಳಿದರು.
ನಾವು ಪಕ್ಷ ವಿರೋಧಿಗಳಲ್ಲ:
ನಾವು ಪಕ್ಷ ವಿರೋಧಿಗಳಲ್ಲ, ಪಕ್ಷ ಉಳಿಯಬೇಕು, ಮತ್ತಷ್ಟು ಸಂಘಟಿತವಾಗಬೇಕು ಎಂಬ ಉದ್ದೇಶ ಹೊಂದಿರುವವರು. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆ. ಪಿ.ನಡ್ಡಾ, ಯಡಿಯೂರಪ್ಪ, ವಿಜಯೇಂದ್ರ ಸೇರಿದಂತೆ ಯಾರ ವಿರುದ್ಧ ಟೀಕೆ ಮಾಡಿಲ್ಲ. ಹಾಗೆಂದ ಮೇಲೆ ಹೇಗೆ ಪಕ್ಷ ವಿರೋಧಿ ಚಟುವಟಿಕೆ ಆಗುತ್ತದೆ ಎಂದು ರೇಣುಕಾಚಾರ್ಯ ಪ್ರಶ್ನಿಸಿದರು.
ನಾವು ಪಕ್ಷ ವಿರೋಧಿಗಳಲ್ಲ, ಪಕ್ಷ ದ್ರೋಹಿಗಳೂ ಅಲ್ಲ. ಎರಡು ತಿಂಗಳು ಮನೆ ಸೇರಲ್ಲ. ನಾವು ನಿಲ್ಲಿಸಿದ ಅಭ್ಯರ್ಥಿ ಗೆಲ್ಲಿಸುತ್ತೇವೆ. ನರೇಂದ್ರ ಮೋದಿ ಕೈ ಬಲಪಡಿಸುತ್ತೇವೆ. 28 ಕ್ಷೇತ್ರಗಳಲ್ಲಿ ಬಿಜೆಪಿ ಬರಬೇಕು ಎಂಬುದು ನಮ್ಮ ಅಪೇಕ್ಷೆ ಎಂದು ಹೇಳಿದರು.