SUDDIKSHANA KANNADA NEWS/ DAVANAGERE/ DATE:28-10-2023
ಬೆಂಗಳೂರು: ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಗಾದೆ ಕರ್ನಾಟಕದ ಈಗಿನ ಪರಿಸ್ಥಿತಿಗೆ ಅಕ್ಷರಶಃ ಸೂಕ್ತ. ಕಾಂಗ್ರೆಸ್ ಸರ್ಕಾರದ ಬಣಗಳ ಜಗಳದಲ್ಲಿ ಸಮೃದ್ಧಿಯ ಬೀಡಾಗಿದ್ದ ಕರ್ನಾಟಕ ಇಂದು ಅಕ್ಷರಶಃ ಬಡವಾಗಿದೆ. ತಮ್ಮ ಕುರ್ಚಿ ಉಳಿಸಿಕೊಳ್ಳುವ ಸರ್ಕಸ್ನಲ್ಲಿ ರಾಜ್ಯದ ಅಭಿವೃದ್ಧಿಯನ್ನು 10 ವರ್ಷ ಹಿಂದಕ್ಕೆ ತೆಗೆದುಕೊಂಡು ಹೋಗಿ ರಿವರ್ಸ್ ಗೇರ್ನಲ್ಲಿರಿಸಿರುವುದೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ. ಕೆ. ಶಿವಕುಮಾರ್ ಅವರ ಸಮ್ಮಿಶ್ರ ಕಾಂಗ್ರೆಸ್ ಸರ್ಕಾರದ ಸಾಧನೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಈ ಸಂಬಂಧ ಟ್ವೀಟ್ ಮೇಲೆ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ ಘಟಕವು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದೆ.
ರಾಜ್ಯದಲ್ಲಿ ಹಿಂದೆಂದೂ ಕಂಡು ಕೇಳರಿಯದಂತಹ ಬರ ಆವರಿಸಿದೆ. 103 ವರ್ಷಗಳ ಬಳಿಕ ಈ ಪರಿಯಾದ ಭೀಕರ ಬರ ಬಂದಿದೆ ಎಂದು ಸರ್ಕಾರ ಹೇಳುತ್ತಿದೆ. ಸಾಲದ್ದಕ್ಕೆ 240 ತಾಲೂಕುಗಳ ಪೈಕಿ 210 ತಾಲೂಕುಗಳು ಬರಪೀಡಿತ ಎಂದು
ಸರ್ಕಾರವೇ ಅಧಿಕೃತವಾಗಿ ಘೋಷಿಸಿದೆ. ಬರ ಬಂದಿರುವ ಕಾರಣ ನಾಡಹಬ್ಬ ದಸರಾವನ್ನು ಸರಳವಾಗಿ ಆಚರಿಸಿದ್ದಲ್ಲದೆ, ಹಂಪಿ ಉತ್ಸವ ಸೇರಿದಂತೆ ಅನೇಕ ಉತ್ಸವಗಳನ್ನು ರದ್ದುಗೊಳಿಸಿದೆ. ಆದರೆ ಇದೆಲ್ಲದರ ನಡುವೆ ಸಚಿವರುಗಳಿಗೆ
ಹೊಸ ದುಬಾರಿ, ಐಷಾರಾಮಿ ಕಾರುಗಳನ್ನು ಖರೀದಿಸುತ್ತದೆ. ಇದು ಕಾಂಗ್ರೆಸ್ ಸರ್ಕಾರ ಬರವನ್ನು ನಿರ್ವಹಿಸುವ ನೀತಿ ಎಂದು ಕಿಡಿಕಾರಿದೆ.
ಸಿಎಂ ಸಿದ್ದರಾಮಯ್ಯರವರ ಸಿಎಂ ಕುರ್ಚಿ ಅವಧಿ ಕೇವಲ 2.5 ವರ್ಷ ಎಂದು ಕಾಂಗ್ರೆಸ್ ಶಾಸಕರೊಬ್ಬರು ಹೇಳಿದ ತತ್ಕ್ಷಣವೇ ಕಾಂಗ್ರೆಸ್ನ ಹಿರಿಯ ನಾಯಕರೆನ್ನೆಲ್ಲಾ ಕರೆದು ಮೀಟಿಂಗ್ ಮಾಡುವ ಸಿಎಂ ಸಿದ್ದರಾಮಯ್ಯ ಅವರು ಇದುವರೆಗೂ ರಾಜ್ಯದ ಬರಕ್ಕೆ ಸಂಬಂಧಿಸಿದಂತೆ ಒಂದೇ ಒಂದು ಸಭೆ ನಡೆಸಿಲ್ಲ!! ಎಂದು ವ್ಯಂಗ್ಯವಾಡಿದೆ.
ನಿಗಮ ಮಂಡಳಿಗಳ ನೇಮಕಕ್ಕೆ ಯಾರಿಂದ ಎಷ್ಟು ಕಲೆಕ್ಷನ್ ಮಾಡಬೇಕೆಂದು ಮೀಟಿಂಗ್ ಮಾಡುವ ಸಿಎಂ ಸಾಹೇಬರಿಗೆ ಬರದ ಸ್ಥಿತಿಗತಿಯ ಬಗ್ಗೆ ಮೀಟಿಂಗ್ ಮಾಡಲು ಸಮಯವಿಲ್ಲ. ಇದು ಈ ರಾಜ್ಯದ ಆರೂವರೆ ಕೋಟಿ ಕನ್ನಡಿಗರ ಮೇಲೆ ಕಾಂಗ್ರೆಸ್ ಪಕ್ಷಕ್ಕಿರುವ ಅಸಲಿ ಕಾಳಜಿ ಎಂದು ವ್ಯಂಗ್ಯವಾಡಿದೆ.
ಇನ್ನು ಜಲಸಂಪನ್ಮೂಲದಂತಹ ಅತ್ಯಂತ ಜವಾಬ್ದಾರಿಯುಳ್ಳ ಖಾತೆ ಹೊಂದಿರುವ ಡಿಸಿಎಂ ಡಿ. ಕೆ. ಶಿವಕುಮಾರ್ ಅವರಂತೂ ಬರದ ವಿಷಯದಲ್ಲಿ ಅತ್ಯಂತ ಬೇಜವಾಬ್ದಾರಿ. ರಾಜ್ಯದಲ್ಲಿ ಬರವಿದ್ದರೂ ಪಂಚರಾಜ್ಯಗಳ ಚುನಾವಣೆಗೆ ಕರ್ನಾಟಕದಿಂದ ಕಲೆಕ್ಷನ್ ಮಾಡಿ ಸಂಪನ್ಮೂಲ ಒದಗಿಸುವುದು ಹಾಗೂ ಆ ರಾಜ್ಯಗಳಲ್ಲಿ ಪ್ರವಾಸ ನಡೆಸುವುದೇ ಇವರ ದೈನಂದಿನ ದಿನಚರಿ. ಇವರೊಂದು ರೀತಿ ರಾಜ್ಯಕ್ಕೆ ಮಾರಿ, ಪರರಾಜ್ಯಗಳಿಗೆ ಉಪಕಾರಿ ಎಂದು ಆರೋಪಿಸಿದೆ.
ಇನ್ನು ಲೋಕೋಪಯೋಗಿಯಂತಹ ಮಹತ್ವದ ಖಾತೆ ಹೊಂದಿರುವ ಸಚಿವ ಸತೀಶ್ ಜಾರಕಿಹೊಳಿಯವರದ್ದು ಮತ್ತೊಂದು ವರಸೆ. ರಾಜ್ಯವೇ ಬರದಿಂದ ತತ್ತರಿಸುತ್ತಿದ್ದರೆ ಇವರು ಮಾತ್ರ ಶಾಸಕರನ್ನು ಗುಡ್ಡೆ ಹಾಕಿಕೊಂಡು ದುಬೈಗೆ ಹೋಗಿ ಬರುತ್ತಾರಂತೆ, ಇವರ ದುಬೈ ಪ್ರವಾಸದ ಖರ್ಚಿನಲ್ಲಿ ಒಂದು ತಾಲೂಕಿನ ಬರ ಪೀಡಿತರಿಗೆ ನೆರವಾಗಬಹುದು. ಇನ್ನು ರಾಜ್ಯದ ಕಂದಾಯ ಸಚಿವ ಕೃಷ್ಣ ಭೈರೇಗೌಡರವರು ಆಟಕ್ಕುಂಟು ಲೆಕ್ಕಕ್ಕಿಲ್ಲ. ಬರದ ಬಗ್ಗೆ ಮಾತನಾಡಿ ಸ್ವಾಮಿ ಅಂದರೆ, ಅದನ್ನು ಬಿಟ್ಟು ಉಳಿದೆಲ್ಲಾ ವಿಷಯಗಳ ಬಗ್ಗೆ ಮಾತನಾಡುತ್ತಾರೆ, ಇನ್ನು ಸದಾ ಟ್ಟಿಟರ್ನಲ್ಲಿ ತಮಗೆ ಸಂಬಂಧಿಸದ ವಿಷಯದಲ್ಲಿ ಮೂಗು ತೂರಿಸಿ, ತೌಡು ಕುಟ್ಟುವ ಸಚಿವ ಪ್ರಿಯಾಂಕ್ ಖರ್ಗೆ ಬರದ ಬಗ್ಗೆ ನಾಲ್ಕಕ್ಷರವೂ ಮಾತನಾಡುವುದಿಲ್ಲ ಎಂದು ಕಿಡಿಕಾರಿದೆ.
ಬೇಜವಾಬ್ದಾರಿ ಸರ್ಕಾರ, ಅಸಮರ್ಥ ಸಚಿವರು, ಧನದಾಹಿ ಶಾಸಕರ ಕಲೆಕ್ಷನ್-ಕಮೀಷನ್ ದುರಾಸೆಗೆ ಕರ್ನಾಟಕ ಬಲಿಪಶುವಾಗುತ್ತಿದೆ. ಭ್ರಷ್ಟಾಚಾರ, ಒಳಜಗಳ, ಅನುದಾನಕ್ಕಾಗಿ ಕಚ್ಚಾಟ, ಕುರ್ಚಿಗಾಗಿ ಬಡಿದಾಟ, ವರ್ಗಾವಣೆಗಾಗಿ ಕಿತ್ತಾಟ ಇವೇ ಕಾಂಗ್ರೆಸ್ನ ಐದು ತಿಂಗಳ ದಿನಚರಿ. ಇವೆಲ್ಲದರ ನಡುವೆ ತುತ್ತು ಅನ್ನಕ್ಕಾಗಿ, ಬೊಗಸೆ ನೀರಿಗಾಗಿ ಪರದಾಡುತ್ತಿರುವುದು ಮಾತ್ರ ಆರೂವರೆ ಕೋಟಿ ಕನ್ನಡಿಗರು. CongressInFight ಕೈ ಕಚ್ಚಾಟ ಎಂದು ವ್ಯಂಗ್ಯವಾಡಿದೆ.
ಕರ್ನಾಟಕಕ್ಕೆ ಮಾರಿ, ಪರರಾಜ್ಯಗಳಿಗೆ ಉಪಕಾರಿ!
ಡಿಸಿಎಂ ಡಿ. ಕೆ. ಶಿವಕುಮಾರ್ ಅವರೇ, ಕರ್ನಾಟಕದಲ್ಲಿ ಭೀಕರ ಬರವಿದೆ, ಜನ-ಜಾನುವಾರುಗಳಿಗೆ ಕುಡಿಯಲು ಸಹ ನೀರಿಲ್ಲ, ಸಾಲದ್ದಕ್ಕೆ ನೀವು ನೀರಾವರಿ ಸಚಿವರು. ಕರ್ನಾಟಕದಲ್ಲಿ ಎಷ್ಟು ಬಾರಿ ಬರ ಪ್ರವಾಸ ಮಾಡಿದ್ದೀರಿ ಸ್ವಾಮಿ..?? ತೆಲಂಗಾಣ ಕಾಂಗ್ರೆಸ್ಸಿಗರ ಮನೆಯಲ್ಲಿ ಐಟಿ ರೇಡ್ ವೇಳೆ ಹಣ ಸಿಕ್ಕಿ ಬಿದ್ದಿದ್ದರಿಂದ, ಕರ್ನಾಟಕದಲ್ಲಿ ಮಾಡಿದ ಕಲೆಕ್ಷನ್ ಹಣವನ್ನು ತಲುಪಿಸಲು ಹೋಗಿದ್ದೀರೇನು..? ಎಂದು ಬಿಜೆಪಿಯು ಪ್ರಶ್ನಿಸಿದೆ.