SUDDIKSHANA KANNADA NEWS/ DAVANAGERE/ DATE:11-01-2025
ಬೆಂಗಳೂರು: ಬೆಳಗಾವಿಯ ಸುವರ್ಣ ಸೌಧದಲ್ಲಿ ನಮ್ಮ ಪಕ್ಷದ ಪ್ರಮುಖರಾದ ವಿಧಾನ ಪರಿಷತ್ ಸದಸ್ಯ ಸಿ. ಟಿ. ಅವರ ಮೇಲೆ ಪ್ರಜಾಪ್ರಭುತ್ವವನ್ನು ನಾಚಿಸುವ ರೀತಿಯಲ್ಲಿ ದೌರ್ಜನ್ಯ ಹಾಗೂ ಹಲ್ಲೆಗೆ ಯತ್ನ ನಡೆಯಿತು. ಅದರ ನಂತರವೂ ಅವರ ವಿರುದ್ಧ ನಿರಂತರ ಬೆದರಿಕೆ ಒಡ್ಡಲಾಗುತ್ತಿದೆ. ಅದರ ಮುಂದುವರಿದ ಭಾಗವಾಗಿ ನಿನ್ನೆ ಅವರಿಗೆ ಬೆದರಿಕೆ ಪತ್ರ ರವಾನೆಯಾಗಿರುವುದು ಅತ್ಯಂತ ಆತಂಕಕಾರಿ ವಿಷಯವಾಗಿದೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಟಿ ರವಿ ಅವರನ್ನು ಗುರಿಯನ್ನಾಗಿಸಿಕೊಂಡಿರುವ ದುಷ್ಕರ್ಮಿಗಳು ಅವರ ವಿರುದ್ಧ ವ್ಯೂಹ ರಚಿಸಿರುವ ಸಾಧ್ಯತೆಯನ್ನು ಅವರಿಗೆ ಬಂದಿರುವ ಬೆದರಿಕೆಯ ಸಂದೇಶಗಳ ಹಿನ್ನೆಲೆಯಲ್ಲಿ ತಳ್ಳಿ ಹಾಕಲಾಗದು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರದಿಂದ ಅವರಿಗೆ ರಕ್ಷಣೆ ಸಿಗುತ್ತದೆ ಎಂದು ನಿರೀಕ್ಷಿಸುವುದು “ಮಾರ್ಜಾಲ ನ್ಯಾಯದಂತಾಗುತ್ತದೆ” ಎಂದು ಕಿಡಿಕಾರಿದ್ದಾರೆ.
ಸಿಟಿ ರವಿ ಅವರಿಗೆ ಬೆದರಿಕೆ ಒಡ್ಡಲಾಗುತ್ತಿರುವ ಶಕ್ತಿಗಳು ಯಾವುದು ಎಂಬುದು ಸರ್ಕಾರ ಹಾಗೂ ಪೊಲೀಸರಿಗೆ ತಿಳಿದೇ ಇದೆ, ಇಷ್ಟಾಗಿಯೂ ದುಷ್ಕ ಶಕ್ತಿಗಳ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ. ಏಕೆಂದರೆ ಅವರು ಕಾಂಗ್ರೆಸ್ ಪಕ್ಷದ ಭಾಗವೇ ಆಗಿದ್ದಾರೆ ಎಂಬುದು ಬಹಿರಂಗ ಸತ್ಯ. ಈ ನಿಟ್ಟಿನಲ್ಲಿ ಸಿಟಿ ರವಿ ಅವರ ರಕ್ಷಣೆಗೆ ವಿಶೇಷ ಭದ್ರತೆ ಒದಗಿಸಲು ಒತ್ತಾಯಿಸುವೆ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ತಿಳಿಸಿದ್ದಾರೆ.
ಶಾಸಕ ಸಿಟಿ ರವಿ ಅವರು ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ಇಂತಹ ಬೆದರಿಕೆ, ದೌರ್ಜನ್ಯಗಳು ಮುಂದುವರೆದಲ್ಲಿ ಬಿಜೆಪಿಯು ಸವಾಲಾಗಿ ಸ್ವೀಕರಿಸಿ ಹೋರಾಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.