SUDDIKSHANA KANNADA NEWS\ DAVANAGERE\ DATE:08-01-2024
ದಾವಣಗೆರೆ: ಶಿವಮೊಗ್ಗದ ಮಲವಗೊಪ್ಪದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರ ಅಧ್ಯಕ್ಷತೆಯಲ್ಲಿ ನಡೆದ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತಿದೆ. ಭದ್ರಾ ಅಚ್ಚುಕಟ್ಟುದಾರ ಪ್ರದೇಶದವರನ್ನೇ ಕಾಡಾ ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ಎ. ಕೆ. ಫೌಂಡೇಶನ್ ಅಧ್ಯಕ್ಷರೂ ಆದ ದಾವಣಗೆರೆ ಲೋಕಸಭೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಕೆ. ಬಿ. ಕೊಟ್ರೇಶ್ ಅವರು ಒತ್ತಾಯಿಸಿದರು.
ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಲ್ಲಿ ರೈತ ಒಕ್ಕೂಟ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ತೆಗೆದುಕೊಂಡಿರುವ ನಿರ್ಧಾರ ತಪ್ಪು. ಜಿಲ್ಲೆಯ ರೈತರ ಹಿತ ಗಮನದಲ್ಲಿಟ್ಟುಕೊಂಡು 72 ದಿನಗಳ ಕಾಲ ನೀರನ್ನು ಭದ್ರಾ ಡ್ಯಾಂನಿಂದ ಬಲದಂಡೆ ನಾಲೆಯಲ್ಲಿ ಹರಿಸಬೇಕು ಎಂದು ಆಗ್ರಹಿಸಿದರು.
ಭದ್ರಾ ಡ್ಯಾಂನ ನೀರು ಅವಲಂಬಿಸಿರುವುದು ದಾವಣಗೆರೆ ಜಿಲ್ಲೆ ಜನರು, ರೈತರು. ಶೇಕಡಾ 70ರಷ್ಟು ಭಾಗ ಇಲ್ಲಿದೆ. ಇಲ್ಲಿನವರೇ ಕಾಡಾ ಅಧ್ಯಕ್ಷರಾದರೆ ಸಮಸ್ಯೆಗಳ ಬಗ್ಗೆ ಅರಿವಿರುತ್ತದೆ. ರೈತರ ಕಷ್ಟಗಳು ಗೊತ್ತಿರುತ್ತವೆ. ಆದ್ದರಿಂದ ದಾವಣಗೆರೆ ಭಾಗದವರೇ ಅಧ್ಯಕ್ಷರಾಗಬೇಕು ಎಂದು ಒತ್ತಾಯಿಸಿದರು.
ಭಾರತ ದೇಶಕ್ಕೆ ರೈತರೇ ಬೆನ್ನಲುಬು. ಬೆನ್ನಲುಬು ಮುರಿಯುವ ಕೆಲಸ ಮಾಡಬಾರದು. ಕಟ್ಟುವ ಕೆಲಸ ಮಾಡಬೇಕು. ಆದರೆ ಭದ್ರಾ ಡ್ಯಾಂ ನೀರು ಹರಿಸುವ ಸಂಬಂಧ ತೆಗೆದುಕೊಂಡಿರುವ ನಿರ್ಧಾರ ಸರಿಯಿಲ್ಲ. ಆದ್ದರಿಂದ ಈ ತೀರ್ಮಾನ ಪುನರ್ ಪರಿಶೀಲಿಸಿ ದಾವಣಗೆರೆ ಜಿಲ್ಲೆಯ ರೈತರ ಹಿತ ಕಾಪಾಡುವಂಥ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯ ರೈತರಿಗೆ ನೀರು ಅವಶ್ಯಕತೆ ಇದೆ. ಅನ್ನದಾತರ ಬಗ್ಗೆ ಮಾತನಾಡುತ್ತಾರೆ. ಆದರೆ ಆ ರೈತರ ಹಿತ ಕಾಪಾಡಲು ಮುಂದಾಗುತ್ತಿಲ್ಲ. ಇದು ಬೇಸರದ ಸಂಗತಿ. ದಾವಣಗೆರೆ ಜಿಲ್ಲೆಯವರೇ ಕಾಡಾ ಅಧ್ಯಕ್ಷರಾದರೆ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಸಮರ್ಥವಾಗಿ ಮಂಡನೆ ಮಾಡಬಹುದು. ಆಗ ನಮ್ಮ ಹಕ್ಕು ಭದ್ರಾ ಡ್ಯಾಂ ನೀರು ಪಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ರೈತ ಮುಖಂಡರಾದ ಸತೀಶ್ ಕೊಳೇನಹಳ್ಳಿ, ಶಾಮನೂರು ಲಿಂಗರಾಜು, ನಾಗೇಶ್ವರರಾವ್, ಮಹಾನಗರ ಪಾಲಿಕೆ ಮಾಜಿಮೇಯರ್ ಗುರುನಾಥ್, ಕಡ್ಲೇಬಾಳು ಧನಂಜಯ್, ಕಲ್ಪನಹಳ್ಳಿ ಹುಚ್ಚಣ್ಣ, ಕಲ್ಪನಹಳ್ಳಿ ಮಂಜುನಾಥ್, ಶಿರಮಗೊಂಡನಹಳ್ಳಿ ಮಂಜುನಾಥ್ ಮತ್ತಿತರರು ಹಾಜರಿದ್ದರು.