SUDDIKSHANA KANNADA NEWS/ DAVANAGERE/ DATE:14-12-2024
ದಾವಣಗೆರೆ: ರಾಜ್ಯ ಬಿಜೆಪಿ ಘಟಕದಲ್ಲಿ ಎದ್ದಿರುವ ಭಿನ್ನಮತ ಮತ್ತಷ್ಟು ತಾರಕಕ್ಕೇರಿದೆ. ಹೊಟೇಲ್ ಗಳಲ್ಲಿ ಸಭೆ ಸೇರಿ ಚರ್ಚಿಸುವ ಮಟ್ಟಕ್ಕೆ ಬಂದಿದೆ. ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ದಾವಣಗೆರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಪರ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಸಜ್ಜುಗೊಳಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಮಾಜಿ ಶಾಸಕರು, ಮಾಜಿ ಸಚಿವರು, ಬಿಜೆಪಿ ಮುಖಂಡರು ಸಭೆ ಸೇರಿ ಚರ್ಚೆ ನಡೆಸಿದ್ದಾರೆ.
ನಗರದ ಸಾಯಿ ಇಂಟರ್ ನ್ಯಾಷನಲ್ ಹೊಟೇಲ್ ನಲ್ಲಿ ಸಭೆ ಸೇರಿ ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಕುಮಾರ್ ಬಂಗಾರಪ್ಪ, ಡಾ. ಜಿ. ಎಂ. ಸಿದ್ದೇಶ್ವರ ಬಣದ ವಿರುದ್ಧ ಯಾವ ರೀತಿ ತಂತ್ರಗಾರಿಕೆ ರೂಪಿಸಬೇಕೆಂಬ ಕುರಿತಂತೆ ಚರ್ಚೆ ನಡೆಸಲಾಗಿದೆ. ಮಾತ್ರವಲ್ಲ, ಈ ಬಣದ ವಿರುದ್ಧ ಹೈಕಮಾಂಡ್ ಮಟ್ಟದಲ್ಲಿ ಯಾವ ರೀತಿ ದೂರು ನೀಡಬೇಕು. ಯಾವ ರೀತಿ ಹಣಿಯಬೇಕು, ವಿಜಯೇಂದ್ರ ಅವರ ಪರ ಗಟ್ಚಿ ನಿಲ್ಲಲು
ಏನೆಲ್ಲಾ ರೂಪುರೇಷೆ ಸಿದ್ಧಪಡಿಸಬೇಕೆಂಬ ಕುರಿತಂತೆ ಸಮಾಲೋಚನೆ ನಡೆಸಲಾಗಿದೆ.
ಕಳೆದ 20 ವರ್ಷಗಳ ಕಾಲ ಬಿಜೆಪಿ ಗೆದ್ದಿತ್ತು. ಆದ್ರೆ, 2024ರಲ್ಲಿ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ಸೋಲಲು ಕಾರಣ ಮಾಜಿ ಸಂಸದರ ಅಹಂಕಾರ, ದುರಹಂಕಾರ, ಪಕ್ಷದ ಮುಖಂಡರ ವಿಶ್ವಾಸಕ್ಕೆ ಪಡೆಯದಿರುವುದು, ಕಾರ್ಯಕರ್ತರ ಬಗ್ಗೆ ಹಗುರವಾಗಿ ಹೇಳಿಕೆ ನೀಡಿರುವುದು, ಜಿಎಂಐಟಿಯನ್ನೇ ಆಧಾರವಾಗಿಟ್ಟುಕೊಂಡು ರಾಜಕಾರಣ ಮಾಡಿದ್ದು, ಬಿಜೆಪಿ ಪಕ್ಷದ ಕಚೇರಿಗೆ ಹೆಚ್ಚಾಗಿ ಬಾರದೇ ಇದ್ದದ್ದು, ಬಂದಂಥ ರಾಜ್ಯ ಹಾಗೂ ಕೇಂದ್ರ ಮುಖಂಡರು ಜಿಎಂಐಟಿಗೆ ಹೋಗುತ್ತಿದ್ದದ್ದು ಕಾರ್ಯಕರ್ತರಲ್ಲಿ ಬೇಸರ ತರಿಸಿತ್ತು.
ಇದೆಲ್ಲದರ ಪರಿಣಾಮವೇ ಲೋಕಸಭೆ ಚುನಾವಣೆಯ ಸೋಲು. ಹಾಗಾಗಿ, ಸಿದ್ದೇಶ್ವರರ ಅಹಂಕಾರ ಬದಿಗಿಟ್ಟರೆ, ಕಾರ್ಯಕರ್ತರು, ಮುಖಂಡರ ವಿಶ್ವಾಸಕ್ಕೆ ಪಡೆದರೆ ಬಿಜೆಪಿ ಬಲಿಷ್ಠವಾಗುತ್ತದೆ. ಆದ್ರೆ, ಸಿದ್ದೇಶ್ವರರ ವರ್ತನೆ ಮಿತಿಮೀರಿದ್ದು, ಇದು ಸದ್ಯಕ್ಕೆ ಸಾಧ್ಯವಾಗುವ ಲಕ್ಷಣ ಗೋಚರಿಸುತ್ತಿಲ್ಲ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಕೆಲವರು ಬಲವಾಗಿ ಹೇಳಿದರು.
ಇತ್ತೀಚಿನ ದಿನಗಳಲ್ಲಿ ಹರಿಹರ ಶಾಸಕ ಬಿ. ಪಿ. ಹರೀಶ್ ಬಹಿರಂಗವಾಗಿಯೇ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ, ಮಾಜಿ ಸಿಎಂ ಯಡಿಯೂರಪ್ಪರ ವಿರುದ್ದ ಹಗುರವಾಗಿ ಮಾತನಾಡುತ್ತಿದ್ದಾರೆ. ಯಡಿಯೂರಪ್ಪರ ಸಹಕಾರದಿಂದಲೇ ಗೆದ್ದು, ನಮ್ಮೆಲ್ಲರ ಸಹಕಾರದಿಂದಲೇ ಬಿಜೆಪಿಗೆ ಬಂದು ಈಗ ನಮ್ಮ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕೆಲವೊಂದು ಕ್ಷೇತ್ರಗಳಲ್ಲಿ ಇದೇ ರೀತಿಯಲ್ಲಿ ಇದ್ದು, ವಿಜಯೇಂದ್ರ ಪರ ನಾವೆಲ್ಲರೂ ಇದ್ದೇವೆ ಎಂಬ ಸ್ಪಷ್ಟ ಸಂದೇಶ ಹೈಕಮಾಂಡ್ ಗೆ ಹೋದರೆ ಮುಂಬರುವ ಚುನಾವಣೆಗಳಲ್ಲಿ ನಮ್ಮ ಕೈ ಮೇಲಾಗುತ್ತದೆ. ಈ ಕಾರಣಕ್ಕಾಗಿ ನಾವೆಲ್ಲರೂ ಒಟ್ಟಾಗೋಣ. ದಾವಣಗೆರೆಯಲ್ಲಿ ಐತಿಹಾಸಿಕ ಸಮಾವೇಶ ಮಾಡೋಣ. ಈ ಮೂಲಕ ಭಿನ್ನಮತೀಯರಿಗೆ ಸೆಡ್ಡು ಹೊಡೆಯೋಣ ಎಂದು ಸಭೆಯಲ್ಲಿ ಪಾಲ್ಗೊಂಡ ಮುಖಂಡರು ಹೇಳಿದ್ದಾರೆ.
ಸಭೆಯಲ್ಲಿ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ, ಮಾಜಿ ಶಾಸಕರಾದ ಎಸ್ ವಿ ರಾಮಚಂದ್ರಪ್ಪ , ಬ್ಯಾಡಗಿ ವಿರುಪಾಕ್ಷಪ್ಪ, ರಾಣೆಬೆನ್ನೂರು ಅರುಣ್ ಕುಮಾರ್, ಮಾಜಿ ಸಚಿವ ಕೊಳ್ಳೆಗಾಲ ಮಹೇಶ್, ಮಾನ್ವಿ ಗಂಗಾಧರ ನಾಯ್ಕ್, ಶಿವಮೊಗ್ಗ ಕುಮಾರಸ್ವಾಮಿ, ಸೀಮಾ ಮಸೂತಿ, ಬಸವರಾಜ್ ನಾಯ್ಕ್, ಮೊಳಕಾಲ್ಮುರು ತಿಪ್ಪೇಸ್ವಾಮಿ, ಕಡೂರು ಬೆಳ್ಳಿ ಪ್ರಕಾಶ್, ರಾಜಶೇಖರ್ ಶೀಲವಂತ್, ಮಸ್ಕಿ ಪ್ರತಾಪ್ ಗೌಡ್ರು, ಮೈಸೂರು ನಾಗೇಂದ್ರ, ಗುಂಡ್ಲುಪೇಟೆ ನಿರಂಜನ್, ಜಗದೀಶ್ ಮೆಟ್ ಗುಡ್, ಸುರೇಶ್ ಮಾರಿಹಾಳ್. ವಿಶ್ವನಾಥ್ ಪಟೇಲ್, ಮಾಡಾಳ್ ಮಲ್ಲಿಕಾರ್ಜುನ್, ಅಜಯ್ ಕುಮಾರ್ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.