SUDDIKSHANA KANNADA NEWS/ DAVANAGERE/ DATE:08-03-2025
ದಾವಣಗೆರೆ: ಸಿಎಂ ಸಿದ್ದರಾಮಯ್ಯ ಮಂಡನೆ ಮಾಡಿರುವ ಬಜೆಟ್ ರೈತ ವಿರೋಧಿಯಾಗಿದೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಜಯದೇವ ವೃತ್ತದಿಂದ ಎ ಸಿ ಕಚೇರಿಯವರೆಗೂ ಟ್ರ್ಯಾಕ್ಟರ್ ಗಳ ಮೂಲಕ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಸಿದ್ದರಾಮಯ್ಯನವರು ಮಂಡಿಸಿದ ರಾಜ್ಯ ಬಜೆಟ್ ನಲ್ಲಿ ಮುಸ್ಲಿಂರಿಗೆ ಹೆಚ್ಚಿನ ಅನುದಾನ ನೀಡಿ ಇಸ್ಲಾಮೀಕರಣಗೊಳಿಸಲಾಗಿದೆ. ಇದೊಂದು ಹಲಾಲ್ ಬಜೆಟ್. ಅಂಬೇಡ್ಕರ್ ರವರ ಆಶಯಗಳಿಗೆ ತಿಲಾಂಜಲಿ ನೀಡಿದ್ದಾರೆ. ಮಲೆನಾಡು, ಕರಾವಳಿ, ಬಯಲು ಸೀಮೆ ಅಭಿವೃದ್ಧಿ ಮಂಡಳಿಗಳಿಗೆ ನೀಡಿರುವ ಹಣ ಬಹಳ ಅತ್ಯಲ್ಪವಾಗಿದ್ದು, ಅಭಿವೃದ್ಧಿ ದೃಷ್ಟಿಯಿಂದ ಏನೇನು ಸಾಲದು. ಕಿತ್ತೂರು ಕರ್ನಾಟಕ ಅಭಿವೃದ್ಧಿಗೂ ಸಹ ಬಹಳ ಕಡಿಮೆ ಪ್ರಮಾಣದ ಹಣ ಮೀಸಲಿಡಲಾಗಿದೆ. ವಿಧಾನಸಭೆ ಕ್ಷೇತ್ರಗಳ ರಸ್ತೆ, ನೀರು ಮತ್ತು ಮೂಲಸೌಕರ್ಯ ಕಲ್ಪಿಸಲು ಮೀಸಲೀಟಿರುವ ಹಣ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಈ ಹಿಂದೆ ಘೋಷಿಸಿದಂತೆ ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆಸಬೇಕು ಎಂಬ ಪ್ರಮುಖ ಬೇಡಿಕೆ ಬಗ್ಗೆ ಪ್ರಸ್ತಾಪ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇತ್ತಿಚೆಗೆ ದಾವಣಗೆರೆಗೆ ಬಂದಾಗ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನರವರ ಸಮ್ಮುಖದಲ್ಲಿ ಸಾಹಿತ್ಯಾಸಕ್ತರು ಮನವಿ ಸಲ್ಲಿಸಿದ್ದರು. ಈ ಮನವಿಗೂ ಕ್ಯಾರೆ ಎಂದಿಲ್ಲ.
ದಾವಣಗೆರೆ ಜಿಲ್ಲೆಯ ರೈತರ ಜೀವನಾಡಿ ಭದ್ರಾ ಜಲಾಶಯದ ಕಾಲುವೆಗಳಲ್ಲಿ ಗಿಡ ಗಂಟೆಗಳು ಬೆಳೆದು, ಹೂಳು ತುಂಬಿರುವುದರಿಂದ ನೀರು ಸರಾಗವಾಗಿ ಹರಿಯುತ್ತಿಲ್ಲ. ಹೀಗಾಗಿ ಕೊನೆ ಭಾಗದ ರೈತರಿಗೆ ನೀರು ಪೂರೈಕೆಯಾಗುತ್ತಿಲ್ಲ. ಕಾಲುವೆಗಳ ಆಧುನೀಕರಣಕ್ಕೆ ಅನುದಾನ ಮೀಸಲಿಡಬೇಕು ಎಂಬ ಜಿಲ್ಲೆಯ ರೈತರ ಬಹುದಿನಗಳ ಬೇಡಿಕೆಯನ್ನು ಕಸದ ಬುಟ್ಟಿಗೆ ಎಸೆಯಲಾಗಿದೆ. ಭದ್ರಾ ಡ್ಯಾಂ 1972 ರಲ್ಲಿ ಸುಣ್ಣ ಗಾರೆ ಕಲ್ಲುಗಳಿಂದ ನೀರ್ಮಿಸಿದ್ದು, ಸಹಜವಾಗಿ ಬುಡದಲ್ಲಿ ನೀರು ಸೋರಿಕೆಯಾಗುತ್ತಿದೆ. ಭದ್ರಾ ಡ್ಯಾಂ ಸುರಕ್ಷತೆ ದೃಷ್ಟಿಯಿಂದ ಸಮೀಕ್ಷೆ ನಡೆಸಿ, ಸೂಕ್ತ ಭದ್ರತೆಗಾಗಿ ಅನುದಾನ ನೀಡಿಲ್ಲ ಎಂದು ದೂರಿದರು.
ಎಸ್. ಎಸ್. ಮಲ್ಲಿಕಾರ್ಜುನ್ ಅವರು ಸಚಿವರಾದಾಗಿನಿಂದ ತೋಟಗಾರಿಕೆ ಖಾತೆ ಪಡೆದಿದ್ದಾರೆ. ಆದರೆ ಅವರು ಚನ್ನಗಿರಿ ತಾಲ್ಲೂಕಿನ ಕತ್ತಲಗೆರೆ ಗ್ರಾಮದಲ್ಲಿ ಮುಚ್ಚಿರುವ ಕೃಷಿ ಡಿಪ್ಲೊಮಾ ಕಾಲೇಜನ್ನು ಪುರ್ನಾರಂಭಿಸುವ ಗೋಜಿಗೆ ಹೋಗಿಲ್ಲ. ಜಿಲ್ಲೆಯಲ್ಲಿ ಬಹಳಷ್ಟು ತೋಟಗಾರಿಕೆ ಇದ್ದರೂ, ಕಡೆ ಪಕ್ಷ ಜಿಲ್ಲೆಗೆ ತೋಟಗಾರಿಕೆ ಕಾಲೇಜು ತರುವ ಆಸಕ್ತಿ ತೋರಿಲ್ಲ. ಮೆಕ್ಕೆಜೋಳ ಕಣಜ ಎಂದು ಹೆಸರಾಗಿರುವ ದಾವಣಗೆರೆ ಜಿಲ್ಲೆಯ ಬಹುದಿನದ ಕನಸು ಮೆಕ್ಕೆಜೋಳ ಸಂಸ್ಕರಣೆ ಘಟಕ ಕೇವಲ ಕನಸಾಗಿ ಉಳಿಯಿತು. ದಶಕಗಳ ಬೇಡಿಕೆಗಳಾಗಿರುವ ವಿಮಾನ ನಿಲ್ದಾಣ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಸರ್ಕಾರಿ ಮೆಡಿಕಲ್ ಕಾಲೇಜು, ದಾವಣಗೆರೆ-ಚಿತ್ರದುರ್ಗ ಪ್ರತ್ಯೇಕ ಹಾಲು ಒಕ್ಕೂಟ ಮುಂತಾದ ಜಿಲ್ಲೆಯ ಜನರ ಬೇಡಿಕೆ ನೆನೆಗುದಿಗೆ ಬಿದ್ದಿವೆ. ಇದರಿಂದ ಜಿಲ್ಲೆಯ ಜನತೆಗೆ ನಿರಾಸೆಯಾಗಿದೆ. ಜಿಲ್ಲಾ ಮಟ್ಟದ ಬೇಡಿಕೆಗಳನ್ನು ಸರ್ಕಾರದ ಮುಂದೆ ಮಂಡಿಸಿ, ಅನುದಾನ ತರಲು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನರವರು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ್ ನಾಗಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಧನಂಜಯ ಕಡ್ಲೆಬಾಳ, ಅಣ್ಣೇಶ್ ಐರಾಣಿ, ಮಾಜಿ ಶಾಸಕ ಬಸವರಾಜ್ ನಾಯಕ್, ರಾಜ್ಯ ಎಸ್ ಟಿ ಮೋರ್ಚಾ ಉಪಾಧ್ಯಕ್ಷರಾದ ಶ್ರೀನಿವಾಸ್ ದಾಸಕರಿಯಪ್ಪ, ಬಿ ಜೆ ಅಜಯ್ ಕುಮಾರ್, ಶಿವನಹಳ್ಳಿ ರಮೇಶ್, ಚಂದ್ರಶೇಖರ್ ಪೂಜಾರ್, ಜಿಲ್ಲಾ ವಕ್ತಾರರಾದ ಕೊಳೇನಹಳ್ಳಿ ಸತೀಶ್, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಶಿವಾನಂದ್, ಸುರೇಶ್ ಗಂಡುಗಲಿ, ಜಿಲ್ಲಾ ಮಾಧ್ಯಮ ಸಂಚಾಲಕರಾದ ವಿಶ್ವಾಸ್ ಹೆಚ್ ಪಿ, ಸಾಮಾಜಿಕ ಜಾಲತಾಣ ಕೊಟ್ರೇಶ್ ಗೌಡ್ರು, ಉತ್ತರಮಂಡಲದ ಅಧ್ಯಕ್ಷ ತರೇಶ್ ನಾಯಕ್, ಪಕ್ಷದ ಮುಖಂಡರಾದ ಶಿವರಾಜ್ ಪಾಟೀಲ್, ಬಾತಿ ಚಂದ್ರಶೇಖರ್, ಪಿ. ಎಸ್. ಬಸಣ್ಣ, ಸಂತೋಷ್ ಪೈಲ್ವಾನ್, ಮಂಜು ಪೈಲ್ವಾನ್, ಚಿಕ್ಕಿ ಮಂಜು, ಅತ್ತಿತ್, ರವಿ ನಾಯಕ, ಕಿರಿಟ್ ಕಲಾಲ್, ಹರೀಶ್, ರವಿ, ಪಂಜು, ಕೆ ವಿ ಗುರು, ಪ್ರವೀಣ, ನವೀನ್, ಗುರುರಾಜ್, ಬೆಳ್ಳೂಡಿ ಮಂಜುನಾಥ, ಪಕ್ಷದ ಮುಖಂಡರುಗಳು ಕಾರ್ಯಕರ್ತರು ಉಪಸ್ಥಿತರಿದ್ದರು.