SUDDIKSHANA KANNADA NEWS/ DAVANAGERE/ DATE:07-02-2025
ದಾವಣಗೆರೆ: ಗ್ಯಾರಂಟಿ ಯೋಜನೆಗಳ ಮೂಲಕ ದೇಶಾದ್ಯಂತ ಗಮನ ಸೆಳೆದು ಬಡವರು, ಮಧ್ಯಮ ವರ್ಗದವರ ಆಶಾಕಿರಣ ಆಗಿರುವ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಸುಳ್ಳು ಆರೋಪ ಮಾಡಿದ್ದ ಬಿಜೆಪಿಗೆ ಹೈಕೋರ್ಟ್ ತೀರ್ಪಿನಿಂದ ಭಾರೀ ಮುಖಭಂಗವಾಗಿದೆ ಎಂದು ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಹೇಳಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಪಾತ್ರ ಇರದಿದ್ದರೂ ಬಿಜೆಪಿ ವಿನಾಕಾರಣ ಆರೋಪ ಮಾಡಿದೆ. ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಿಬಿಐಗೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಮಾತ್ರವಲ್ಲ, ಈ ಪ್ರಕರಣ ಸಿಬಿಐಗೆ ವಹಿಸಲು ಸ್ಪಷ್ಟವಾಗಿ ನಿರಾಕರಿಸಿದೆ. ಈ ಮೂಲಕ ಸತ್ಯಕ್ಕೆ ಸಂದ ಜಯವಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಮುಂದಾದರೂ ಸಿದ್ದರಾಮಯ್ಯರ ವಿರುದ್ಧ ಸುಳ್ಳು ಆರೋಪ ಮಾಡುವುದನ್ನು ಬಿಡಬೇಕು. ಅಹಿಂದ ನಾಯಕರಾಗಿ ಜನಪ್ರಿಯ ಮುಖ್ಯಮಂತ್ರಿಯಾಗಿರುವ ಕಾರಣಕ್ಕೆ ಸಹಿಸದ ಬಿಜೆಪಿ ನಾಯಕರು ಸ್ನೇಹಮಯಿ ಕೃಷ್ಣರ ಮೂಲಕ ಹೆಸರು ಹಾಳು ಮಾಡಲು, ವರ್ಚಸ್ಸಿಗೆ ಧಕ್ಕೆ ತರಲು ಸಂಚು ರೂಪಿಸಿರುವ ಸಾಧ್ಯತೆ ಇದ್ದು, ಈ ಬಗ್ಗೆಯೂ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ವಿರೋಧಪಕ್ಷಗಳು ದುರುದ್ದೇಶಪೂರ್ವಕವಾಗಿ ಆಡಳಿತವನ್ನು ಬುಡಮೇಲು ಹೊರಟಿದ್ದ ಬಿಜೆಪಿಯವರ ಷಡ್ಯಂತ್ರ ಬುಡಮೇಲಾಗಿದೆ. ಜನಪರ ಆಡಳಿತ ನೀಡಲು ಸಹಕರಿಸಬೇಕು. ಸಿದ್ದರಾಮಯ್ಯರ ಪಾತ್ರ ಇಲ್ಲದಿರುವುದು ಹೈಕೋರ್ಟ್ ತೀರ್ಪಿನಿಂದ ಸಾಬೀತಾಗಿದೆ. ಇದು ಸತ್ಯಮೇವ ಜಯತೆ ಎಂದು ಸೈಯದ್ ಖಾಲಿದ್ ಅಹ್ಮದ್ ಹೇಳಿದ್ದಾರೆ.