ರಾಜ್ಯ ಸರ್ಕಾರವು ಅಬಕಾರಿ ಇಲಾಖೆಯಲ್ಲಿನ ಅಬಕಾರಿ ಪೇದೆಗಳ ಹುದ್ದೆಗಳ ಭರ್ತಿ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದೆ. ಈ ಉದ್ಯೋಗಗಳಿಗೆ ಅಭ್ಯರ್ಥಿಗಳು ನೇರ ನೇಮಕಾತಿ ಮೂಲಕ ಆಯ್ಕೆಯಾದ ಬಳಿಕ ಗೃಹ ರಕ್ಷಕ ಸಿಬ್ಬಂದಿ ಸೇವೆಯನ್ನ ರದ್ದು ಮಾಡುವಂತೆ ತಿಳಿಸಲಾಗಿದೆ.
ಕರ್ನಾಟಕದ ಅಬಕಾರಿ ಇಲಾಖೆಯಲ್ಲಿ ಅಬಕಾರಿ ಪೇದೆ 942 ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಅನುಮತಿ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಈ ಕೆಲಸಗಳಿಗೆ ಇಲಾಖೆಯು ಅರ್ಜಿಗಳನ್ನು ಆಹ್ವಾನ ಮಾಡಲಿದೆ. ಅರ್ಜಿ ಪ್ರಕ್ರಿಯೆ ಬಳಿಕ ಆಯ್ಕೆ ಪ್ರಕ್ರಿಯು ಮುಗಿದ ಮೇಲೆ ಅಭ್ಯರ್ಥಿಗಳು ಉದ್ಯೋಗಕ್ಕೆ ನೇಮಕ ಆಗುತ್ತಿದ್ದಂತೆ ಈಗಾಗಲೇ ಹೊರಗುತ್ತಿಗೆ ಆಧಾರದ ಮೇಲೆ ಕೆಲಸದಲ್ಲಿ ಇರುವ ಗೃಹ ರಕ್ಷಕ ಸಿಬ್ಬಂದಿ ಸೇವೆ ರದ್ದುಗೊಳಿಸಬೇಕು ಎಂದು ಅಬಕಾರಿ ಇಲಾಖೆಗೆ ಪತ್ರದ ಮೂಲಕ ತಿಳಿಸಲಾಗಿದೆ.
ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಅಬಕಾರಿ)ಯ ಭೀಮಪ್ಪ ಪ. ಅಜೂರ್ ಅವರು ಅಬಕಾರಿ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಮುಂದುವರೆದು ಅಬಕಾರಿ ಪೇದೆ ಹುದ್ದೆ ನೇರ ನೇಮಕಾತಿ ಮೂಲಕ ಭರ್ತಿಯಾದ ನಂತರ ಸದರಿ ಹುದ್ದೆ ಎದುರಾಗಿ ಹೊರಗುತ್ತಿಗೆ ಆಧಾರದ ಮೇಲೆ ಪಡೆಯಲು ಅನುಮತಿ ನೀಡಿರುವ 1,000 ಗೃಹ ರಕ್ಷಕ ಸಿಬ್ಬಂದಿ ಸೇವೆಯನ್ನು ರದ್ದು ಮಾಡುವಂತೆ ಪತ್ರದಲ್ಲಿ ತಿಳಿಸಲಾಗಿದೆ.
ಸರ್ಕಾರದ ಅನುಮತಿ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ, ಅಬಕಾರಿ ಪೇದೆ ಹುದ್ದೆ 942, ಅಬಕಾರಿ ಉಪ ನಿರೀಕ್ಷಕರ 265 ಹುದ್ದೆಗಳನ್ನು (ಕಲ್ಯಾಣ ಕರ್ನಾಟಕ ವೃಂದ ಸೇರಿದೆ) ಭರ್ತಿ ಮಾಡಲಾಗುತ್ತದೆ. ಒಟ್ಟು 1,207 ಹುದ್ದೆಗಳು ಇಲಾಖೆಯಲ್ಲಿ ನೇಮಕಾತಿ ಆಗುತ್ತವೆ. ಇದರ ಬೆನ್ನಲ್ಲೇ 1000 ಹೋಮ್ಗಾರ್ಡ್ಸ್ ತಮ್ಮ ಹುದ್ದೆಯನ್ನು ಕಳೆದುಕೊಳ್ಳಲಿದ್ದಾರೆ.