SUDDIKSHANA KANNADA NEWS/ DAVANAGERE/ DATE:22-08-2024
ಶಿವಮೊಗ್ಗ/ದಾವಣಗೆರೆ: ಭದ್ರಾವತಿಯ ಕಾಂಗ್ರೆಸ್ ನ ಹಿರಿಯ ಶಾಸಕ ಬಿ. ಕೆ. ಸಂಗಮೇಶ್ವರ್ ಅವರ ಪುತ್ರ ಬಸವೇಶ್ ಹತ್ಯೆಗೆ ಸಂಚು ರೂಪಿಸಿದ್ದ ಸ್ಫೋಟಕ ಮಾಹಿತಿ ಹೊರ ಬಿದ್ದಿದೆ. ಮಾತ್ರವಲ್ಲ, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗಲೇ ಕಾಂಗ್ರೆಸ್ ಶಾಸಕರ ಪುತ್ರನ ಹತ್ಯೆಗೆ ಸಂಚು ರೂಪಿಸಿದ್ದು ಆಘಾತಕಾರಿಯಾಗಿದ್ದು, ಈ ಸಂಬಂಧ ಭದ್ರಾವತಿ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಲು ಸಜ್ಜಾಗಿದ್ದಾರೆ.
ಸಂಗಮೇಶ್ವರ್ ಅವರು ಭದ್ರಾವತಿಯ ಜನಪ್ರಿಯ ಶಾಸಕರು. ಜನತೆಯ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಲೇ ಇದ್ದಾರೆ. ಮಾತ್ರವಲ್ಲ, ಸಚಿವ ಸಂಪುಟ ವಿಸ್ತರಣೆಯಾದರೆ ಸಚಿವರಾಗುವ ಭಾಗ್ಯವೂ ಇದೆ. ಇಂಥ ಹೊತ್ತಿನಲ್ಲಿ
ಅವರ ಪುತ್ರ ಬಸವೇಶ್ ರನ್ನು ಕೊಲೆ ಮಾಡಲು ಡೀಲ್ ನಡೆದಿತ್ತಾ ಎಂಬ ಸ್ಫೋಟಕ ಮಾಹಿತಿ ಹೊರ ಬಿದ್ದಿದೆ. ಆದ್ರೆ, ಈ ವಿಚಾರ ಬೆಳಕಿಗೆ ಬಂದಿದ್ದು ಎಫ್ ಐ ಆರ್ ನಿಂದ.
ಬಸವೇಶ್ ಸಹ ತಂದೆ ಜೊತೆಗೆ ಓಡಾಡುತ್ತಿದ್ದಾರೆ. ಕ್ಷೇತ್ರದ ಜನರ ಸಮಸ್ಯೆ ಆಲಿಸುತ್ತಾರೆ. ಏನೇ ಸಮಸ್ಯೆಗಳಿದ್ದರೂ ಜನರೊಂದಿಗೆ ವ್ಯವಹರಿಸುತ್ತಿದ್ದಾರೆ. ರಾಜಕೀಯವಾಗಿ ಬೆಳೆಯುತ್ತಿದ್ದಾರೆ. ಇಂಥ ಸನ್ನಿವೇಶದಲ್ಲಿ ಜೈಲಿನಿಂದಲೇ ಬಸವೇಶ್ ಹತ್ಯೆಗೆ ಸಂಚು ರೂಪಿಸಿರುವುದು ಗೊತ್ತಾಗಿದೆ.
ಭದ್ರಾವತಿ ನಗರದ ಜಟ್ ಪಟ್ ನಗರದ ವಾಸಿಯಾದ ಮುಬಾರಕ್ ಮುಬ್ಬು ಕಳೆದ 17 ನೇ ತಾರೀಖು ಗುತ್ತಿಗೆದಾರನ ಬಳಿ ಬಂದು ಬಸಣ್ಯ ಎಲ್ಲಿದ್ದಾರೆ ಎಂದು ಕೇಳಿದ್ದಾನೆ. ಆ ಬಳಿಕ ಆತ ಡಿಚ್ಚಿ ಮುಬಾರಕ್ ಜೈಲಿನಿಂದ ಎರಡು ಪ್ರತ್ಯೇಕ ಫೋನ್ ನಂಬರ್‌ನಿಂದ ಕರೆ ಮಾಡಿ, ಬಸವರನ್ನ ಮುಗಿಸುವ ಡೀಲ್ ನಡೆದಿರುವ ಬಗ್ಗೆ ಹೇಳಿದ್ದಾನೆ. ಇದನ್ನ ಕೇಳಿಸಿಕೊಂಡ ವ್ಯಕ್ತಿಯೊಬ್ಬರು ಭದ್ರಾವತಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಗೆ ಇಳಿದಿದ್ದಾರೆ.
ಸೀಗೆಬಾಗಿ ಟಿಪ್ಪು ಎಂಬಾತ ಡೀಲ್ ನೀಡಿದ್ದು, ಡಿಚ್ಚಿ ಮುಬಾರಕ್ ನು ಜೈಲಿನಿಂದಲೇ ಹತ್ಯೆಗೆ ಸಂಚು ರೂಪಿಸಿದ್ದಾನೆ ಎಂದು ಮುಬ್ಬು ಮಾಹಿತಿ ನೀಡಿದ್ದಾನೆ. ಭದ್ರಾವತಿಯ ಗಾಂಧಿ ಸರ್ಕಲ್ ನಲ್ಲಿ ಬಸವನನ್ನ ಹೊಡೆದು ಹಾಕಿ ಎಂದು ಟಿಪ್ಪು ಆಂಡ್ ಟೀಂಗೆ ಹೇಳಿದ್ದ ಎಂದು ಮುಬ್ಬು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾನೆ.
ಇಷ್ಟೆ ಅಲ್ಲದೆ ಕಳೇದ 17 ತಾರೀಖು ರಂಗಪ್ಪ ಸರ್ಕಲ್ ಬಳಿ ಸಿಕ್ಕ ಟಿಪ್ಪು ಬಾರ್‌ವೊಂದರಲ್ಲಿ ಕುಳಿತು ಡಿಚ್ಚಿ ಮುಬಾರಕ್ ಡೀಲ್ ಕೊಟ್ಟಿದ್ದು, ಅದರಂತೆ ಚಾಕು ತಂದಿದ್ದೇನೆ ಎಂದು ಮುಬ್ಬುಗೆ ತೋರಿಸಿರುವ ಬಗ್ಗೆ ಎಫ್‌ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. ಅಕ್ರಮ ಕೂಟ, ಹತ್ಯೆಗೆ ಸಂಚು, ಸ್ಕೆಚ್ ಸೇರಿದಂತೆ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಲಾಗಿದೆ. ಶಾಸಕರೊಬ್ಬರ ಪುತ್ರನಿಗೆ ಈ ರೀತಿಯಾಗಿ ಕೊಲೆಗೆ ಸಂಚು ರೂಪಿಸಿರುವುದು ಭದ್ರಾವತಿ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.