SUDDIKSHANA KANNADA NEWS/ DAVANAGERE/ DATE-25-06-2025
ದಾವಣಗೆರೆ: ಭದ್ರಾ ಡ್ಯಾಂ ಭದ್ರಾ ಅಚ್ಚುಕಟ್ಟು ಪ್ರದೇಶದ ಜೀವನಾಡಿ. ಆದ್ರೆ, ರಾಜ್ಯ ಸರ್ಕಾರವು ಜಲಾಶಯದ ಬಲದಂಡೆ ನಾಲೆ ಸೀಳಿ ಕಾಮಗಾರಿ ನಡೆಸುತ್ತಿರುವುದರ ವಿರುದ್ದ ಹಾಗೂ ಕಾಮಗಾರಿ ಸ್ಥಗಿತಕ್ಕಾಗಿ ಕೋರ್ಟ್ ಮೊರೆ ಹೋಗಲು ರೈತರು ಒಮ್ಮತದ ನಿರ್ಧಾರ ತೆಗೆದುಕೊಂಡಿದ್ದಾರೆ. ಕಾಮಗಾರಿ ಕೈಬಿಡುವಂತೆ ಒತ್ತಾಯಿಸಿ ಜೂನ್ 25ರಂದು ಸಿಎಂ ಹಾಗೂ ಜಲಸಂಪನ್ಮೂಲ ಸಚಿವರನ್ನು ಭೇಟಿ ಮಾಡಲಾಗುವುದು ಎಂದು ಹರಿಹರ ಶಾಸಕ ಬಿ. ಪಿ. ಹರೀಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಹಾಗೂ ಡಿಸಿಎಂ ಯಾವ ರೀತಿ ಸ್ಪಂದನೆ ಇರುತ್ತದೆ ಎಂಬುದನ್ನು ನೋಡಿಕೊಂಡು ಹಂತ ಹಂತವಾಗಿ ಹೋರಾಟ ನಡೆಸಲು ನಿರ್ಧರಿಸಿದ್ದೇವೆ. ಡಾ. ಜಿ. ಎಂ. ಸಿದ್ದೇಶ್ವರ ನೇತೃತ್ವದಲ್ಲಿ
ಸಿದ್ದರಾಮಯ್ಯ ಹಾಗೂ ಡಿ. ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡುತ್ತೇವೆ. ಭದ್ರಾ ಡ್ಯಾಂ ಅಧಿಕಾರಿಗಳಿಗೆ ಸಿಎಂ ಹಾಗೂ ಡಿಸಿಎಂ ಭೇಟಿಯವರೆಗೆ ಕಾಮಗಾರಿ ಸ್ಥಗಿತಗೊಳಿಸುವಂತೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ
ಎಂದು ತಿಳಿಸಿದರು.
ಭಾರತೀಯ ರೈತ ಒಕ್ಕೂಟ ಆಯೋಜಿಸುವ ಎಲ್ಲಾ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತೇವೆ. ಭದ್ರಾ ಡ್ಯಾಂ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ಯಾರೇ ಪ್ರತಿಭಟನೆ, ಬಂದ್ ನಡೆಸಿದರೂ ನಮ್ಮ ಸಹಕಾರ, ಬೆಂಬಲ ಇರುತ್ತದೆ. ಜಿಲ್ಲಾ ರೈತ
ಒಕ್ಕೂಟ ಆಯೋಜಿಸಿರುವ ಹೆದ್ದಾರಿ ತಡೆ, ದಾವಣಗೆರೆ ನಗರ ಬಂದ್ ಗೆ ಹೋಗುವುದಿಲ್ಲ. ಆದ್ರೆ, ಬೆಂಬಲ, ಸಹಮತ ಇದೆ. ಇದರಲ್ಲಿ ಯಾರೂ ರಾಜಕೀಯ ಮಾಡಲೇ ಹೋಗಬಾರದು. ದಾವಣಗೆರೆ ಜಿಲ್ಲೆಯ ರೈತರು, ಭದ್ರಾ ಅಚ್ಚುಕಟ್ಟು ಪ್ರದೇಶದ
ರೈತರು ಹಾಗೂ ಜನರ ವಿಚಾರ ಬಂದಾಗ ಎಲ್ಲರೂ ಒಂದಾಗುತ್ತೇವೆ ಎಂದು ಹೇಳಿದರು.
2020-22ರ ಅವಧಿಯಲ್ಲಿ ತರೀಕೆರೆ, ಅಜ್ಜಂಪುರ, ಹೊಸದುರ್ಗ, ಕಡೂರು ತಾಲೂಕುಗಳಿಗೆ ಕುಡಿಯುವ ನೀರಿನ ಯೋಜನೆ ರೂಪಿಸಿದ್ದೇ ಬಿಜೆಪಿ ಸರ್ಕಾರ. ಭದ್ರಾ ಹಿನ್ನೀರಿನ ಪ್ರದೇಶದಲ್ಲಿ ನೀರು ಎತ್ತಿ ಈ ತಾಲೂಕುಗಳ ಗ್ರಾಮಗಳಿಗೆ ಕುಡಿಯುವ
ನೀರು ಪೂರೈಕೆ ಮಾಡುವುದಾಗಿತ್ತು. ಎಲ್ಲಿಯೂ ಭದ್ರಾ ಬಲದಂಡೆ ನಾಲೆ ಸೀಳಿ ಯೋಜನೆ ಕಾರ್ಯಗತಗೊಳಿಸಬೇಕು ಎಂದಿರಲಿಲ್ಲ. ಅಧಿಕಾರಿಗಳು ಮಾಡಿದ ಯಡವಟ್ಟಿನಿಂದ ಈ ಕಾಮಗಾರಿ ನಡೆಸಲಾಗುತ್ತಿದೆ. ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಹಿತ ಕಾಪಾಡುವ ಸಲುವಾಗಿ ಎಂಥ ಹೋರಾಟಕ್ಕಾದರೂ ಸಿದ್ಧರಿದ್ದೇವೆ. ಮೂರು ಜಿಲ್ಲೆಗಳ ರೈತರು, ಜನಪ್ರತಿನಿಧಿಗಳ ಸಭೆಗೆ ಹೋಗಿ ಅನ್ಯಾಯದ ವಿರುದ್ಧ ನಾವು ಪ್ರತಿಭಟಿಸಿ ಬಂದಿದ್ದೇವೆ. ಸಭೆ ಬಹಿಷ್ಕರಿಸಿ ಆಕ್ರೋಶ ವ್ಯಕ್ತಪಡಿಸಿದ್ದೇವೆ ಎಂದು ತಿಳಿಸಿದರು.
ಬಂಗಾರಪ್ಪ ಅವರು ಸಿಎಂ ಆಗಿದ್ದಾಗ ಭದ್ರಾ ಬಲದಂಡೆ ನಾಲೆ ಒಡೆದು ಹೋಗಿತ್ತು. ಆಗ ಪರ್ಯಾಯ ವ್ಯವಸ್ಥೆ ಮಾಡಿ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಮತ್ತು ಜನರ ಜೀವ ಕಾಪಾಡಿದ್ದರು. ಆಗಲೇ ಬೇರೆ ಯೋಜನೆ ರೂಪಿಸಿ ನೀರು ಒದಗಿಸಿದ್ದರು. ಬಂಗಾರಪ್ಪರ ಈ ಕಾರ್ಯ ಎಂದಿಗೂ ಮರೆಯುವುದಿಲ್ಲ. ಒಳ್ಳೆಯ ಕೆಲಸ ಮಾಡಿದವರನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳುತ್ತೇವೆ. ಭದ್ರಾ ಡ್ಯಾಂನ ಬಲದಂಡೆ ನಾಲೆ ಸೀಳಿ ಕಾಮಗಾರಿ ನಡೆಸುತ್ತಿರುವುದರಿಂದ ಭದ್ರಾ ಡ್ಯಾಂಗೆ ಅಪಾಯವಾಗಿ ಆತಂಕ ಎದುರಾಗಿದೆ. ಮತ್ತೆ ನಾಲೆ ಒಡೆದು ಹೋದರೆ ಜನರಿಗೆ ನೀರು ಸಿಗುವುದಿಲ್ಲ. ಜುಲೈ 5ರಿಂದ ಭತ್ತ ಬೆಳೆಯಲು ರೈತರಿಗೆ ನೀರು ಹರಿಸಬೇಕು. ಆದ್ರೆ, ಕಾಮಗಾರಿ ನಡೆಸುತ್ತಿರುವುದರಿಂದ ಇದು ಸಾಧ್ಯವಾಗದು ಎಂದು ಅಭಿಪ್ರಾಯಪಟ್ಟರು.
ಗೋಷ್ಠಿಯಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರಾದ ಯಶವಂತ ರಾವ್ ಜಾಧವ್, ವೀರೇಶ್ ಹನಗವಾಡಿ, ಬಿ. ಎಸ್. ಜಗದೀಶ್, ಶಾಮನೂರು ಲಿಂಗರಾಜ್ ಮತ್ತಿತರರು ಹಾಜರಿದ್ದರು.