SUDDIKSHANA KANNADA NEWS/ DAVANAGERE/ DATE:04-01-2025
ದಾವಣಗೆರೆ: ಭದ್ರಾ ಅಚ್ಚುಕಟ್ಟುದಾರರಿಗೆ ಸಿಹಿ ಸುದ್ದಿ. ಬೆಳೆಗಳಿಗೆ ನೀರು ಹರಿಸಬೇಕೆಂಬ ರೈತರ ಬೇಡಿಕೆಗೆ ಅಸ್ತು ಎಂದಿರುವ ಶಿವಮೊಗ್ಗದ ಕಾಡಾ, ಜನವರಿ 4ರಿಂದ ಎಡದಂಡೆ ಹಾಗೂ ಜನವರಿಗೆ 8ರಿಂದ ಬಲದಂಡೆ ನಾಲೆಯಲ್ಲಿ ನೀರು ಹರಿಸಲು ತೀರ್ಮಾನಿಸಲಾಗಿದೆ.
ಶಿವಮೊಗ್ಗದ ಭದ್ರಾ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ ಈ ತೀರ್ಮಾನಕ್ಕೆ ಬರಲಾಗಿದೆ. ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಶಿವಮೊಗ್ಗದಲ್ಲಿ ಇರಲಿಲ್ಲ. ಅವರು ಅಮೆರಿಕಾ ಪ್ರವಾಸದಲ್ಲಿರುವ ಕಾರಣ ಆನ್ ಲೈನ್ ಮೂಲಕವೇ ಸಭೆಗೆ ಹಾಜರಾದರು. ಸಭೆಯಲ್ಲಿ ಕೆಲವೊಂದು ಮಾಹಿತಿ ಪಡೆದರು. ಭದ್ರಾ ಜಲಾಶಯದ ನೀರಿನ ಮಟ್ಟ ಸಂಗ್ರಹ, ರೈತರ ಬೇಡಿಕೆ ಸೇರಿದಂತೆ ಇತರೆ ವಿಚಾರಗಳ ಕುರಿತಂತೆ ಮಾಹಿತಿ ಪಡೆದುಕೊಂಡರು.
ಸಭೆ ಬಳಿಕ ಮಾತನಾಡಿದ ಕಾಡಾ ಅಧ್ಯಕ್ಷ ಅಂಶುಮನ್ ಅವರು ಭದ್ರಾ ಎಡದಂಡೆ ಹಾಗೂ ಬಲದಂಡೆ ನಾಲೆಯಲ್ಲಿ ನೀರು ಹರಿಸಲು ತೀರ್ಮಾನಿಸಲಾಗಿದೆ. ಭದ್ರಾ ಜಲಾಶಯದ ನೀರಿನ ಮಟ್ಟ ಹೆಚ್ಚಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಲಾಶಯ ತುಂಬಿ ತುಳುಕುತ್ತಿದೆ. 120 ದಿನಗಳ ಕಾಲ ನೀರು ಎರಡೂ ದಂಡೆಯಲ್ಲಿಯೂ ಹರಿಯಲಿದೆ. ನಾಲೆಗಳ ಮೂಲಕ ಒಟ್ಟು 32 ಟಿಎಂಸಿ ನೀರು ಬಿಡಲಾಗುತ್ತದೆ. ಎಡದಂಡೆ ನಾಲೆಗೆ 380 ಕ್ಯೂಸೆಕ್, ಬಲದಂಡೆಗೆ 2650 ಕ್ಯೂಸೆಕ್ ನೀರು ಹರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಪ್ರಸ್ತುತ ಜಲಾಶಯದಲ್ಲಿ 66.964 ಟಿಎಂಸಿ ನೀರು ಸಂಗ್ರಹವಿದೆ.
ಭದ್ರಾ ಡ್ಯಾಂ ನೀರಿನ ಲಭ್ಯತೆಯಿಂದ ದಾವಣಗೆರೆ ಜಿಲ್ಲೆಯಲ್ಲಿ ಸುಮಾರು 1 ಲಕ್ಷದ 60 ಸಾವಿರ ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. ಭದ್ರಾ ಡ್ಯಾಂ ಜಿಲ್ಲೆಯ ರೈತರ ಜೀವನಾಡಿ. ಪ್ರಸ್ತುತ ಬೇಸಿಗೆ ಹಂಗಾಮಿನಲ್ಲಿ ಭತ್ತ ಬೆಳೆಯುವ ಸಲುವಾಗಿ
ಕೊಳವೆಬಾವಿ ಮತ್ತಿತ್ತರ ನೀರಿನ ಸೌಲಭ್ಯ ಇರುವವರು ಈಗಾಗಲೇ ಸಸಿಮಡಿ ತಯಾರಿಸಿ, ಬೀಜ ಚೆಲ್ಲಿದ್ದಾರೆ. ಇನ್ನುಳಿದ ಕೆಲವು ರೈತರು ಸಸಿಮಡಿಗೆ ಬೀಜ ಚೆಲ್ಲಲು ಕಾಲುವೆಗಳಲ್ಲಿ ನೀರು ಹರಿಸುವುದನ್ನು ಕಾಯುತ್ತಿದ್ದಾರೆ. ಇನ್ನು ಕೆಲವು ರೈತರು
ಬೀಜ ಉಗ್ಗುವ ಮೂಲಕ ನೇರ ಬಿತ್ತನೆ ಮಾಡುವ ಚೆಲ್ಲುವ ಪದ್ಧತಿ ಅನುಸರಿಸುವವರೂ ನೀರು ಹರಿಸುವುದನ್ನು ಕಾಯುತ್ತಿದ್ದಾರೆ. ಆದ್ದರಿಂದ ಜನವರಿ 5ನೇ ತಾರೀಖಿನಿಂದ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಆಗ್ರಹಿಸುತ್ತೇವೆ. ಪ್ರಸ್ತುತ ಡ್ಯಾಂನಲ್ಲಿ ನೀರಿನ ಮಟ್ಟ 183 ಅಡಿ ಇದ್ದು, ಡ್ಯಾಂ ತುಂಬಿದೆ. ನೀರು ಬಿಡುವುದು ತಡವಾದರೆ ಬೇಸಿಗೆ ಹಂಗಾಮಿನಲ್ಲಿ ಭತ್ತದ ಬೆಳೆಗೆ ಅನಾನುಕೂಲವಾಗುತ್ತದೆ. ಆದ್ದರಿಂದ ತಕ್ಷಣ ಭದ್ರಾ ನೀರಾವರಿ ಸಲಹಾ ಸಮಿತಿ (ಐ.ಸಿ.ಸಿ) ಸಭೆ ಕರೆದು ನೀರು ಹರಿಸುವ ವೇಳಾಪಟ್ಟಿ ಪ್ರಕಟಿಸಬೇಕು ಎಂದು ಭಾರತೀಯ ರೈತ ಒಕ್ಕೂಟ ಆಗ್ರಹಿಸಿತ್ತು.